JDS Election Manifesto: ಕನ್ನಡಿಗರ ಅಸ್ಮಿತೆ, ನಂದಿನಿ ಬ್ರಾಂಡ್ ಉಳಿಸಲು ಪಣ
ಬೆಂಗಳೂರು, ಏಪ್ರಿಲ್ 27: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರಕ್ಕೆ ಜಲಧಾರೆ ಹೆಸರಿನಲ್ಲಿ ಭರವಸೆಗಳನ್ನು ನೀಡಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಕಿತ್ತೊಗೆಯಿರಿ ಅಮುಲ್ - ಉಳಿಸಿ ನಂದಿನಿ:
ಕೆಎಂಎಫ್ ಸಂಸ್ಥೆಯನ್ನು ಗುಜರಾತ್‌ನ ಅಮುಲ್ ಸಂಸ್ಥೆಯೊಂದಿಗೆ ವಿಲೀನ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಣ್ಣುಮುಚ್ಚಾಲೆ ಆಟದೊಂದಿಗೆ ಹುನ್ನಾರ ನಡೆಸಿದೆ.

ಅಮುಲ್ ಐಸ್ ಕ್ರೀಂ ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದು ಅಮುಲ್ ಸಂಸ್ಥೆ ರಾಜ್ಯದಲ್ಲಿ ಇದ್ದಕ್ಕಿದ್ದಂತೆ ಹಾಲು ಮತ್ತು ಮೊಸರನ್ನು ಮಾರುಕಟ್ಟೆಗೆ ಇಳಿಸಿ ಷಡ್ಯಂತ್ರದಿಂದ ಮಾರುಕಟ್ಟೆ ಪ್ರವೇಶಿಸಿದೆ. ಸಹಕಾರಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳ ಮಧ್ಯೆ ಅನಾರೋಗ್ಯಕರ ಸ್ಪರ್ಧೆಯಾಗುವುದು ಸಹಕಾರಿ ಸಂಘಗಳ ಸದಸ್ಯರ ಹಿತಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ, ಇಂತಹ ಕುತಂತ್ರಕ್ಕೆ ಮಣಿಯದೆ ಕಿತ್ತೊಗೆಯಿರಿ ಅಮುಲ್ ಉಳಿಸಿ ನಂದಿನಿ ಅಭಿಯಾನ ಪ್ರತಿಯೊಬ್ಬ ಕನ್ನಡಿಗನು ವಿವಿಧ ರೀತಿಯ ರಂಗಗಳಲ್ಲಿ ಪ್ರಾರಂಭಿಸಬೇಕು. ಕನ್ನಡಿಗರ ಅಸ್ಮಿತೆ ಮತ್ತು ನಂದಿನಿ ಬ್ರಾಂಡ್ ಉಳಿಸಲು ಜಾತ್ಯತೀತ ಜನತಾದಳ ಕಟಿಬದ್ಧವಾಗಿದೆ.
ಕೋವಿಡ್ ನಂತರ ಮತ್ತು ಅತಿ ಮಳೆಯಿಂದ ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಕರ್ನಾಟಕ ಮಹಾ ಮಂಡಳಿಯ (ಕೆ.ಎಂ.ಎಫ್) ವ್ಯಾಪ್ತಿಯ 15 ಜಿಲ್ಲಾ ಹಾಲು ಒಕ್ಕೂಟಗಳಿಂದ ಸಂಗ್ರಹಣವಾಗುತ್ತಿದ್ದ 95 ಲಕ್ಷ ಲೀಟರ್ ಹಾಲು 82 ಲಕ್ಷ ಲೀಟರ್‌ಗೆ ಇಳಿದಿದೆ. ಹೀಗಾಗಿ ರಾಜ್ಯದ ರೈತರಿಗೆ ಬಲ ತುಂಬಲಾಗುವುದು ಎಂದು ತಿಳಿಸಿದೆ.
ಜಿಲ್ಲಾ ಹಾಲು ಒಕ್ಕೂಟಗಳ ಹಾಲು ಉತ್ಪಾದಕರಿಗೆ ಸರ್ಕಾರ ನೀಡುವ ಪ್ರೋತ್ಸಾಹಧನ 5 ರೂ. ಸೇರಿ ಪ್ರತಿ ಲೀಟರ್‌ಗೆ ರೂ. 34 ನೀಡುತ್ತಿದ್ದೇವೆ. ಈ ಪ್ರೋತ್ಸಾಹ ಧನ 10 ಲಕ್ಷ ಹಾಲು ಉತ್ಪಾದಕರಿಗೆ ಮತ್ತು 40 ಲಕ್ಷ ಗ್ರಾಹಕರಿಗೆ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ 2 ರೂ. ಹೆಚ್ಚುವರಿ ಸಹಾಯಧನ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚುವರಿ ದರ ನೀಡಿ ನಿಗದಿಪಡಿಸಲು ಅನುವು ಮಾಡಿಕೊಡಲಾಗುವುದು.

ರೈತರ ಬೆಳೆಗಳಿಗೆ ಯಾತರಿ ಬೆಂಬಲ ಬೆಲೆ:
ರಾಜ್ಯದಲ್ಲಿ 4234 ಪಶು ಚಿಕಿತ್ಸಾಲಯಗಳು ಇವೆ. ಈ ಪೈಕಿ 1000 ಪಶು ಚಿಕಿತ್ಸಾಲಯಗಳಲ್ಲಿ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಇದರೊಂದಿಗೆ ಪಶು ವೈದ್ಯಾಧಿಕಾರಿಗಳು, ಪಶು ವೈದ್ಯಕೀಯ ಪರೀಕ್ಷಕರು ಮತ್ತು ಡಿ-ದರ್ಜೆ ನೌಕರರು ಸೇರಿದಂತೆ 8 ಸಾವಿರ ಹುದ್ದೆಗಳ ಖಾಲಿ ಇರುತ್ತವೆ. ಪಶು ಸಂಜೀವಿನಿ ಯೋಜನೆ ಅಡಿ 791 ಆಂಬುಲೆನ್ಸ್ ಗಳನ್ನು ಒದಗಿಸಿದ್ದು, ಈ ವಾಹನಗಳ ಉಪಯೋಗಕ್ಕೆ ಅಗತ್ಯವಿರುವ ಚಾಲಕ ಮತ್ತು ಸಿಬ್ಬಂದಿಯನ್ನು ನೇಮಿಸಿರುವುದಿಲ್ಲ.
ಕೃಷಿ ಪ್ರಧಾನ ದೇಶದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗುವ ಸಂದರ್ಭದಲ್ಲಿ ರೈತನ ಬೆಳೆಗೆ ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿ ಕೃಷಿ ಉತ್ಪನ್ನಗಳನ್ನು ಉತ್ಪಾದಿಸುತ್ತಾರೆ. ಆದರೆ, ಯೋಜನೆ ಅಡಿ ರೂಪಿಸಿರುವ ವ್ಯವಸ್ಥೆ ಕ್ರಮಬದ್ಧವಾಗಿಲ್ಲ.
ತಾಲ್ಲೂಕಿನಲ್ಲಿ ಅವಶ್ಯವಿರುವಷ್ಟು ಖರೀದಿ ಕೇಂದ್ರಗಳನ್ನು ಸಮಯಕ್ಕೆ ಸರಿಯಾಗಿ ತೆರೆಯದೆ ಇರುವುದು, ಮಧ್ಯವರ್ತಿಗಳ ಹಾವಳಿ, ಸರದಿಯಲ್ಲಿ ದಿನಗಟ್ಟಲೆ ಟ್ಯಾಕ್ಟರ್‌ಗಳೊಂದಿಗೆ ನಿಂತು ಕಾಯುವ ಸ್ಥಿತಿ, ಆಗಿಂದಾಗ್ಗೆ ಕೈಕೊಡುವ ಸರ್ವ ಸಮಸ್ಯೆ ಮತ್ತು ತೇವಾಂಶ ಆಧಾರದ ಮೇಲೆ ಗ್ರೇಡಿಂಗ್ ಹೆಸರಿನಲ್ಲಿ ರೈತರ ಶೋಷಣೆ ಮುಂತಾದ ಸಮಸ್ಯೆಗಳು ತಲೆದೋರಿವೆ.
ಇದಲ್ಲದೆ ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರೈತರು ಬೆಳೆಯುವ ಹಲವಾರು ಬೆಳೆಗಳಿಗೆ ಸಮಯೋಚಿತವಾಗಿ ಮತ್ತು ನ್ಯಾಯವಾದ ಬೆಂಬಲ ಬೆಲೆಯನ್ನು ನೀಡಿ ರೈತರ ಬೆಳೆಗಳನ್ನು ಖರೀದಿಸಲು ಕಟಿಬದ್ಧವಾಗಿದ್ದೇವೆ. ಇತರ ಧಾನ್ಯಗಳ ಸಂಗ್ರಹಣೆ ವ್ಯವಸ್ಥೆ ಮಾಡಲಾಗುವುದು ಎಂದು ಜೆಡಿಎಸ್ ಭರವಸೆ ನೀಡಿದೆ.












Click it and Unblock the Notifications