'ಈಶ್ವರಪ್ಪ ಆರತಕ್ಷತೆ ಗುಂಗಿನಲ್ಲಿಯೇ ಇದ್ದಾರೆ'
ಬೆಂಗಳೂರು, ಫೆ.6 : ಬೆಂಗಳೂರಿಗೆ ಆಗಮಿಸದಂತೆ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಅವರಿಗೆ ನಿಷೇಧ ವಿಧಿಸಿರುವ ಪ್ರಕರಣ ಗುರುವಾರ ಉಭಯ ಸದನಗಳಲ್ಲಿ ಬಿಸಿ-ಬಿಸಿ ಚರ್ಚೆಗೆ ಕಾರಣವಾಯಿತು. ಜೊತೆಗೆ ಸ್ವಾರಸ್ಯಕರವಾದ ಚರ್ಚೆಗಳು ಸದಸನಲ್ಲಿ ನಡೆದವು ಅವುಗಳ ವಿವರ ಇಲ್ಲಿದೆ ನೋಡಿ.
'ಕೆ.ಎಸ್.ಈಶ್ವರಪ್ಪ ಅವರು ಯಾವಾಗಲೂ ಆರತಕ್ಷತೆ ಗುಂಗಿನಲ್ಲಿಯೇ ಇರುತ್ತಾರೆ' ಎಂದು ಸಿಎಂ ಸಿದ್ದರಾಮಯ್ಯ ಕೀಚಾಯಿಸಿದರೆ. 'ಚಿನ್ನದ ಬಗ್ಗೆ ಪ್ರಶ್ನೆಗಳಿವೆಯೇ ಶರವಣ?' ಎಂದು ಪರಿಷತ್ತಿನಲ್ಲಿ ಶರವಣ ಅವರನ್ನು ಪ್ರಶ್ನಿಸಿದ ಸಿಎಂ ಸದನದಲ್ಲಿ ನಗುವಿನ ಅಲೆ ಮೂಡುವಂತೆ ಮಾಡಿದರು. [ಗುರುವಾರದ ವಿಧಾನಸಭೆ ಕಲಾಪದಲ್ಲಿ ಏನೇನಾಯ್ತು?]

ಆರತಕ್ಷತೆ ಗುಂಗು : ಗುರುವಾರದ ವಿಧಾನಪರಿಷತ್ ಕಲಾಪಕ್ಕೆ ಉಪಸಭಾಪತಿ ಪುಟ್ಟಣ್ಣ ಸೂಟ್ ಧರಿಸಿ ಬಂದಿದ್ದರು. ಇದನ್ನು ನೋಡಿದ ಪ್ರತಿಪಕ್ಷ ನಾಯಕ ಈಶ್ವರಪ್ಪ ಅವರು, ಪುಟ್ಟಣ್ಣ ಆರತಕ್ಷತೆಗೆ ಬಂದಿರುವ ಹಾಗಿದೆ ಎಂದು ತಮಾಷೆ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಈಶ್ವರಪ್ಪ ಯಾವಾಗಲೂ ಆರತಕ್ಷತೆ ಗುಂಗಿನಲ್ಲಿಯೇ ಇರುತ್ತಾರೆ ಎಂದು ಕಿಚಾಯಿಸಿದರು. [ಸದನ ಸ್ವಾರಸ್ಯ : ವಚನದಿಂದ ಸಿದ್ದುಗೆ ಗುದ್ದಿದ ದತ್ತಾ]
ರಮಾನಾಥ ರೈ ನಿದ್ದೆ ಮಾಡಿ ಸಿಕ್ಕಿ ಬಿದ್ರು : ವಿಧಾನ ಪರಿಷತ್ ಕಲಾಪದಲ್ಲಿ ತೊಗಾಡಿಯಾ ಅವರ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಸದನದ ಬಾವಿಗಿಳಿದು ಬಿಜೆಪಿ ಧರಣಿ ನಡೆಸುತ್ತಿದ್ದ ವೇಳೆಯಲ್ಲಿ ಅರಣ್ಯ ಇಲಾಖೆ ಸಚಿವ ರಮಾನಾಥ ರೈ ನಿದ್ರೆಗೆ ಜಾರಿದ್ದರು. ಹಿಂದೆ ವಿಧಾನಸಭೆಯಲ್ಲಿಯೂ ಅವರು ನಿದ್ರೆ ಮಾಡಿ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದರು.
ಚಿನ್ನದ ಬಗ್ಗೆ ಪ್ರಶ್ನೆಗಳಿವೆಯೇ? : 'ಚಿನ್ನದ ಬಗ್ಗೆ ಪ್ರಶ್ನೆ ಇದೆಯೇ ಶರವಣ?' ಎಂದು ಸಿಎಂ ಸಿದ್ದರಾಮಯ್ಯ ಪರಿಷತ್ ಸದಸ್ಯ ಟಿ.ಎ.ಶರವಣ ಅವರನ್ನು ಕೇಳಿದರು. ನೀರಿನ ಸಮಸ್ಯೆ ಬಗ್ಗೆ ಶರವಣ ಅವರು ಕೇಳಿದ ಪ್ರಶ್ನೆಗೆ ಸಿಎಂ ಉತ್ತರಿಸಲು ಆರಂಭಿಸಿದರು. ಕುಳಿತುಕೊಳ್ಳಿ ಎಂದು ಸಿಎಂ ಹೇಳಿದರೂ ಶರವಣ ನಿಂತೇ ಇದ್ದರು. ಇದನ್ನು ನೋಡಿದ ಸಿಎಂ ಚಿನ್ನದ ಬಗ್ಗೆ ಪ್ರಶ್ನೆಗಳಿವೆಯೇ? ಎಂದು ಪ್ರಶ್ನಿಸಿದರು.
ಒಂದಾದ ಗೆಳೆಯರು : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ವಿಧಾನಸೌಧದ ಮೊಗಸಾಲೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಕೆಲವು ದಿನಗಳಿಂದ ಕುಮಾರಸ್ವಾಮಿ ವಿರುದ್ಧ ಮುನಿಸಿಕೊಂಡಿರುವ ಜಮೀರ್ ಅಹಮದ್ ಖಾನ್, ಪಕ್ಷದ ಚಟುವಟಿಕೆಯಿಂದ ದೂರವಿದ್ದಾರೆ.












Click it and Unblock the Notifications