ಸರ್ಕಾರಿ ವಕೀಲರ ನೇಮಕಾತಿಯಲ್ಲಿಯೂ ಎಸ್‌ಸಿ, ಎಸ್‌ಟಿ ಮೀಸಲಾತಿ, ಆದೇಶ
ಬೆಂಗಳೂರು, ಡಿಸೆಂಬರ್ 01: ಕರ್ನಾಟಕ ಸರ್ಕಾರ ಸರ್ಕಾರಿ ವಕೀಲರನ್ನು ನೇಮಿಸುವಾಗ ಮೀಸಲಾತಿ ನಿಯಮ ಪಾಲಿಸುವ ಕುರಿತು ಆದೇಶವನ್ನು ಹೊರಡಿಸಿದೆ. ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಇವರ ಪತ್ರ, ಕಾನೂನು ಇಲಾಖೆಯ ಟಿಪ್ಪಣಿಯ ಉಲ್ಲೇಖದ ಮೇಲೆ ಸಮಾಜ ಕಲ್ಯಾಣ ಇಲಾಖೆ ಈ ಕುರಿತು ಆದೇಶವನ್ನು ಹೊರಡಿಸಿದೆ. ದಿನಾಂಕ 01-06-2023ರಂದು ನಡೆದ ಸಭೆಯಲ್ಲಿನ ಚರ್ಚೆಯಲ್ಲಿ ಈ ಪ್ರಸ್ತಾವನೆ ಕೇಳಿ ಬಂದಿತ್ತು.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಕಲಾವತಿ ಎಸ್. ವಿ. ಸರ್ಕಾರದ ಜಂಟಿ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. ಆದೇಶ ಸರ್ಕಾರಿ ವಕೀಲರನ್ನು ನೇಮಿಸುವಾಗ ಕನಿಷ್ಟ ಶೇ 24ರಷ್ಟು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಕೀಲರನ್ನು ನೇಮಕ ಮಾಡಲು ಆದೇಶ ಹೊರಡಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಪ್ರಸ್ತಾವನೆ: ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಇವರು ಪತ್ರದಲ್ಲಿ ಮಾನ್ಯ ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮತ್ತು ನಿಗಮಗಳ ಅಧಿಕಾರಿಗಳೊಂದಿಗೆ ದಿನಾಂಕ 01-06-2023ರಂದು ಜರುಗಿದ ಸಭೆಯಲ್ಲಿ, ಸರ್ಕಾರಿ ವಕೀಲರನ್ನು ನೇಮಿಸುವಾಗ ಕನಿಷ್ಠ 24% ರಷ್ಟು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಕೀಲರನ್ನು ನೇಮಿಸಿಕೊಳ್ಳಲು ಕಾನೂನು ಇಲಾಖೆಗೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದ್ದು, ಸಭಾ ನಡವಳಿಯಲ್ಲಿ ಕ್ರಮವಹಿಸಲು ನಿರ್ದೇಶನವಿರುತ್ತದೆ.
ಅದರಂತೆ, ಸರ್ಕಾರಿ ವಕೀಲರನ್ನು ನೇಮಿಸುವ ಸಂದರ್ಭದಲ್ಲಿ ಕನಿಷ್ಠ 24%ರಷ್ಟು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಕೀಲರನ್ನು ನೇಮಿಸುವಂತೆ ಶೇ.24 ರಷ್ಟು ಪರಿಶಿಷ್ಟ ಜಾತಿ/ ಪಂಗಡದವರಿಗೆ ಪ್ರಾತಿನಿಧ್ಯತೆ ನೀಡಬಹುದೆಂಬ ಅಭಿಪ್ರಾಯದೊಂದಿಗೆ ಪ್ರಸ್ತಾವನೆಯನ್ನು ಕಾನೂನು ಇಲಾಖೆಗೆ ಕಳುಹಿಸಲು ಸೂಕ್ತ ಆದೇಶವನ್ನು ಹೊರಡಿಸುವಂತೆ ಕೋರಿರುತ್ತಾರೆ.
ಕಾನೂನು ಇಲಾಖೆಯ ಟಿಪ್ಪಣಿಯಲ್ಲಿ ಕರ್ನಾಟಕ ರಾಜ್ಯಪತ್ರ ದಿನಾಂಕ 23.10.2022ರಲ್ಲಿ ಅಧ್ಯಾದೇಶಿಸಿದಂತೆ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಮೀಸಲಾತಿಯನ್ನು ಅನುಸೂಚಿತ ಜಾತಿಗಳಿಗೆ ಶೇಕಡ 17ರಷ್ಟು ಮತ್ತು ಅನುಸೂಚಿತ ಪಂಗಡಗಳಿಗೆ ಶೇಕಡ 7ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿರುತ್ತದೆ.
ಆ ಕಾರಣದಿಂದ ಸರ್ಕಾರಿ ವಕೀಲರನ್ನು ನೇಮಿಸುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅಧ್ಯಾದೇಶದಲ್ಲಿ ಹೇಳಿರುವಂತೆ ಒಟ್ಟು ಶೇಕಡ 24ರಷ್ಟು ಮೀಸಲಾತಿಯನ್ನು ಕಲ್ಪಿಸಬಹುದಾಗಿದೆ ಎಂದು ಅಭಿಪ್ರಾಯ ನೀಡಿರುತ್ತದೆ. ಈ ಅಂಶಗಳನ್ನು ಪರಿಶೀಲಿಸಿ, ಸರ್ಕಾರವು ಈ ಆದೇಶವನ್ನು ಹೊರಡಿಸಿದೆ.
ಸರ್ಕಾರದ ಆದೇಶ: ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ವಕೀಲರನ್ನು ನೇಮಿಸುವ ಸಂದರ್ಭದಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಮೀಸಲಾತಿಯನ್ನು ಪರಿಶಿಷ್ಟ ಜಾತಿ ವಕೀಲರಿಗೆ ಶೇ.17% ಮತ್ತು ಪರಿಶಿಷ್ಟ ಪಂಗಡಗಳ ವಕೀಲರಿಗೆ ಶೇ.7% ಸೇರಿ ಒಟ್ಟು ಶೇ.24% ರಷ್ಟು ಮೀಸಲಾತಿಯನ್ನು ಕಲ್ಪಿಸಿ ಆದೇಶಿಸಿದೆ. ಈ ಆದೇಶವನ್ನು ಕಾನೂನು ಇಲಾಖೆಯ ಟಿಪ್ಪಣಿ ದಿನಾಂಕ 22.10.2024 ರಲ್ಲಿ ನೀಡಿರುವ ಅಭಿಪ್ರಾಯದನ್ವಯ ಹೊರಡಿಸಲಾಗಿದೆ ಎಂದು ತಿಳಿಸಿದೆ.
ಆಯೋಗ ರಚನೆ ಮಾಡಿ ಆದೇಶ: ಈಗಾಗಲೇ ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ನೀಡುವ ಕುರಿತು ಸಹ ತೀರ್ಮಾನ ಕೈಗೊಂಡಿದೆ. ಅಕ್ಟೋಬರ್ 28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಜಾರಿ ಕುರಿತು ವರದಿ ನೀಡಲು ಏಕಸದಸ್ಯ ಆಯೋಗವನ್ನು ರಚಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು.
ಒಳ ಮೀಸಲಾತಿ ಜಾರಿ ಕುರಿತು ವರದಿ ನೀಡಲು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚನೆ ಮಾಡಿದೆ. ವರದಿ ಸಲ್ಲಿಕೆ ಮಾಡಲು ಎರಡು ತಿಂಗಳ ಕಾಲಾವಕಾಶವ ನೀಡಲಾಗಿದೆ. ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು Empirical Data ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಗ್ಗೆ ಸೂಕ್ತ ಶಿಫಾರಸ್ಸಿಗಳೊಂದಿಗೆ ಎರಡು ತಿಂಗಳ ಅವಧಿಯೊಳಗಾಗಿ ವರದಿ ಸಲ್ಲಿಸಲು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಹೆಚ್. ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ಸರ್ಕಾರ ರಚಿಸಿದೆ.












Click it and Unblock the Notifications