ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ
ಬೆಂಗಳೂರು, ಜನವರಿ 10: ಆದಾಯ ಮೀರಿದ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ ಆರು ಅಧಿಕಾರಿಗಳ ಮನೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಮಂಗಳವಾರ ( ಜನವರಿ 9) ಬೆಳಗ್ಗೆಯೇ ದಾಳಿ ನಡೆಸಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಬೆಂಗಳೂರು ಮತ್ತು ರಾಮನಗರ ಜಿಲ್ಲೆಯ ಹಲವೆಡೆ ದಾಳಿ ನಡೆಸಿದ್ದು, ಆರು ಸರ್ಕಾರಿ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಅಕ್ರಮ ಆಸ್ತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಸ್ಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ.ಎಲ್. ನಾಗರಾಜ್, ಲೋಕೋಪಯೋಗಿ ಇಲಾಖೆಯ ಕಟ್ಟಡಗಳ ವೃತ್ತದ ಸೂಪರಿಂಟೆಂಡಿಂಗ್ ಎಂಜಿನಿಯರ್ ಎನ್. ಸತೀಶ್ ಬಾಬು, ಕುಂದಾಣ ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಿ.ಎಂ. ಪದ್ಮನಾಭ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸೈಯದ್ ಮುನೀರ್, ಬಿಬಿಎಂಪಿ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಮಂಜೇಶ್ ಬಿ.ಹಾಗೂ ಚನ್ನೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎಸ್. ಸುರೇಶ್ ನಿವಾಸದ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

ಈ ಅಧಿಕಾರಿಗಳು 51.13 ಕೋಟಿ ಮೌಲ್ಯದ ಲೆಕ್ಕಕ್ಕೆ ಸಿಗದ ಆಸ್ತಿಯನ್ನು ಸಂಗ್ರಹಿಸಿರುವುದು ಶೋಧದಿಂದ ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯಿತಿ ಸದಸ್ಯ ಎಚ್‌ಎಸ್ ಸುರೇಶ್ ಅವರು 25.58 ಕೋಟಿಗಳಷ್ಟು ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಲೋಕಾಯುಕ್ತ ಹೇಳಿಕೆ ತಿಳಿಸಿದೆ.
ಚನ್ನೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎಸ್. ಸುರೇಶ್ ಅವರ ಮನೆಯಲ್ಲಿ ಪತ್ತೆಯಾದ ವಸ್ತುಗಳ ಕುರಿತು ಲೋಕಾಯುಕ್ತ ಪೊಲೀಸರು, 16 ನಿವೇಶನಗಳು, ಒಂದು ಮನೆ, 7.6 ಎಕರೆ ಕೃಷಿ ಭೂಮಿ, ₹ 11.97 ಲಕ್ಷ ನಗದು, ₹ 2.11 ಕೋಟಿ ಮೌಲ್ಯದ ಆಭರಣಗಳು, ₹ 2.07 ಕೋಟಿ ಮೌಲ್ಯದ ವಾಹನಗಳು ಇವೆ ಎಂದು ಹೇಳಿದರು.
ಮಂಜೇಶ್ ಸಂಬಂಧಿ ಸುರೇಂದ್ರ ಎಂಬುವವರಿಗೆ ಸೇರಿದ ಎರಡು ಮನೆಗಳ ಮೇಲೂ ದಾಳಿ ನಡೆದಿದೆ. ಮದ್ದೂರು ತಾಲ್ಲೂಕಿನ ಎಸ್.ಐ. ಕೋಡಿಹಳ್ಳಿಯಲ್ಲಿರುವ ಮಂಜೇಶ್ ಅಜ್ಜಿಯ ಮನೆಗೂ ಪೊಲೀಸರು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ ಪಿ ಸುಜಿತ್ ನೇತೃತ್ವದಲ್ಲಿ ಪೊಲೀಸರ ತಂಡ ಶೋಧ ಕಾರ್ಯ ಮುಂದುವರಿಸಿದೆ.
ಇನ್ನೂ ವಿಜಯನಗರದ ಜೆಸ್ಕಾಂ ಜನರಲ್ ಮ್ಯಾನೇಜರ್ ನಾಗರಾಜ್ ಬಳಿ ಬಳಿ ಮೂರು ನಿವೇಶನ, ಕೃಷಿ ಜಮೀನು ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ನಾಗರಾಜ್ ಕೆಲ ದಿನಗಳ ಹಿಂದೆ 7.50 ಲಕ್ಷ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದರು.
ವಿಜಯನಗರದಲ್ಲಿ ಜೆಸ್ಕಾಂ ಜನರಲ್ ಮ್ಯಾನೇಜರ್ ಆಗಿರುವ ನಾಗರಾಜ್ ಬೆಂಗಳೂರಿನಲ್ಲೂ ಮನೆ ಹೊಂದಿದ್ದು, ಅವರ ಮನೆ, ಕಚೇರಿ ಮೇಲೆ ದಾಳಿ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ, ಪಟ್ಟಣದ ಬಾಪೂಜಿ ನಗರದ ಬಸವೇಶ್ವರ ದೇಗುಲ ಹಿಂಭಾಗದಲ್ಲಿರೋ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ.
ನಾಗರಾಜ್‌ಗೆ ಸಂಬಂಧಿಸಿದ ಬಿಎಡ್ ಕಾಲೇಜ್, ಡಿ ಎಡ್ ಕಾಲೇಜು, ಐಟಿಐ ಕಾಲೇಜು, ಪಿಯು ಕಾಲೇಜ್‌ಗಳನ್ನು ನಡೆಸುತ್ತಿದ್ದಾರೆ ನಾಗರಾಜ್ ಕೂಡ್ಲಿಗಿ ತಾಲೂಕಿನಲ್ಲಿಯೇ ಎರಡು ಪೆಟ್ರೋಲ್ ಬಂಕ್ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಕೋಲಾರ ಮೂಲದ ಸತೀಶ್ ಬಾಬು ಲೋಕೋಪಯೋಗಿ ಇಲಾಖೆ ಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರದುರ್ಗದ ಜೆ ಸಿ ಆರ್ ಬಡಾವಣೆ ನಿವಾಸ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತಪಾಸಣೆ ನಡೆದಿದೆ. ಬೆಂಗಳೂರಿನ ಅಲ್ಲಾಲಸಂದ್ರ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ಅಪಾರ ಪ್ರಮಾಣದ ಚಿನ್ನ ಬೆಳ್ಳಿ ಆಭರಣ ಮತ್ತು ನಗದು ದೊರೆತಿದೆ.
ಇನ್ನೂ ಕುಂದಣ ಪಿಡಿಒ ಪದ್ಮನಾಭ ಅವರಿಗೆ ಸೇರಿದ ಮೂರು ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆ ಪರಿಶೀಲಿಸುತ್ತಿದ್ದಾರೆ. ಜೊತೆಗೆ ದಾಬಸ್ ಪೇಟೆಯಲ್ಲಿ ಗೋದಾಮು ಮತ್ತು ತುಮಕೂರಿನಲ್ಲಿಯೂ ಆಸ್ತಿ ಹೊಂದಿರುವುದು ಪತ್ತೆಯಾಗಿದೆ.












Click it and Unblock the Notifications