ದೇಶದ್ರೋಹ ಆರೋಪ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು!
ಬೆಂಗಳೂರು: ದೇಶದ ಗಮನವನ್ನೇ ಸೆಳೆದಿದ್ದ ಬೀದರ್‌ನ ಶಾಹೀನ್ ಶಾಲೆ ಆಡಳಿತ ಮಂಡಳಿ ವಿರುದ್ಧದ ಕೇಸ್ ದೊಡ್ಡ ಟ್ವಿಸ್ಟ್ ಪಡೆದುಕೊಂಡಿದೆ. ದೇಶದ್ರೋಹದ ಆರೋಪ ಹೊರಿಸಿ ದಾಖಲಿಸಿದ್ದ ಈ ಪ್ರಕರಣದಲ್ಲಿ ಮಹತ್ವದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ನೀಡಿದೆ. ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠ ನೀಡಿದ ಮಹತ್ವದ ತೀರ್ಪಿನ ಮಾಹಿತಿ ಇಲ್ಲಿದೆ.
2020ರಲ್ಲಿ ಪಿಎಂ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ಟೀಕಿಸಿದ್ದ ನಾಟಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿತ್ತು. ಬೀದರ್ ಶಾಹೀನ್ ಶಾಲೆ ಆಡಳಿತ ಮಂಡಳಿ ವಿರುದ್ಧ ಬೀದರ್ ಮೂಲದವರು ದಾಖಲಿಸಿದ್ದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಕಲಬುರಗಿಯ ಪೀಠ ಮಹತ್ವದ ತೀರ್ಪು ನೀಡಿದೆ. ಶಾಲೆ ವಿರುದ್ಧದ ದೇಶದ್ರೋಹ ಇತರ ಆರೋಪಗಳನ್ನು ಕೈಬಿಟ್ಟಿದೆ. ಇನ್ನು ಶಾಹೀನ್ ಶಾಲಾಡಳಿತದ ಪರ ವಕೀಲ ಅಮಿತ್ ಕುಮಾರ್ ದೇಶಪಾಂಡೆ ವಾದ ಆಲಿಸಿದ ಜಸ್ಟಿಸ್ ಹೇಮಂತ್ ಚಂದನ್‌ಗೌಡರ್ ಈ ಪ್ರಕರಣ ವಜಾಗೊಳಿಸಿದ್ದಾರೆ. ಈ ಪ್ರಕರಣ ಕೆಲವು ವರ್ಷಗಳ ಹಿಂದೆ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿತ್ತು. ಹಾಗಾದರೆ ಈ ಪ್ರಕರಣದ ಹಿನ್ನೆಲೆ ಏನು? ಕೇಸ್ ದಾಖಲಾಗಿದ್ದು ಹೇಗೆ? ತಿಳಿಯೋಣ ಬನ್ನಿ.

ಘಟನೆಯ ಹಿನ್ನೆಲೆ ಏನು? ನಡೆದಿದ್ದು ಹೇಗೆ?
ಅಂದಹಾಗೆ ಅದು ಜನವರಿ 2020, ಕರ್ನಾಟಕದ ಗಡಿ ಜಿಲ್ಲೆ ಬೀದರ್‌ನ ಶಾಹೀನ್ ಶಾಲೆಯ 4, 5, 6ನೇ ತರಗತಿ ವಿದ್ಯಾರ್ಥಿಗಳು ಸಿಎಎ ವಿರೋಧಿ ಕಥಾವಸ್ತು ಹೊಂದಿದ ನಾಟಕವನ್ನ ಪ್ರದರ್ಶಿಸಿದ್ದರು ಎಂದು ಆರೋಪಿಸಲಾಗಿತ್ತು. ಇದೇ ಘಟನೆಗೆ ಸಂಬಂಧಿಸಿ ಶಾಲಾಡಳಿತದ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ಇದೇ ನಾಟಕದಲ್ಲಿ ಪಿಎಂ ಮೋದಿ ಅವರ ವಿರೋಧಿ ಘೋಷಣೆ & ಮತೀಯ ನಿಂದನೆ ಪದ ಇದ್ದವು ಎಂದು ಗಂಭೀರ ಆರೋಪ ಮಾಡಲಾಗಿತ್ತು. ಅಲ್ಲದೆ ಬೀದರ್‌ನ ಪೊಲೀಸರು ನಿಲೇಶ್ ರಕ್ಷಲ ಎಂಬವವರ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 504, 505(2), 124(ಎ), 153(ಎ) ಅನ್ವಯ ಕೇಸ್ ದಾಖಲು ಮಾಡಿದ್ದರು.
ಮಕ್ಕಳ ಮೇಲೆ ಪೊಲೀಸರ ಒತ್ತಡ?
ಹೌದು, ಇಂತಹ ಗಂಭೀರ ಆರೋಪ ಕೂಡ ಇದೇ ಪ್ರಕರಣದಲ್ಲಿ ಕೇಳಿಬಂದಿತ್ತು. ನಾಟಕ ನಡೆದ ಬಳಿಕ ಕೇಸ್ ದಾಖಲಾಗಿತ್ತು, ಆ ನಂತ್ರ ಶಾಲೆ ಆಡಳಿತ ಮಂಡಳಿ ಕೂಡ ಆರೋಪ ನಿರಾಕರಿಸಿತ್ತು. ಆದರೆ ಪೊಲೀಸರು ಮಕ್ಕಳನ್ನ ʻದೇಶ-ವಿರೋಧಿಗಳುʼ ಎಂಬಂತೆ ನೋಡ್ತಾರೆ ಹಾಗೂ ಶಾಲೆಗೆ ಪ್ರತಿದಿನ ಭೇಟಿ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿತ್ತು. ಕೇಸ್‌ನಲ್ಲಿ ಮಕ್ಕಳನ್ನು ವಿಚಾರಣೆ ನಡೆಸುವಾಗ ಸಶಸ್ತ್ರ ಪೊಲೀಸ್ ಅಧಿಕಾರಿಗಳು ಹಾಜರಿದ್ದರು ಎಂದು ಆರೋಪಿಸಲಾಗಿತ್ತು. ಹೀಗೆ ಸಶಸ್ತ್ರ ಪೊಲೀಸ್ ಅಧಿಕಾರಿಗಳ ಉಪಸ್ಥಿತಿ ಬಾಲ ನ್ಯಾಯ ಕಾಯಿದೆ 2015 ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಗಸ್ಟ್ 17, 2021 ರಂದು ಕರ್ನಾಟಕ ಹೈಕೋರ್ಟ್ ಬೆಂಗಳೂರು ಪೀಠವು ಹೇಳಿತ್ತು. ಇಂದು ಈ ಪ್ರಕರಣವನ್ನೇ ವಜಾಗೊಳಿಸಿ ಹೈಕೋರ್ಟ್ ಪೀಠವು ಆದೇಶ ಹೊರಡಿಸಿದೆ.
ಇಷ್ಟೆಲ್ಲದರ ನಡುವೆ ಮಕ್ಕಳ ಹಕ್ಕಿಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಮೂಡಿಗೆರೆಯ ಹಾಲಿ ಶಾಸಕಿ ನಯನಾ ಮೋಟಮ್ಮ ಅರ್ಜಿ ಸಲ್ಲಿಸಿದ್ದರು. 9 ವರ್ಷದಷ್ಟು ಕಿರಿಯ ಮಕ್ಕಳು ಸೇರಿದಂತೆ 85 ಮಕ್ಕಳು ಪೊಲೀಸ್ ವಿಚಾರಣೆ ಎದುರಿಸಬೇಕಾಯಿತು. ಇದು ಮಕ್ಕಳ ಮನಃಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಇನ್ನು ಹೈಕೋರ್ಟ್ ಪೀಠ ನೀಡಿರುವ ತೀರ್ಪಿನಿಂದ ಶಾಲಾ ಆಡಳಿತ ಮಂಡಳಿ ನಿಟ್ಟುಸಿರು ಬಿಟ್ಟಿದೆ. ಹಾಗೇ ಮಕ್ಕಳ ಪೋಷಕರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ. ಶಾಲಾ ಆಡಳಿತ ಮಂಡಳಿ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದೆ. ಇದರ ಜೊತೆಗೆ ಇನ್ನೊಂದು ಮಹತ್ವದ ತೀರ್ಪೊಂದನ್ನು ಹೈಕೋರ್ಟ್ ಪೀಠವು ನೀಡಿದಂತಾಗಿದೆ.












Click it and Unblock the Notifications