ವಿದ್ಯುತ್ ಬೆಲೆ ಏರಿಕೆ ವಿರುದ್ಧ ರೊಚ್ಚಿಗೆದ್ದ ಹೋಟೆಲ್ ಮಾಲೀಕರು: ಸರ್ಕಾರಕ್ಕೆ ಮನವಿ ಏನು?
ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ನಂತರ ಜನರು ರೊಚ್ಚಿಗೆದ್ದು ಆಕ್ರೋಶ ಹೊರಹಾಕುತ್ತಿದ್ದಾರೆ. ಜನರ ಆಕ್ರೋಶದ ನಡುವೆ ಬಿಜೆಪಿ & ಕಾಂಗ್ರೆಸ್ ರಾಜಕೀಯ ಅಸ್ತ್ರ ಬಳಸುತ್ತಿವೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇದೀಗ ಹೋಟೆಲ್ ಮಾಲೀಕರ ಸಂಘ ಕೂಡ ವಿದ್ಯುತ್ ದರ ಏರಿಕೆ ಬಗ್ಗೆ ಮನವಿ ಮಾಡಿದೆ. ಹಾಗಾದ್ರೆ ಹೋಟೆಲ್ ಮಾಲೀಕರ ಬೇಡಿಕೆ ಏನು? ಮುಂದೆ ಓದಿ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಉಚಿತ ವಿದ್ಯುತ್ ಸಿಗುತ್ತದೆ ಅಂತಾ ಖುಷಿಯಲ್ಲಿದ್ದ ಕನ್ನಡಿಗರಿಗೆ ಹಾಲಿ ತಿಂಗಳ ವಿದ್ಯುತ್ ಬಿಲ್ ಶಾಕ್ ಕೊಟ್ಟಿದೆ. ಕೆಲವರಿಗೆ ಬಿಲ್ ಡಬಲ್ ಬಂದ್ರೆ, ಇನ್ನೂ ಕೆಲವರಿಗೆ 3 ಪಟ್ಟು ಹೆಚ್ಚು ಬಂದಿದೆ ಅನ್ನೋ ಆರೋಪ ಕೇಳಿಬರುತ್ತಿದೆ. ಆದರೆ ವಿದ್ಯುತ್ ಬೆಲೆ ಏರಿಕೆ ಮಾಡಿದ್ದು ಯಾರು ಅನ್ನೋದನ್ನ ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಎರಡೂ ಪಕ್ಷಗಳು ಫುಲ್ ಫೈಟ್ ಮಾಡುತ್ತಿವೆ. ಇದೇ ಸಂದರ್ಭದಲ್ಲಿ ಹೋಟೆಲ್ ಮಾಲೀಕರ ಸಂಘ ಕೂಡ ತಮ್ಮ ಅಳಲು ತೋಡಿಕೊಂಡಿದೆ.

ಗಾಯದ ಮೇಲೆ ಬರೆ ಎಳೆದಂತಾಗಿದೆ
ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ವಿಶೇಷ ಪತ್ರ ಬರೆದಿರುವ ಹೋಟೆಲ್ ಮಾಲೀಕರ ಸಂಘ, 'ವಿದ್ಯುತ್ ದರ ಆಗಾಗ ಹೆಚ್ಚಿಸುವುದರಿಂದ ಎಲ್ಲ ಉದ್ಯಮದ ಮಾಲೀಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ, ದರ ಏರಿಕೆಯ ಜೊತೆಗೆ FPPCA (Fuel & Power Purchase Cost Adjustment), Fixed Demand Charges ಹೆಚ್ಚಳವಾಗಿದೆ. ಹಾಗೂ ಏರಿಕೆಯಾಗಿರುವ ದರದ ಮೇಲೂ 9% ತೆರಿಗೆ ಕೂಡ ಹೆಚ್ಚಾಗಿರುತ್ತದೆ. ಇವೆಲ್ಲದರಿಂದ ನಮ್ಮ ಉದ್ಯಮಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಈ ಕೆಳಕಂಡ ಅಂಶಗಳನ್ನು ಪರಿಗಣಿಸಿ ಸಹಕರಿಸಬೇಕಾಗಿ ಕೋರುತ್ತೇವೆ.' ಎಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ ರಾಜ್ಯದ ಹೋಟೆಲ್ ಮಾಲೀಕರು.
ಹೋಟೆಲ್ ಮಾಲೀಕರ ಬೇಡಿಕೆ ಏನು?
1) ವಿದ್ಯುತ್ ದರ ಹೆಚ್ಚಳವನ್ನು ಮುಂದಿನ ಒಂದು ವರ್ಷದ ಅವಧಿಗೆ ಮುಂದೂಡಬೇಕು.
2) ಈಗಿರುವ ವಿದ್ಯುತ್ ತೆರಿಗೆಯನ್ನು 9 ನಿಂದ 3% ಗೆ ಇಳಿಸಬೇಕು.
3) Transmission ಮತ್ತು Distribution ನಲ್ಲಿ ಆಗುವ Loss ಗಳನ್ನು ಕಡಿಮೆ ಮಾಡಬೇಕು.
4) ರಾಜ್ಯ ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳು ಪಾವತಿಸಬೇಕಾದ ಬಾಕಿ ಮೊತ್ತವನ್ನು ಬಡ್ಡಿ ಸಹಿತ ಸಂಗ್ರಹಿಸಬೇಕು.
5) Prepaid ಮೀಟರ್‌ಗಳನ್ನು ಅಳವಡಿಸಿ ಗ್ರಾಹಕರ ಠೇವಣಿ ಹಣವನ್ನು ಹಿಂತಿರುಗಿಸಬೇಕು.
6) ಅನಗತ್ಯ Administration ಖರ್ಚು-ವೆಚ್ಚಗಳನ್ನು ಹತೋಟಿಗೆ ತರುವುದು.
ಹೀಗೆ 'ಇವೆಲ್ಲವನ್ನು ಪರಿಗಣಿಸಿದಲ್ಲಿ ಉದ್ಯಮಿಗಳಾದ ನಮಗೂ ಹಾಗೂ ವಿದ್ಯುತ್ ಇಲಾಖೆಗೂ ಅನುಕೂಲವಾಗುವುದು. ಉದ್ಯಮಿಯಾಗು, ಉದ್ಯೋಗ ಕೊಡು ಎನ್ನುವ ಸರ್ಕಾರದ ಪ್ರಣಾಳಿಕೆಯನ್ನು ಮುಂದುವರೆಸಿಕೊಂಡು ಹೋಗಲು ಸಹಕಾರಿಯಾಗಲಿದೆ' ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.












Click it and Unblock the Notifications