ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾದ ರಾಜಕಾರಣಿ ಎಸ್.ಎಲ್. ಧರ್ಮೇಗೌಡ?
ಬೆಂಗಳೂರು, ಡಿ. 29: ವಂಶಪಾರಂಪರಿಕವಾಗಿ ಬಂದ ರಾಜಕೀಯ ಸ್ಥಾನಮಾನ, ತಂದೆಯೂ ಶಾಸಕರಾಗಿದ್ದರು. ಜೊತೆಗೆ ಸಹೋದರ ಕೂಡ ವಿಧಾನ ಪರಿಷತ್ ಸದಸ್ಯ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಭಾವಿ ರಾಜಕೀಯ ಕುಟುಂಬ. ಬಾಲ್ಯದಿಂದಲೂ ರಾಜಕೀಯ, ರಾಜಕೀಯ ತಂತ್ರಗಾರಿಕೆಯನ್ನು ನೋಡಿ ಬೆಳೆದವರು. ಆರ್ಥಿಕವಾಗಿಯೂ ಸದೃಢವಾಗಿದ್ದವರು. ಆದರೂ ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ? ಎಂಬ ಎಂಬ ಚರ್ಚೆ ಇದೀಗ ಇಡೀ ರಾಜ್ಯಾದ್ಯಂತ ನಡೆಯುತ್ತಿದೆ.
ರಾಜಕಾರಣಿಗಳ ಭ್ರಷ್ಟಾಚಾರ, ಅಸಡ್ಡಾಳ ವರ್ತನೆ ಮುಂತಾದವುಗಳನ್ನು ನೋಡಿದ್ದ ಜನರಿಗೆ ಪ್ರಬುದ್ಧ ರಾಜಕಾರಣೀಯ ಆತ್ಮಹತ್ಯೆ ನಿಜಕ್ಕೂ ದಿಗ್ಬ್ರಮೆ ಮೂಡಿಸಿದೆ. ಜೊತೆಗೆ ರಾಜಕಾರಣಿಗಳ ಕುರಿತು ಬೇರೆ ರೀತಿಯಲ್ಲಿಯೇ ಚರ್ಚೆ ಮಾಡುವಂತೆ ಮಾಡಿದೆ. ಅಷ್ಟಕ್ಕೂ ಅದೊಂದು ಕಾರಣ ಸಾಕಾಯ್ತಾ ವಿಧಾನ ಪರಿಷತ್ ಉಪ ಸಭಾಪತಿ, ಜೆಡಿಎಸ್ ಮುಖಂಡ ಎಸ್.ಎಲ್. ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಳ್ಳಲು? ಎಂಬ ಚರ್ಚೆಗಳು ಇದೀಗ ರಾಜಕಾರಣಿಗಳಲ್ಲಿಯೇ ನಡೆಯುತ್ತಿದೆ.

ಮರ್ಯಾದೆಗೆ ಅಂಜಿದರಾ?
ಮೂರು ಬಿಟ್ಟವರು ರಾಜಕೀಯಕ್ಕೆ ಸೇರುತ್ತಾರೆ ಎಂದು ರಾಜಕಾರಣಿಗಳನ್ನು, ರಾಜಕೀಯವನ್ನು ದ್ವೇಷಿಸುವವರು ಹೇಳುತ್ತಲೆ ಇರುತ್ತಾರೆ. ಹಾಗೆ ಹೇಳುವವರ ಮಾತಿಗೆ ಪುಷ್ಟಿ ಬರುವಂತೆ ಹಿರಿಯ ಹಾಗೂ ಪ್ರಬುದ್ದ ರಾಜಕಾರಣಿ ಎಸ್.ಎಲ್. ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ಕಾರಣವೇನು ಇರಬಹುದು ಎಂಬುದನ್ನು ವಿಶ್ಲೇಷಣೆ ಬೆಳಗ್ಗೆಯಿಂದಲೇ ನಡೆಯುತ್ತಿದೆ. ಅದರಲ್ಲಿ ಪ್ರಮುಖವಾಗಿ ಕಂಡು ಬರುತ್ತಿರುವುದು 'ಮರ್ಯಾದೆ'!
ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಆತ್ಮಹತ್ಯೆ!
ಹೌದು, ಮರ್ಯಾದೆಗೆ ಹೆದರಿ ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಬಹುತೇಕ ರಾಜಕಾರಣಿಗಳು ಅಭಿಪ್ರಾಯ ಪಟ್ಟಿದ್ದಾರೆ. ಇಂಥದ್ದೊಂದು ಕಠಿಣ ತೀರ್ಮಾನವನ್ನು ಕೈಗೊಳ್ಳುವಷ್ಟು ನೋವು ಅವರನ್ನು ಕಳೆದ ಕೆಲವು ದಿನಗಳಿಂದ ಕಾಡುತ್ತಿತ್ತು ಎಂಬುದು ಅವರ ಮಾತಿನಿಂದಲೇ ಬಹಿರಂಗವಾಗಿದೆ.

ಪರಿಷತ್‌ನಲ್ಲಿ ನಡೆದಿದ್ದ ಹೈಡ್ರಾಮಾ
ವಿಧಾನ ಪರಿಷತ್ ಸಭಾಪತಿಗಳನ್ನು ಪದಚ್ಯುತಗೊಳಿಸುವ ನಿಟ್ಟಿನಲ್ಲಿ ಕಳೆದ ಡಿಸೆಂಬರ್ 15 ರಂದು ಪರಿಷತ್‌ನಲ್ಲಿ ಹೈಡ್ರಾಮಾ ನಡೆದಿತ್ತು. ಬಿಜೆಪಿ ಸದಸ್ಯರು ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡರನ್ನು ಸಭಾಪತಿಗಳ ಪೀಠದಿಂದ ಅಕ್ಷರಶಃ ಎಳೆದು ಹಾಕಿದ್ದರು. ದಶಕಗಳಿಂದ ಪ್ರಬುದ್ಧ ರಾಜಕಾರಣ ಮಾಡಿಕೊಂಡು ಬಂದಿದ್ದ ಧರ್ಮೇಗೌಡರು ಅಂಧಿನ ಘಟನೆಯಿಂದ ತೀರಾ ನೊಂಡಿದ್ದರು. ಇದೇ ವಿಚಾರವನ್ನು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರಲ್ಲಿಯೂ ಹೇಳಿಕೊಂಡಿದ್ದರಂತೆ.
ಜೊತೆಗೆ ಸಮಕಾಲೀನ ಹಲವು ರಾಜಕಾರಣಿಗಳೊಂದಿಗೂ ಪರಿಷತ್ ಹೈಡ್ರಾಮಾ ಹಾಗೂ ಅದರಲ್ಲಿ ತಮ್ಮನ್ನು ಬಳಸಿಕೊಂಡ ರೀತಿಯಿಂದ ತುಂಬ ನೊಂದಿದ್ದರು ಎಂದು ಅವರ ಆಪ್ತ ವಲಯಗಳಿಂದ ತಿಳಿದು ಬಂದಿದೆ. ಹೀಗಾಗಿ ಪರಿಷತ್ ಘಟನೆಯೇ ಅವರ ಸಾವಿಗೆ ಕಾರಣವಾಯಿತಾ? ಎಂಬ ಚರ್ಚೆಗಳು ಇದೀಗ ಆತಂಕಕ್ಕೆ ಕಾರಣವಾಗಿದೆ.

ಆರ್ಥಿಕವಾಗಿ ಅತ್ಯಂತ ಸದೃಢ
ಎಸ್.ಎಲ್. ಧರ್ಮೇಗೌಡ ಅವರು ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಸಲ್ಲಿಸಿರುವ ಅಫಿಡವಿಟ್ ನೋಡಿ ಹೇಳುವುದಾದರೆ ಅವರು ಆರ್ಥಿಕವಾಗಿ ಅತ್ಯಂತ ಸದೃಢವಾಗಿರುವುದು ಕಂಡು ಬರುತ್ತದೆ. ಚುನಾವಣೆ ಸಮಯದಲ್ಲಿ ಧರ್ಮೇಗೌಡರು ಸಲ್ಲಿಸಿದ್ದ ಅಫಿಡವಿಟ್ ಆಧರಿಸಿ ಮಾಯ್‌ನೇತಾ.ಇನ್ಫೊ ವೆಬ್‌ಸೈಟ್ ಹೇಳುವಂತೆ ಸುಮಾರು 12 ಕೋಟಿ ರೂ. ಮೌಲ್ಯದ ಕೃಷಿ, ಕೃಷಿಯೇತರ ಭೂಮಿ ಹೊಂದಿದ್ದಾರೆ. ಜೊತೆಗೆ ಬಿಎಂಡಬ್ಲ್ಯೂ X3, ಇನ್ನೋವಾ, ಸ್ಕೋಡಾ, ಒಂದು ಟ್ರ್ಯಾಕ್ಟರ್, ಮಹೀಂದ್ರಾ ಪಿಕ್ಅಪ್ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪ್ರಯಾಣಿಸಿದ್ದ ಮೆಚ್ಚುಗೆಯ ಸ್ಯಾಂಟ್ರೋ ಕಾರ್ ಸೇರಿದಂತೆ ಒಂದು ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಾಹನಗಳನ್ನು ಹೊಂದಿದ್ದರು.
ಪಂಚಾಯಿತಿಯಿಂದ ಪರಿಷತ್ ತನಕ; ಎಸ್. ಎಲ್. ಧರ್ಮೇಗೌಡ ಪರಿಚಯ
ಜೊತೆಗೆ ವಿವಿಧ ಬ್ಯಾಂಕ್‌ಗಳಲ್ಲಿ ಒಂದು ಕೋಟಿ ರೂ. ಠೇವಣಿ ಹಾಗೂ 2.64 ಕೋಟಿ ರೂ. ಮೌಲ್ಯದ ಫ್ಲ್ಯಾಟ್ ಹಾಗೂ ನಿವೇಶನಗಳನ್ನು ಹೊಂದಿದ್ದರು. ಯಾವುದೇ ಅಪರಾಧ ಪ್ರಕರಣಗಳ ಹಿನ್ನಲೆಯುಳ್ಳದ ಕ್ಲೀಟ್ ರಾಜಕಾರಣಿಯಾಗಿದ್ದರು ಧರ್ಮೇಗೌಡರು. ಇವುಗಳೊಂದಿಗೆ ವಿವಿಧ ಬ್ಯಾಂಕ್‌ಗಳಲ್ಲಿ 36 ಲಕ್ಷ ರೂ. ಸಾಲ ಕೂಡ ಧರ್ಮೇಗೌಡರ ಹೆಸರಿನಲ್ಲಿತ್ತು. ಯಾವುದೇ ತೆರಿಗೆಗಳನ್ನು ಉಳಿಸಿಕೊಂಡಿರಲಿಲ್ಲ. ಹೀಗಾಗಿ ಉಪ ಸಭಾಪತಿ ಧರ್ಮೇಗೌಡರು ಆರ್ಥಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ವಿಶ್ಲೇಷಣೆ ಮಾಡಲಾಗಿದೆ.

ಡೆತ್‌ನೋಟ್‌ನಲ್ಲಿ ಏನಿದೆ?
ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು ಪೊಲೀಸರ ವಶದಲ್ಲಿದೆ. ಅತ್ಯಂತ ಹೈಪ್ರೊಫೈಲ್ ಪ್ರಕರಣ ಇದಾಗಿದ್ದರಿಂದ ಡೆತ್‌ನೋಟ್ ಕುರಿತು ಯಾವುದೇ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ ವಿಧಾನ ಪರಿಷತ್‌ನಲ್ಲಿ ನಡೆದಿದ್ದ ಘಟನೆಯೆ ಧರ್ಮೇಗೌಡರ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ.
ಹೀಗಾಗಿ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ಈ ಹಿಂದೆಯೆ ಹೇಳಿದಂತೆ ಜಾಣರ ಮನೆಯಾಗಿದ್ದ ಮೇಲ್ಮನೆ ಇದೀಗ ಇದೀಗ ಕೋಣರ ಮನೆಯಾಗಿದೆ ಎಂದಿದ್ದರು. ಜೊತೆಗೆ ವಿಧಾನ ಪರಿಷತ್ ವಿಸರ್ಜನೆ ಮಾಡುವ ಅಧಿಕಾರ ಸಿಎಂ ಯಡಿಯೂರಪ್ಪ ಅವರ ಕೈಯಲ್ಲಿದೆ ಎಂದಿದ್ದರು. ವರ್ಷಕ್ಕೆ ಸುಮಾರು 350-400 ಕೋಟಿ ರೂ.ಗಳು ವಿಧಾನ ಪರಿಷತ್ ನಿರ್ವಹಣೆಗೆ ವ್ಯಯಿಸಲಾಗುತ್ತಿದೆ. ಜೊತೆಗೆ ಇದೀಗ ಇಂತಹ ಅಘಾತಕಾರಿ ಘಟನೆಗಳು ನಡೆದಿರುವುದರಿಂದ ವಿಧಾನ ಪರಿಷತ್ ಅಗತ್ಯತೆಯನ್ನು ಎಲ್ಲರೂ ಪ್ರಶ್ನಿಸುವಂತಾಗಿದೆ.