'ದೇಶದಲ್ಲೇ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1'
ಬೆಂಗಳೂರು, ಏಪ್ರಿಲ್ 09: ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತದೆ. ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂಬರ್ ಒನ್ ಆಗಿದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರೂ ಆಗಿರುವ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅಭಿಪ್ರಾಯ ಪಟ್ಟಿದ್ದಾರೆ. ದೇಶದಲ್ಲೇ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1 ಎಂದು ಸಿಎಂ ಅವರ ಆರ್ಥಿಕ ಸಲಹೆಗಾರಾಗಿರುವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಇದೀಗ ಕಳಚಿ ಬಿದ್ದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕರಾದ ಬಿ ವೈ ವಿಜಯೇಂದ್ರ ಅವರು ಟ್ವೀಟ್ ಮಾಡಿದ್ದು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ, ಭ್ರಷ್ಟಾಚಾರ, ಲೂಟಿಕೋರತನ ಕಾಂಗ್ರೆಸ್ ಸರ್ಕಾರದ ಅವಿಭಾಜ್ಯ ಅಂಗ ಎಂಬುದನ್ನು ಸ್ವತಃ ನಿಮ್ಮ ಆರ್ಥಿಕ ಸಲಹೆಗಾರರೂ ಆಗಿರುವ ಶಾಸಕ ಬಸವರಾಜ ರಾಯರೆಡ್ಡಿ ಅವರೇ ಸ್ಪಷ್ಟವಾಗಿ ಬಹಿರಂಗಪಡಿಸಿದ್ದಾರೆ.

ದೇಶದಲ್ಲೇ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1 ಎಂದು ಹೇಳುವ ಮೂಲಕ ಈ ಸರ್ಕಾರದ ಕರಾಳ ಭ್ರಷ್ಟತೆಯ ಮುಖವಾಡವನ್ನು ಬಯಲು ಮಾಡಿ ರಾಜ್ಯದ ಘನತೆ ಕುಗ್ಗಿದ ಸ್ವರೂಪವನ್ನು ಬಿಚ್ಚಿಟ್ಟಿದ್ದಾರೆ ಆ ಮೂಲಕ ರಾಷ್ಟ್ರ ಮಟ್ಟದಲ್ಲಿ ರಾಜ್ಯ ನಿಮ್ಮ ಆಡಳಿತದಲ್ಲಿ ಸಂಪೂರ್ಣ ಭ್ರಷ್ಟತೆಯ ಕಪ್ಪುಮಸಿ ಮೆತ್ತಿಕೊಂಡಿರುವುದನ್ನು ಅನಾವರಣ ಮಾಡಿ ಕರ್ನಾಟಕ ವಿಶ್ವಮಟ್ಟದಲ್ಲಿ ತಲೆತಗ್ಗಿಸುವ ಪರಿಸ್ಥಿತಿ ಇರುವುದನ್ನು ವಿವರಿಸಿದ್ದಾರೆ.
ಜನಪ್ರತಿನಿಧಿಗಳು ಹೇಗೆ ಇರುತ್ತಾರೊ ಅದರಂತೆಯೇ ಅಧಿಕಾರಿಗಳೂ ಇರುತ್ತಾರೆ, ಮುಖ್ಯಮಂತ್ರಿ ಏನೇ ಹೇಳಿದರೂ ಭ್ರಷ್ಟಾಚಾರದ ಕುರಿತು ನನ್ನ ವೈಯಕ್ತಿಕ ಅಭಿಪ್ರಾಯ ಇದೇ ಇರುತ್ತದೆ ಎಂದು ಹೇಳುವ ಮೂಲಕ 'ಯಥಾ ರಾಜ ತಥಾ ಮಂತ್ರಿಗಳು, ಅಧಿಕಾರಿಗಳು 'ಎಂಬ ಮಾತು ನಿಮ್ಮ ಆಡಳಿತದಲ್ಲಿ ಅಕ್ಷರಶಃ ಅನ್ವಯಿಸುತ್ತಿದೆ ಎನ್ನುವುದನ್ನು ಹೇಳುವ ಮೂಲಕ ವಾಸ್ತವ ಸ್ಥಿತಿಯ ಮೇಲೆ ನೇರವಾಗಿ ಬೆಳಕು ಚೆಲ್ಲಿದ್ದಾರೆ. ಹಿಂದಿನ ನಮ್ಮ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವನ್ನು 40% ಸರ್ಕಾರ ಎಂಬ ಸುಳ್ಳು ಅಪಪ್ರಚಾರಗಳನ್ನು ನಡೆಸಿ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸಿ ಜಗತ್ತಿನಲ್ಲಿ "ನಾವೇ ಸತ್ಯವಂತರು "ಎಂದು ಡಂಗುರ ಸಾರಿ ಅಧಿಕಾರಕ್ಕೆ ಬಂದ ನಿಮ್ಮ ನೈಜ ಮುಖವಾಡ ಇದೀಗ ಕಳಚಿ ಬಿದ್ದಿದೆ.
ಭ್ರಷ್ಟತೆಯ ಕೆನ್ನಾಲಿಗೆ ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ ಏರಿಸುವ ಮೂಲಕ ಜನಸಾಮಾನ್ಯರು ಹಾಗೂ ಕಡು ಬಡವರ ದೈನಂದಿನ ಬದುಕಿನ ಸ್ಥಿತಿಯನ್ನು ಸುಡುತ್ತಿದೆ. ಇದಕ್ಕಾಗಿ ನಿಮ್ಮ ಸರ್ಕಾರದ ವಿರುದ್ಧ ಜನಬೆಂಬಲಿತ 'ಬಿಜೆಪಿ ಜನಾಕ್ರೋಶದ ಹೋರಾಟದ ಯಾತ್ರೆ'ರಾಜ್ಯಾದ್ಯಂತ ಯಶಸ್ವಿಯಾಗಿ ಮುನ್ನಡೆದಿದೆ. ನಿಮ್ಮ ಆಡಳಿತದಿಂದ ರಾಜ್ಯವನ್ನು ಮುಕ್ತಗೊಳಿಸದೇ ಕರುನಾಡಿಗೆ ಮುಕ್ತಿಯಿಲ್ಲ ಎಂಬ ನಿರ್ಧಾರಕ್ಕೆ ರಾಜ್ಯದ ಜನ ಬಂದಿದ್ದಾರೆ. ಸದ್ಯದಲ್ಲೇ ಜನಾಕ್ರೋಶದ ಬಿಸಿ ನಿಮ್ಮ ಸರ್ಕಾರವನ್ನು ಸುಟ್ಟು ಪಥನಗೊಳಿಸಲಿದೆ ಎಂದು ಬಿ ವೈ ವಿಜಯೇಂದ್ರ ಅವರು ಹೇಳಿದರು.
ಈ ಕುರಿತು ಸಿ ಟಿ ರವಿ ಅವರು ಮಾತನಾಡಿ, ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1: ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗು ಕಾಂಗ್ರೆಸ್ ಶಾಸಕ ಒಪ್ಪಿದ ಸತ್ಯ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಸವರಾಜ ರಾಯರೆಡ್ಡಿ ಅವರು ಸ್ವತಃ ಒಪ್ಪಿಕೊಂಡಿರುವಂತೆ - "ಕರ್ನಾಟಕ ಈಗ ಭ್ರಷ್ಟಾಚಾರದಲ್ಲಿ ನಂಬರ್ ವನ್" ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಹೇಳಿಕೆ ನಿಮ್ಮ ಅಥವಾ ನಿಮ್ಮ ಪಕ್ಷದ ರಾಜಕೀಯ ವಿರೋಧಿಗಳಿಂದ ಬಂದದ್ದು ಅಲ್ಲ, ನಿಮ್ಮದೇ ಪಕ್ಷದ ಹಿರಿಯ ನಾಯಕ ಒಪ್ಪಿಕೊಂಡಿರುವ ಸತ್ಯ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಎಷ್ಟು ಹಾಸುಹೊಕ್ಕಾಗಿದೆ ಮತ್ತು ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಇದು ಸಾಕ್ಷಿ. ನಿಮ್ಮ ಆರ್ಥಿಕ ಸಲಹೆಗಾರರ ಹೇಳಿಕೆ ಹಾಗು ರಾಜ್ಯ ಗುತ್ತಿಗೆದಾರರ ಸಂಘವು ಮಾಡಿರುವ "60% ಕಮಿಷನ್" ಆರೋಪವನ್ನು ತಾಳೆಮಾಡಿದಾಗ ಈ ಸರ್ಕಾರದ ಆಡಳಿತದಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ ಎಂಬುದು ಅಂಗೈ ಹುಣ್ಣಿನಷ್ಟೆ ಸತ್ಯ ಎಂದು ಹೇಳಿದ್ದಾರೆ.












Click it and Unblock the Notifications