Tax Impose; ನಾಡಿನ ಜನರ ಮೇಲೆ ಹೆಚ್ಚುವರಿ 40,000 ಸಾವಿರ ಕೋಟಿ ತೆರಿಗೆ ಭಾರ: ಮಾಜಿ ಸಿಎಂ
ಬಾಗಲಕೋಟೆ, ಜನವರಿ 11: ಕರ್ನಾಟಕ ರಾಜ್ಯ ಕಾಂಗ್ರೆಸ್‌ನಲ್ಲಿ ಒಳಬೇಗುದಿ ಹೆಚ್ಚಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕರು ಸ್ಪಂದಿಸದೆ ತಮ್ಮ ಕುರ್ಚಿ ಭದ್ರತೆಗೆ ಆಟ ಆಡುತ್ತಿದ್ದಾರೆ. ಇದರ ಪರಿಣಾಮ ಜನರ ಮೇಲೆ ಬಿದ್ದಿದೆ. ಕಾನೂನು ಸುವ್ಯವಸ್ಥೆ ಹಾಳಾಗಿರುವ ಜೊತೆಗೆ ದಲಿತರ ಮೇಲೆ ದೌರ್ಜನ್ಯ ಆಗುತ್ತಿದೆ. ವಿದ್ಯಾರ್ಥಿಗಳಿಗೆ ಸರಿಯಾದ ಶಿಷ್ಯವೇತನ ಸಿಗುತ್ತಿಲ್ಲ...
ಬಾಗಲಕೋಟೆಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಹಾಲಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಆರೋಪಿಸಿದರು. ರಾಜ್ಯ ಕಾಂಗ್ರೆಸ್ ಔತಣಕೂಟ ಕುರಿತು ಪ್ರತಿಕ್ರಿಯಿಸಿದರು. ಜನರ ಮೇಲೆ ತೆರಿಗೆ ಹೊರೆ ಕುರಿತು ಅವರು ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ನವರು ಡಿನ್ನರ್ ಆದರೂ ಮಾಡಲಿ, ಲಂಚ್ ಮಾಡಲಿ, ಅದು ಅವರ ಆಂತರಿಕ ವಿಚಾರ. ರಾಜ್ಯ ಇಷ್ಟು ಆರ್ಥಿಕವಾಗಿ ಸಂಕಷ್ಟದಲ್ಲಿ ಇದೆ. ಕಾನೂನು ಸುವ್ಯವಸ್ಥೆ ಹಾಳಾಗಿರುವ ಜೊತೆಗೆ ದಲಿತರ ಮೇಲೆ ದೌರ್ಜನ್ಯ ಆಗುತ್ತಿದೆ. ವಿದ್ಯಾರ್ಥಿ ವೇತನ, ರೈತರಿಗೆ ಪರಿಹಾರ ಸಿಗುತ್ತಿಲ್ಲ. ಬಾಣಂತಿಯರ ಸರಣಿ ಸಾವು ಮುಂದುವರಿದಿದೆ.
ರಾಜ್ಯದಲ್ಲಿ ಸಮಸ್ಯೆಗಳು ಅಗಾಧವಾಗಿರುವಾಗ ಕಾಂಗ್ರೆಸ್ ನಾಯಕರು ಪರಿಹಾರ ಒದಗಿಸುತ್ತಿಲ್ಲ. ಇವರಿಗೆ ತಮ್ಮ ರಾಜಕಾರಣವೇ ಮುಖ್ಯವಾಗಿದೆ. ಯಾರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವುದು ಬಹಳ ಮಹತ್ವವಾಗಿದೆ.

ಯಾವ ಉದ್ದೇಶಕ್ಕಾಗಿ ಜನ ಇವರನ್ನು ಆರಿಸಿ ಕಳುಹಿಸಿದ್ದರೋ ಅದನ್ನು ಸಂಪೂರ್ಣ ಮರೆತು ತಮ್ಮ ಖುರ್ಚಿಯ ಭದ್ರತೆಯ ಆಟ ಆಡುತ್ತಿದ್ದಾರೆ ಹೊರತು. ರಾಜ್ಯದ ಜನರ ಸಂಕಷ್ಟು ದೂರ ಮಾಡಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು ಎಂದು ತರಾಟೆಗೆ ತೆಗೆದುಕೊಂಡರು.
ಡಿಕೆಶಿ ಟೆಂಪಲ್ ರನ್: ಕುರ್ಚಿಗಾಗಿ ಜನರ ನಿರ್ಲಕ್ಷ್ಯ
ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ದೇಗುಲಗಳಿಗೆ ಭೇಟಿ ನೀಡಿ ಹೋಮ, ಹವನ ಮಾಡಿಸುತ್ತಿರುವ ವಿಚಾರ, ಅವರು ಎಲ್ಲಿಗೆಗಾದರೂ ಹೋಗಲಿ, ದೇವಸ್ಥಾನಕ್ಕಾದರೂ ಹೋಗಲಿ. ಅದು ಅವರ ವೈಯಕ್ತಿಕ ವಿಚಾರ. ಯಾವ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಧಾವಿಸಬೇಕಿತ್ತು ಅದನ್ನು ಮಾಡದೇ ಸರ್ಕಾರ, ಮಂತ್ರಿಗಳು, ಇವತ್ತು ಅವರವರ ವೈಯಕ್ತಿಕ, ಕುರ್ಚಿಗಾಗಿ ತಮ್ಮ ರಣನೀತಿಗಳನ್ನು ಮಾಡುತ್ತಿದ್ದಾರೆ.
ಜನರು ಸಂಕಷ್ಟದಲ್ಲಿ ಇರುವುದನ್ನು ನಿರ್ಲಕ್ಷ್ಯ ಮಾಡಿರುವುದು ರಾಜ್ಯದ ನಮ್ಮ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಾರಂಭದಿಂದಲೂ ಮುಖ್ಯಮಂತ್ರಿ ಆಗುವ ಪ್ರಕ್ರಿಯೆಯಲ್ಲಿಯೇ ಮೊಳಕೆಯಲ್ಲೆ ಒಡಕಿದೆ, ಹೀಗಾಗಿ ಅದು ಬರುವ ದಿನಗಳಲ್ಲಿ ದೊಡ್ಡ ಪ್ರಮಾಣ ನಡೆಯಲಿದೆ ಎಂದು ಭವಿಷ್ಯ ನುಡಿದರು.
ಹದಗೆಟ್ಟ ಆರ್ಥಿಕ ಸ್ಥಿತಿ: ಜನರಿಗೆ ತೆರಿಗೆ ಹೊರೆ
ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಉತ್ತರಿಸಿ, ನಮ್ಮನ್ನು ಬಿಡಿ, ಅವರ ಪಕ್ಷದ ಶಾಸಕರು ಅಭಿವೃದ್ಧಿಗೆ ಅವಕಾಶ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಉತ್ತರ ಕೊಡಲಿ. ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಅಭಿವೃದ್ಧಿಗೆ ಹಣ ಇಲ್ಲ. ಒಂದು ವರ್ಷದಲ್ಲಿ ಅಭಿವೃದ್ಧಿಗಾಗಿ ಇದ್ದ 54,000 ಸಾವಿರ ಕೋಟಿ ರೂ. ತಮ್ಮ ರಾಜಕೀಯ ಲಾಭಕ್ಕಾಗಿ ಗ್ಯಾರಂಟಿಗಾಗಿ ಕೊಟ್ಟಿದ್ದಾರೆ. ಅದರಿಂದ ಆರ್ಥಿಕ ಸಂಕಷ್ಟ ಇದೆ.
ಅದೇ ಕಾರಣಕ್ಕೆ ಹಾಲಿಗೆ ನೀರಿಗೆ, ಆಲ್ಕೊಹಾಲ್, ಸ್ಟ್ಯಾಂಪ್ ಪೇಪರ್, ಮೋಟರ್ ವೆಹಿಕಲ್ ಗೆ, ಪೆಟ್ರೋಲ್, ಡಿಸೇಲ್ ಗೆ ಎಲ್ಲದ್ದಕ್ಕೂ ತೆರಿಗೆ ಹಾಕಿದ್ದಾರೆ. ಇದನ್ನು ನೋಡಿದರೆ ರಾಜ್ಯದಲ್ಲಿ 40,000 ಸಾವಿರ ಕೋಟಿ ರೂ. ವರ್ಷದಲ್ಲಿ ಅಧಿಕ ತೆರಿಗೆಯನ್ನು ಜನರ ಮೇಲೆ ಭಾರ ಹಾಕಿದ್ದಾರೆ. ಇದರಿಂದಲೇ ಗೊತ್ತಾಗುತ್ತೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ವಾಗ್ದಾಳಿ ನಡೆಸಿದರು.
ಕೇಂದ್ರದಿಂದ ತೆರಿಗೆ ಹಂಚಿಕೆ ಸಮರ್ಪಕವಾಗಿ ಬರುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ರಾಜ್ಯದಲ್ಲಿ ತಮ್ಮ ತಪ್ಪು ಮರೆಮಾಚಲು ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ಹಣಕಾಸು ನಿರ್ವಹಣೆ, ಆಡಳಿತದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಈಶ್ವರಪ್ಪ ರಾಜೀನಾಮೆ ನೀಡಿದ್ದರು: ಕಾಂಗ್ರೆಸ್‌ಗೆ ನೈತಿಕತೆ ಇಲ್ಲ
ಗುತ್ತಿಗೆದಾರ ಸಚಿನ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕುಪನೂರ ಬಂಧನವಾಗಿದೆ.ನಮ್ಮ ಸರ್ಕಾರದಲ್ಲಿ ಈಶ್ವರಪ್ಪ ಅವರದ್ದು ಏನೂ ಪಾತ್ರ ಇರಲಿಲ್ಲ. ಆದರೆ, ತನಿಖೆ ಮುಕ್ತವಾಗಿರಬೇಕು ಎಂದು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಇವತ್ತು ಅದೆಲ್ಲವನ್ನು ಗಾಳಿಗೆ ತೂರಿ ತನಿಖೆ ಮಾಡುತ್ತಿದ್ದಾರೆ. ತನಿಖೆಯಲ್ಲಿ ಹಲವಾರು ವಿಚಾರಗಳು ಸಾರ್ವಜನಿಕರಿಗೆ ಬರುತ್ತಿವೆ. ತನಿಖೆಯಲ್ಲಿ ಎಲ್ಲವೂ ಹೊರಬರುತ್ತವೆ ಎಂದು ಹೇಳಿದರು.
ಸಂವಿಧಾನದ ರಚಿಸಿ 75 ವರ್ಷ ಆದ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಬಿಜೆಪಿ ಕಾರ್ಯಕ್ರಮ ಇದಕ್ಕೂ ಅಮಿತ್ ಶಾ ಅವರ ಹೇಳಿಕೆಗೂ ಸಂಬಂಧವಿಲ್ಲ, ನವೆಂಬರ್ 26 ರಿಂದಲೇ ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಅವರು ಬಿಜೆಪಿ ಕಾರ್ಯಕ್ರಮಗಳ ಅಪ್ಡೇಟ್ ಕೊಟ್ಟರು.












Click it and Unblock the Notifications