ಸದನದಲ್ಲಿ ಗ್ಯಾರಂಟಿ ಗದ್ದಲ ಕೋಲಾಹಲ! ಅಧಿವೇಶನವು ಜುಲೈ 21ರವರೆಗೆ ಮುಂದುವರಿಕೆ: ಸಭಾಧ್ಯಕ್ಷ ಹೇಳಿದ್ದೇನು?
ಬೆಂಗಳೂರು, ಜುಲೈ 05: ರಾಜ್ಯ ವಿಧಾನಮಂಡಲ ಅಧಿವೇಶನ ಜುಲೈ 3 ರಿಂದ ಆರಂಭವಾಗಿದ್ದು, ಜುಲೈ 14 ರವರೆಗೆ ಅಧಿವೇಶನ ನಿಗದಿಯಾಗಿತ್ತು. ಈಗಾಗಲೇ ಎರಡು ದಿನಗಳ ನಡೆದ ಅಧಿವೇಶನದಲ್ಲಿ ಸೋಮವಾರ ರಾಜ್ಯಪಾಲ ಭಾಷಣ ನಡೆದಿದ್ದು, ಮಂಗಳವಾರ ಸರಕಾರ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ.
ಇತ್ತ ವಿಧಾನ ಮಂಡಲದ ಅಧಿವೇಶನವು ಜುಲೈ 21 ರವರೆಗೆ ಮುಂದುವರಿಸಲಾಗುವುದು ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ತಿಳಿಸಿದರು. ಮಂಗಳವಾರ ವಿಧಾನಸಭೆಯ ಕಲಾಪದ ಮಧ್ಯೆ ಸಭಾಧ್ಯಕ್ಷರು ಜುಲೈ 5 ರಂದು ಈಗಾಗಲೆ ಸ್ವೀಕರಿಸಿದ ವಿಧೇಯಕಗಳ ಮಂಡನೆ ಮಂಡಿಸುವುದು, ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಚರ್ಚೆ, ಜುಲೈ 6 ರಂದು ಬೆಳಿಗ್ಗೆ ಮುಖ್ಯಮಂತ್ರಿಗಳು ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆಗೆ ಉತ್ತರ ನೀಡಲಿದ್ದಾರೆ.

ಇನ್ನೂ ಜುಲೈ 7ರಂದು ಮುಖ್ಯಮಂತ್ರಿಗಳು 2023-24ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಜುಲೈ 10ರಿಂದ 19ರವೆಗೆ ಇಲಾಖಾವಾರು ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಗುವುದು. ಜುಲೈ 20ರಂದು ಹಣಕಾಸು ವಿಧೇಯಕಗಳ ಅಂಗೀಕಾರವಿರಲಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಜುಲೈ 3 ರಿಂದ 14 ರವರೆಗೂ ನಿಗದಿಯಾಗಿದ್ದ ಅಧಿವೇಶನವನ್ನ ಜುಲೈ 21 ರವರೆಗೂ ಮುಂದುರೆಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಸರ್ಕಾರವನ್ನ ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿದ್ದು, ಮಂಗಳವಾರ ನಡೆದ ಸದನದಲ್ಲಿ ಗ್ಯಾರಂಟಿ ಗೊಂದಲ ವಿಚಾರವಾಗಿ ಚರ್ಚಿಸಲು ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಮಂಗಳವಾರ ನಡೆದ ಸದನದಲ್ಲಿ ಗ್ಯಾರಂಟಿ' ಯೋಜನೆಗಳ ಅನುಷ್ಠಾನದಲ್ಲಿನ ಗೊಂದಲದ ನಡುವೆ ಸದನವನ್ನ ಮುಂದೂಡಲಾಯಿತು.












Click it and Unblock the Notifications