ಏ 27 ರಾತ್ರಿಯಿಂದ ಲಾಕ್‌ಡೌನ್: ಗೊಂದಲದ 2 ನಿರ್ಧಾರಗಳು
ಬೆಂಗಳೂರು, ಏಪ್ರಿಲ್ 27: ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಕೊರೊನಾ ನಿಯಂತ್ರಿಸಲು ಯಡಿಯೂರಪ್ಪ ಕೊನೆಯ ಅಸ್ತ್ರವಾಗಿ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಏಪ್ರಿಲ್ 27ರ ರಾತ್ರಿ ಒಂಬತ್ತು ಗಂಟೆಯಿಂದ ಮುಂದಿನ ಹದಿನಾಲ್ಕು ದಿನಗಳ ವರೆಗೆ ಇದು ಜಾರಿಯಲ್ಲಿರುತ್ತದೆ.
ಅದಾದ ನಂತರವೂ ಕೊರೊನಾ ತಹಬಂದಿಗೆ ಬರದೇ ಇದ್ದಲ್ಲಿ ಲಾಕ್‌ಡೌನ್ ಮುಂದುವರಿಸುವುದಾಗಿ ಹೇಳಿರುವ ಸಿಎಂ, ಸಾರ್ವಜನಿಕರಿಗೆ ಸಹಕರಿಸುವಂತೆ ಕೋರಿದ್ದಾರೆ. ಈ ಅವಧಿಯಲ್ಲಿನ ವಿಸ್ಕೃತ ಮಾರ್ಗಸೂಚಿ ಇನ್ನಷ್ಟೇ ಹೊರಬರಬೇಕಾಗಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವುದಿಲ್ಲ ಎಂದು ಸ್ಪಷ್ಟವಾಗಿ ಬಿಎಸ್ವೈ ಹೇಳಿದ್ದಾರೆ.
ಗಾರ್ಮೆಂಟ್ಸ್ ನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಬರುವುದು ಸಾಧ್ಯವಾಗುವುದಿಲ್ಲ ಎಂದು ಅದನ್ನು ಹೊರತು ಪಡಿಸಿ ಇತರ ಕೈಗಾರಿಕೆಗಳಿಗೆ ಸರಕಾರ ಅನುಮತಿ ನೀಡಿರುವುದು ಒಂದು ಕಡೆ. ಇನ್ನೊಂದು ಕಡೆ, ಮೇ ಒಂದರಿಂದ ಬಹುನಿರೀಕ್ಷಿತ 18+ ವಯಸ್ಸು ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಆರಂಭವಾಗಲಿರುವುದು.

ಆದರೆ, ಇಲ್ಲಿ ಎದುರಾಗುವ ಪ್ರಶ್ನೆಯೆಂದರೆ ಅನುಮತಿ ನೀಡಲಾಗಿರುವ ಕೈಗಾರಿಕೆಯ ಸಿಬ್ಬಂದಿಗಳು ತಮ್ಮ ಮನೆಯಿಂದ ಫ್ಯಾಕ್ಟರಿಗೆ ತಲುಪುವುದು ಹೇಗೆ ಎನ್ನುವುದು. ಹೆಚ್ಚಿನ ಫ್ಯಾಕ್ಟರಿಗಳು ಪೀಣ್ಯ, ಬೊಮ್ಮಸಂದ್ರ, ಜಿಗಣಿ, ಅತ್ತಿಬೆಲೆ, ಬಿಡದಿ ಮುಂತಾದ ಕಡೆ ಇರುವಂತದ್ದು.
ಹೀಗಿರುವಾಗ, ಬೆಂಗಳೂರಿನ ಮತ್ತೊಂದು ಭಾಗದಲ್ಲಿರುವ ನೌಕರರು, ಸಾರಿಗೆ ವ್ಯವಸ್ಥೆಯನ್ನೇ ನಂಬಿಕೊಂಡು ಕೆಲಸಕ್ಕೆ ಹೋಗುವಂತಿದ್ದರೆ ಅಥವಾ ಕಂಪೆನಿಯ ಸಾರಿಗೆ ವ್ಯವಸ್ಥೆಯನ್ನು ನಂಬಿಕೊಂಡಿದ್ದ ಪಕ್ಷದಲ್ಲಿ ಇಂತಹ ನೌಕರರು ಏನು ಮಾಡಬೇಕು ಎನ್ನುವುದಿಲ್ಲಿ ಪ್ರಶ್ನೆ. ಕೆಲಸಕ್ಕೆ ಹಾಜರಾಗಲಿಲ್ಲ ಎಂದು ಫ್ಯಾಕ್ಟರಿಯವರು ನೌಕರರನ್ನು ತೆಗೆದು ಹಾಕಿದರೆ ಇವರಿಗೆ ಪರಿಹಾರ ನೀಡುವವರಾರು?
ಇನ್ನೊಂದು, ಮೇ ಒಂದರಿಂದ ಲಸಿಕೆ ಅಭಿಯಾನ ಆರಂಭವಾಗಲಿದೆ. ಹೊರಗಡೆ ಲಾಕ್‌ಡೌನ್ ಇದೆ. ಬಸ್, ಆಟೋ, ಕ್ಯಾಬ್ ಸಂಚಾರಕ್ಕೆ ನಿರ್ಬಂಧವಿದೆ. ಇದನ್ನೇ ನಂಬಿಕೊಂಡವರು ತಮ್ಮ ಹತ್ತಿರದ ಲಸಿಕೆ ಕೇಂದ್ರಕ್ಕೆ ಹೋಗುವುದು ಹೇಗೆ? ಸ್ವಂತ ವಾಹನದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹೋಗುವವರನ್ನು ಪೊಲೀಸರು ತಡೆದರೆ ಏನು ಮಾಡಬೇಕು? ಹಾಗಾಗಿ, ಈ ವಿಚಾರದಲ್ಲಿ ಸರಕಾರ ಗಮನ ಹರಿಸುವುದು ಸೂಕ್ತ.












Click it and Unblock the Notifications