PFI Ban: ಕೇಂದ್ರದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು ನವೆಂಬರ್ 30: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಿಷೇಧ ಪ್ರಶ್ನಿಸಿದ ಸಲ್ಲಿಕೆಯಾಗಿ ಅರ್ಜಿಯನ್ನು ಬುಧವಾರ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಅನ್ನು ಕೇಂದ್ರ ಗೃಹ ಇಲಾಖೆ ನಿಷೇಧಿಸಿತ್ತು. ಕೇಂದ್ರ ಈ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸುವ ಮೂಲಕ ಕೇಂದ್ರ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ.
ಉಗ್ರ ಸಂಘಟನೆಗಳ ಜೊತೆ ನಿರಂತರ ಸಂಪರ್ಕದಲ್ಲಿತ್ತು ಎಂದು ಪಿಎಫ್‌ಐ ಸೇರಿದಂತೆ ಒಟ್ಟು ಎಂಟು ಅಂಗ ಸಂಸ್ಥೆಗಳನ್ನು ಕೇಂದ್ರ ಗೃಹ ಇಲಾಖೆ ನಿಷೇಧಿಸಿತ್ತು. ಇದನ್ನು ಪ್ರಶ್ನಿಸಿದ್ದ ಪಿಎಫ್‌ಐ ಕರ್ನಾಟಕ ರಾಜ್ಯಾಧ್ಯಕ್ಷ ನಾಸಿರ್ ಪಾಷಾ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿತು. ಇದರಿಂದ ಪಿಎಫ್‌ಐ ಸೇರಿದಂತೆ ಪಿಎಫ್ಐ ಮೇಲಿನ ನಿಷೇಧ ಮುಂದುವರಿಯಲಿದೆ.

ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ) ಕಾಯ್ದೆ 1967ರ ಸೆಕ್ಷನ್ 3, ಉಪ ನಿಯಮ 3ರ ಅಡಿ ಪಿಎಫ್ಐ ನಿಷೇಧಿಸಿರುವುದು ಕಾನೂನು ಬಾಹಿರವಾಗಿದೆ. ಪಿಎಫ್‌ಐ ಅನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿರುವುದು ಸಂವಿಧಾನ ವಿರೋಧಿ ಕ್ರಮ. ಹೀಗಾಗಿ ಈ ನಿಷೇಧವನ್ನು ತಕ್ಷಣದಿಂದಲೇ ಅನ್ವಯ ಮಾಡಿದ್ದಕ್ಕೆ ಪ್ರತ್ಯೇಕ ಕಾರಣವನ್ನು ಆದೇಶದಲ್ಲಿ ತಿಳಿಸಿಲ್ಲ ಎಂದು ಅರ್ಜಿದಾರರರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಕೇಳಿದ್ದರು. ಅಲ್ಲದೇ ಕೇಂದ್ರ ಸರ್ಕಾರದ ನಿಷೇಧ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ದೇಶದಲ್ಲಿ ಪಿಎಫ್‌ಐ ಸಂಘಟನೆಯಿಂದ ದೇಶಕ್ಕೆ ವಿರುದ್ಧ ಚಟುವಟಿಕೆಗಳು ನಡೆಯುತ್ತಿರುವುದು ಕಂಡು ಬಂದಿದೆ. ಅದು ಭಯೋತ್ಪಾದಕ ಸಂಘಟನೆಗಳ ಜತೆ ನಂಟು ಹೊಂದಿದ್ದು, ಹಿಂಸಾತ್ಮಕ ಕೃತ್ಯ ನಡೆಸುತ್ತಿದೆ. ಪಿಎಫ್‌ಐ ಸಂಘಟನೆಯಿಂದ ದೇಶದಲ್ಲಿ ಭಯದ ವಾತಾವಣ ನಿರ್ಮಾಣವಾಗಿದೆ. ಈ ಸಂಬಂಧ ಕೇಂದ್ರ ನಿಷೇಧಿಸಿದೆ ಎಂದು ಸರ್ಕಾರದ ಪರ ವಕೀಲರು ಸಮರ್ಥಿಸಿಕೊಂಡರು.

ಸೆಪ್ಟೆಂಬರ್ 28ರಂದು ಪಿಎಫ್‌ಐ ನಿಷೇಧ
ಕೇಂದ್ರ ಗೃಹ ಇಲಾಖೆ ಕಳೆದ ಸೆಪ್ಟೆಂಬರ್ 28 ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಟನೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಐದು ವರ್ಷಗಳವರೆಗೆ ನಿಷೇಧಿಸಿ ಆದೇಶಿಸಿತ್ತು. ದೇಶಾದ್ಯಂತ ಪಿಎಫ್‌ಐ ಸಂಘಟನೆ ಮೇಲೆ ದಾಳಿ ಹಾಗೂ ಸಂಘಟನೆಯ ಅನೇಕ ಮುಖಂಡರು, ಕಾರ್ಯಕರ್ತರ ಬಂಧನದ ಬಳಿಕ ಪಿಎಫ್ಐ ಅಗತ್ಯ ದಾಖಲೆ ಸಹಿತ ಕೇಂದ್ರ ಸರ್ಕಾರ ಸಂಘಟನೆಯನ್ನು ನಿಷೇಧಿಸಿತ್ತು.












Click it and Unblock the Notifications