ಕರ್ನಾಟಕದಲ್ಲಿ ಎಬೋಲಾ ಭೀತಿ: ಪೀಡಿತ ದೇಶಗಳಿಂದ ಬರುವವರಿಗೆ 21 ದಿನ ಕ್ವಾರಂಟೈನ್ ಕಡ್ಡಾಯ, ಮಾರ್ಗಸೂಚಿ ಬಿಡುಗಡೆ
ಬೆಂಗಳೂರು: ವಿಶ್ವ ಆರೋಗ್ಯ ಸಂಸ್ಥೆ ಎಬೋಲಾ (Ebola) ವೈರಸ್ ಹರಡುವಿಕೆಯ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಈ ಜಾಗತಿಕ ಎಚ್ಚರಿಕೆಯ ಬೆನ್ನಲ್ಲೇ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಎಬೋಲಾ ವೈರಸ್ ಬಗ್ಗೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಅನಗತ್ಯವಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.
ಪ್ರಸ್ತುತ, ಭಾರತದಲ್ಲಿ ಈವರೆಗೆ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಭಯಪಡುವ ಬದಲು, ರೋಗದ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡು ಎಚ್ಚರಿಕೆಯಿಂದ ಇರುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಎಬೋಲಾ ಲಕ್ಷಣಗಳು
ಎಬೋಲಾ ವೈರಸ್ ಸೋಂಕು ತಗುಲಿದಾಗ ವ್ಯಕ್ತಿಯಲ್ಲಿ ತೀವ್ರ ಜ್ವರ, ವಿಪರೀತ ತಲೆನೋವು, ಮೈಕೈ ನೋವು, ವಾಂತಿ, ಭೇದಿ ಮತ್ತು ಚರ್ಮದ ಮೇಲೆ ಗುಳ್ಳೆಗಳು ಅಥವಾ ದದ್ದುಗಳು ಕಾಣಿಸಿಕೊಳ್ಳುವಂತಹ ಗಂಭೀರ ಲಕ್ಷಣಗಳು ಕಂಡುಬರುತ್ತವೆ. ಈ ರೋಗವು ಸೋಂಕಿತ ವ್ಯಕ್ತಿಯ ರಕ್ತ, ದೇಹದ ದ್ರವಗಳು ಅಥವಾ ಸೋಂಕಿತ ವಸ್ತುಗಳ ನೇರ ಸಂಪರ್ಕದಿಂದ ಮಾತ್ರ ಹರಡುತ್ತದೆ. ಗಾಳಿಯ ಮೂಲಕ ಇದು ಹರಡುವುದಿಲ್ಲ ಎಂಬುದನ್ನು ಸಾರ್ವಜನಿಕರು ಅರಿಯಬೇಕು.
ವಿಮಾನ ನಿಲ್ದಾಣಗಳಲ್ಲಿ ತೀವ್ರ ನಿಗಾ
ವೈರಸ್ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ (ಬೆಂಗಳೂರು ಮತ್ತು ಮಂಗಳೂರು) ತಪಾಸಣೆ ಮತ್ತು ಕಣ್ಗಾವಲನ್ನು ತೀವ್ರಗೊಳಿಸಲಾಗಿದೆ. ಶಂಕಿತ ಪ್ರಕರಣಗಳನ್ನು ನಿಭಾಯಿಸಲು ವಿಶೇಷ ಕ್ವಾರಂಟೈನ್ ಮತ್ತು ಪ್ರತ್ಯೇಕ ವಾರ್ಡ್ ಸಿದ್ಧವಾಗಿರಿಸಲಾಗಿದೆ.
ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ (RGICD) ಮತ್ತು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಅದೇ ರೀತಿ, ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮತ್ತು ಶ್ರೀನಿವಾಸ್ ಪೋರ್ಟ್ ಆಸ್ಪತ್ರೆಗಳಲ್ಲೂ ತುರ್ತು ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
21 ದಿನಗಳ ಕ್ವಾರಂಟೈನ್ ಕಡ್ಡಾಯ
ಎಬೋಲಾ ಪೀಡಿತ ದೇಶಗಳಿಂದ ಇತ್ತೀಚೆಗೆ ರಾಜ್ಯಕ್ಕೆ ಹಿಂದಿರುಗಿದ ಅಥವಾ ಪ್ರಯಾಣ ಬೆಳೆಸಿ ಬಂದ ಪ್ರತಿಯೊಬ್ಬರೂ ಕಡ್ಡಾಯವಾಗಿ 21 ದಿನಗಳ ಕಾಲ ಆರೋಗ್ಯ ಇಲಾಖೆಯ ಕಡ್ಡಾಯ ನಿಗಾದಲ್ಲಿ (ಕ್ವಾರಂಟೈನ್) ಇರಬೇಕು. ಈ ಅವಧಿಯಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದರೆ, ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ಇದು ರೋಗ ಹರಡುವಿಕೆಯನ್ನು ತಡೆಯಲು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.
ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಅನಗತ್ಯವಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು ಹಾಗೂ ಆರೋಗ್ಯ ಇಲಾಖೆಯು ಹೊರಡಿಸುವ ಪ್ರತಿಯೊಂದು ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು.
In light of the World Health Organization declaring an international public health emergency over the Ebola virus, I request the public not to panic unnecessarily under any circumstances.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 22, 2026
At present, no Ebola cases have been reported in India. The need of the hour is to stay… pic.twitter.com/lEe1dGO9xD
ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು 24/7 ನಿರಂತರವಾಗಿ ಅವಲೋಕಿಸುತ್ತಿದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ, ಕೇವಲ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು ಹಾಗೂ ಸದಾ ಎಚ್ಚರದಿಂದಿರಬೇಕು ಎಂದು ಮನವಿ ಮಾಡಲಾಗಿದೆ.












Click it and Unblock the Notifications