Karnataka Lok Sabha Elections: ರಾಷ್ಟ್ರೀಯ ಮುಖಂಡರು VS ರಾಜ್ಯ ನಾಯಕರು; ಗೆಲ್ಲೋದು ಯಾರು?
ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆಯಿಂದ ಮೊದಲು ಹಂತದ ಚುನಾವಣೆಗಳು ನಡೆಯಲಿವೆ. ಒಟ್ಟು ಏಳು ಹಂತದಲ್ಲಿ ಚುನಾವಣೆಗಳು ನಡೆಯಲಿದ್ದು, ರಾಷ್ಟ್ರೀಯ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸಿವೆ. ಈಗಾಗಲೇ ಎರಡು ಬಾರಿ ಕೇಂದ್ರದಲ್ಲಿ ಅಧಿಕಾರ ನಡೆಸಿರುವ ಬಿಜೆಪಿ ಮತ್ತೊಮ್ಮೆ ಗದ್ದುಗೆ ಏರಲು ಪ್ಲ್ಯಾನ್ ಮಾಡಿಕೊಂಡಿದೆ.
ಹತ್ತು ವರ್ಷಗಳಿಂದ ಅಧಿಕಾರ ಇಲ್ಲದೆ ಚಡಪಡಿಸುತ್ತಿರುವ ಕಾಂಗ್ರೆಸ್ ಸರ್ಕಾರ ರಚಿಸಲು ಕಸರತ್ತು ನಡೆಸಿದೆ. ಈ ನಿಟ್ಟಿನಲ್ಲಿ ಎರಡೂ ಪಕ್ಷಗಳು ಸಹ ಭರ್ಜರಿ ತಯಾರಿ ನಡೆಸಿವೆ. ಕರ್ನಾಟಕದಲ್ಲೂ ಚುನಾವಣಾ ಕಾವು ಏರುತ್ತಲೇ ಇದೆ. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳ ಮುಖಂಡರು ಹಾಗೂ ರಾಜ್ಯ ಪಕ್ಷದ ಮುಖಂಡರ ಕಾಳಗದಂತೆ ಈ ಚುನಾವಣೆ ಕಾಣಿಸಿಕೊಳ್ಳುತ್ತಿದೆ.

ಕರ್ನಾಟಕದಲ್ಲಿ ಕಳೆದ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಜೆಪಿ, 28 ಲೋಕಸಭಾ ಕ್ಷೇತ್ರಗಳಲ್ಲಿ 25ರಲ್ಲಿ ಗೆಲುವು ದಾಖಲಿಸಿತ್ತು. 2019ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಈ ಎರಡೂ ಪಕ್ಷಗಳು ಸಹ ತಲಾ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದವು. ಈಗ ರಾಜಕೀಯ ಬದಲಾಗಿದೆ. ಅಂದು ಎದುರಾಳಿಗಳಾಗಿದ್ದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಈ ಬಾರಿ ಒಟ್ಟಾಗಿ ಸ್ಪರ್ಧೆ ನಡೆಸುತ್ತಿವೆ. ಹೀಗಾಗಿ ಈ ಚುನಾವಣೆಯನ್ನು ರಾಜ್ಯ ನಾಯಕರು ವರ್ಸಸ್ ರಾಷ್ಟ್ರೀಯ ನಾಯಕರ ನಡುವಿನ ಫೈಟ್ ಎಂದೇ ಬಿಂಬಿತವಾಗುತ್ತದೆ.
ರಾಷ್ಟ್ರೀಯ ನಾಯಕರು
ಬಿಜೆಪಿ ಪಕ್ಷ ತನ್ನ ಪ್ರಚಾರ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಗೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ್ ಅವರನ್ನು ಬಳಸುತ್ತಿದೆ. ಈ ಜೋಡಿಯನ್ನು ಬಿಜೆಪಿ ತನ್ನ ಸ್ಟಾರ್ ಪ್ರಚಾರಕರನ್ನಾಗಿ ಹೆಚ್ಚಿಗೆ ಬಳಸುತ್ತಿದೆ. ಇದರಿಂದ ಜನರನ್ನು ತಮ್ಮತ್ತ ಸೆಳೆಯಲು ಮೈತ್ರಿ ಪಕ್ಷಗಳು ಪ್ಲ್ಯಾನ್ ಮಾಡಿಕೊಂಡಿವೆ. ಮೋದಿ ಅಲೆ, ಮಾಜಿ ಪ್ರಧಾನಿ ಎಚ್‌ಡಿಡಿ ಪ್ರಭಾವ ಒಕ್ಕಲಿಗ ಸಮುದಾಯದ ಮೇಲೆ ಬೀಳಬಹುದು. ರಾಜ್ಯದಲ್ಲಿ ನಡೆಯುವ ಮೊದಲ ಹಂತದ 14 ಕ್ಷೇತ್ರದ ಪೈಕಿ 11 ಕ್ಷೇತ್ರಗಳಲ್ಲಿ ಈ ಜೋಡಿ ವರ್ಚಸ್ಸು ಕೆಲಸ ಮಾಡಲಿದೆ ಎಂದು ಲೆಕ್ಕಾ ಹಾಕಲಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ತಲೆ ಬಿಸಿ ಉಂಟಾಗಿದೆ.

ರಾಜ್ಯ ನಾಯಕರ ಪ್ರಭಾವ
ರಾಜ್ಯದಲ್ಲಿ ಭರ್ಜರಿ ಜಯ ಸಾಧಿಸಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ 20 ವರ್ಷಗಳಲ್ಲಿ ಸಾಧಿಸಿದ ಕೆಲಸವನ್ನು ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ರಾಜ್ಯ ಸರ್ಕಾರ ಜನರಿಗೆ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನೇ ನೆಚ್ಚಿಕೊಂಡು ಈ ಪಕ್ಷ ಜನರ ಬಳಿಗೆ ಹೋಗಲಿದೆ. ಹಳೆ ಮೈಸೂರು ಭಾಗದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೋಡಿ ಎದುರಾಳಿ ಪಕ್ಷದ ಟೆನ್ಷನ್ ಹೆಚ್ಚು ಮಾಡಿದೆ.
ಕಳೆದ ಚುನಾವಣೆಯಲ್ಲಿ ಅಹಿಂದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಜೈ ಎಂದಿದ್ದರು. ಈ ಫ್ಯಾಕ್ಟರ್ ಈ ಬಾರಿಯೂ ವರ್ಕ್‌ಔಟ್ ಆಗುವ ಸಾಧ್ಯತೆ ಕಾಣುತ್ತಿದೆ. ಒಕ್ಕಲಿಗ ಮುಖಂಡ ಡಿಕೆ ಶಿವಕುಮಾರ್ ಸಹ ತಮ್ಮ ಪ್ರಭಾವವನ್ನು ಬಳಸಿ ಮತದಾರರನ್ನು ಸೆಳೆಯಲಿದ್ದಾರೆ. ಈ ಬಾರಿ ಕಾಂಗ್ರೆಸ್ ಡಬಲ್ ಡಿಜಿಟ್ ಸಾಧನೆಯನ್ನು ಮಾಡುವ ಉತ್ಸಾಹದಲ್ಲಿದೆ. ಈ ಮೂಲಕ ಕಳೆದ ಎರಡು ದಶಕದಲ್ಲಿ ಮಾಡದ ಸಾಧನೆಯನ್ನು ಮಾಡಿ ತನ್ನ ಪ್ರೊಗ್ರೆಸ್ ಕಾರ್ಡ್‌ನ್ನು ಹೈಕಮಾಂಡ್ ಮುಂದೆ ಇಡುವ ಇರಾದೆ ರಾಜ್ಯ ನಾಯಕರದ್ದಾಗಿದೆ.












Click it and Unblock the Notifications