ಮದುವೆ ಭರವಸೆ ನೀಡಿ ವಂಚನೆ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕರ್ನಾಟಕ ಹೈಕೋರ್ಟ್, 7 ಲಕ್ಷ ದಂಡ

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ, ಸುಳ್ಳು ಭರವಸೆ ನೀಡಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಕರ್ನಾಟಕ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಕೇವಲ ಯುವಕ ಮತ್ತು ಯುವತಿ ಪ್ರೀತಿಯಲ್ಲಿದ್ದರು ಎಂಬ ಕಾರಣಕ್ಕೆ, ಮದುವೆಯ ಭರವಸೆಯ ಮೇಲೆ ನಡೆದ ದೈಹಿಕ ಸಂಪರ್ಕವನ್ನ ಒಪ್ಪಿತ ಲೈಂಗಿಕ ಕ್ರಿಯೆ (Consensual sex) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಈ ಹಿಂದೆ ವಿಚಾರಣಾ ನ್ಯಾಯಾಲಯವು ಆರೋಪಿಯನ್ನ ಖುಲಾಸೆಗೊಳಿಸಿತ್ತು. ಇದನ್ನ ಪ್ರಶ್ನಿಸಿ ಸಂತ್ರಸ್ತೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಮತ್ತು ನ್ಯಾಯಮೂರ್ತಿ ಬಿ. ಪ್ರಮೋದ್ ಅವರಿದ್ದ ವಿಭಾಗೀಯ ಪೀಠವು, ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 7 ಲಕ್ಷ ರೂಪಾಯಿ ದಂಡ ವಿಧಿಸಿದೆ.

Karnataka High Court Awards Life Imprisonment to Man for Rape Under False Promise of Marriage

ಮದುವೆಯ ಸುಳ್ಳು ಭರವಸೆ: ಒಪ್ಪಿತ ಲೈಂಗಿಕ ಕ್ರಿಯೆ ಅಲ್ಲ

ಆರೋಪಿ ಮತ್ತು ಸಂತ್ರಸ್ತೆಗೆ ಶಾಲಾ ದಿನಗಳಿಂದಲೂ ಪರಿಚಯವಿತ್ತು. ಇದೇ ಪರಿಚಯದ ಲಾಭ ಪಡೆದ ಆರೋಪಿ, ಯುವತಿಯನ್ನ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಆಕೆ ಗರ್ಭಿಣಿಯಾದಾಗ, ಆಕೆಗೆ ಬೆದರಿಕೆ ಹಾಕಿ ಭ್ರೂಣಹತ್ಯೆ ಮಾಡುವಂತೆ ಒತ್ತಾಯಿಸಿದ್ದನು. ಯುವತಿ ಮದುವೆಗೆ ಪಟ್ಟು ಹಿಡಿದಾಗ, ಆಕೆಯ ಕುತ್ತಿಗೆಗೆ ದುಪಟ್ಟಾ ಬಿಗಿದು ಕೊಲೆ ಮಾಡಲು ಯತ್ನಿಸಿದ್ದನು.

ಆದರೆ, ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಕೆಳಹಂತದ ನ್ಯಾಯಾಲಯವು, ಇಬ್ಬರೂ ಪರಸ್ಪರ ಒಪ್ಪಿಗೆಯಿಂದಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು ಎಂದು ನಿರ್ಣಯಿಸಿ ಆರೋಪಿಯನ್ನ ದೋಷಮುಕ್ತಗೊಳಿಸಿತ್ತು. ಮದುವೆಯ ಭರವಸೆ ನೀಡಿ ಒಪ್ಪಿಗೆ ಪಡೆದ ವಿಚಾರವನ್ನ ಸರಿಯಾಗಿ ಪರಿಗಣಿಸಲು ವಿಚಾರಣಾ ನ್ಯಾಯಾಲಯ ವಿಫಲವಾಗಿತ್ತು ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

"ಮದುವೆಯಾಗುವ ಸುಳ್ಳು ಭರವಸೆಯ ಮೇಲೆ ಮುಂದುವರಿಸಿದ ಲೈಂಗಿಕ ಕ್ರಿಯೆಯನ್ನ ಯಾವುದೇ ಕಾರಣಕ್ಕೂ ಒಪ್ಪಿತ ದೈಹಿಕ ಸಂಪರ್ಕ ಎಂದು ಕರೆಯಲಾಗದು" ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ನಿರ್ಣಾಯಕವಾದ ಡಿಎನ್‌ಎ ವರದಿ ಮತ್ತು ಸಾಕ್ಷ್ಯ

ಪ್ರಕರಣದ ವಿಚಾರಣೆಯಲ್ಲಿ ವೈದ್ಯಕೀಯ ಸಾಕ್ಷ್ಯ ಮತ್ತು ಡಿಎನ್‌ಎ ವರದಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಸಂತ್ರಸ್ತೆಯು ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ವೈದ್ಯಕೀಯ ಪರೀಕ್ಷೆ ಮತ್ತು ಡಿಎನ್‌ಎ ವರದಿಯು ಆರೋಪಿಯೇ ಆ ಮಗುವಿನ ತಂದೆ ಎಂಬುದನ್ನ ಸಾಬೀತುಪಡಿಸಿತ್ತು. ಆದರೆ, ವಿಚಾರಣಾ ನ್ಯಾಯಾಲಯವು ಈ ಪ್ರಮುಖ ವೈಜ್ಞಾನಿಕ ಸಾಕ್ಷ್ಯವನ್ನ ಮತ್ತು ಸಂತ್ರಸ್ತೆಯ ಹೇಳಿಕೆಗಳನ್ನು ಸರಿಯಾಗಿ ವಿಶ್ಲೇಷಣೆ ಮಾಡದೆ ಆರೋಪಿಯನ್ನ ಬಿಡುಗಡೆ ಮಾಡಿತ್ತು.

ಹೈಕೋರ್ಟ್ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಸಾಕ್ಷ್ಯಾಧಾರಗಳನ್ನ ಕಡೆಗಣಿಸಿ ಕೇವಲ ಸಂಬಂಧವನ್ನಷ್ಟೇ ಮುಂದಿಟ್ಟುಕೊಂಡು ಆರೋಪಿಯನ್ನ ಖುಲಾಸೆಗೊಳಿಸಿದ್ದು ತಪ್ಪು ಎಂದು ಹೇಳಿದೆ. ಸಂತ್ರಸ್ತೆಯು ಆರೋಪಿಯ ಮದುವೆಯ ಭರವಸೆಯನ್ನ ಸಂಪೂರ್ಣವಾಗಿ ನಂಬಿದ್ದಳು, ಆತ ತನಗೆ ಮೋಸ ಮಾಡುತ್ತಾನೆ ಎಂದು ಆಕೆ ಊಹಿಸಿರಲಿಲ್ಲ ಎಂಬುದನ್ನು ಸಾಕ್ಷಿಗಳು ಖಚಿತಪಡಿಸಿವೆ ಎಂದು ಕೋರ್ಟ್ ಉಲ್ಲೇಖಿಸಿದೆ.

ಜೀವಾವಧಿ ಶಿಕ್ಷೆ ಹಾಗೂ ಮಗುವಿನ ಭವಿಷ್ಯಕ್ಕೆ ಪರಿಹಾರ

ಆರೋಪಿಯ ಈ ಕೃತ್ಯದಿಂದಾಗಿ ಸಂತ್ರಸ್ತೆಯ ಜೀವನ ಸಂಪೂರ್ಣವಾಗಿ ಹಾಳಾಗಿದೆ. ಮಾತ್ರವಲ್ಲದೆ, ಆಕೆಗೆ ಜನಿಸಿದ ಮಗುವಿನ ಸಾಮಾಜಿಕ ಸ್ಥಾನಮಾನದ ಬಗ್ಗೆಯೂ ಆರೋಪಿಗೆ ಯಾವುದೇ ಕಾಳಜಿ ಇಲ್ಲ. ಈ ಎಲ್ಲಾ ಅಂಶಗಳನ್ನ ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ದೋಷಿಗೆ ಜೀವಾವಧಿ ಶಿಕ್ಷೆಯನ್ನ ವಿಧಿಸಿದೆ. ಇದರ ಜೊತೆಗೆ 7 ಲಕ್ಷ ರೂ. ದಂಡವನ್ನು ವಿಧಿಸಲಾಗಿದ್ದು, ಅದರಲ್ಲಿ 5 ಲಕ್ಷ ರೂಪಾಯಿಗಳನ್ನು ಸಂತ್ರಸ್ತೆಯ ಹೆಣ್ಣು ಮಗುವಿನ ಹೆಸರಿನಲ್ಲಿ ಫಿಕ್ಸ್‌ಡ್‌ ಡೆಪೋಸಿಟ್‌ ಆಗಿ ಇಡುವಂತೆ ಆದೇಶಿಸಿದೆ. ಉಳಿದ ಮೊತ್ತವನ್ನು ಸಂತ್ರಸ್ತೆಗೆ ನೀಡುವಂತೆ ಸೂಚಿಸಿದೆ.

ಇದರ ಹೊರತಾಗಿ, ಸಂತ್ರಸ್ತೆ ಮತ್ತು ಆಕೆಯ ಮಗುವಿನ ಪ್ರಸ್ತುತ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಅವರಿಗೆ ಗರಿಷ್ಠ ಆರ್ಥಿಕ ಪರಿಹಾರವನ್ನು ಒದಗಿಸುವಂತೆಯೂ ನ್ಯಾಯಾಲಯವು ನಿರ್ದೇಶನ ನೀಡಿದೆ.

ಹೈಕೋರ್ಟ್‌ನ ಈ ಮಹತ್ವದ ತೀರ್ಪು ಭವಿಷ್ಯದಲ್ಲಿ ಇಂತಹ ಪ್ರಕರಣಗಳಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ಮಹಿಳೆಯರನ್ನು ವಂಚಿಸಿ ದೈಹಿಕವಾಗಿ ಬಳಸಿಕೊಳ್ಳುವ ಕಿಡಿಗೇಡಿಗಳಿಗೆ ಈ ತೀರ್ಪು ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಕೇವಲ ಪ್ರೇಮ ಸಂಬಂಧವಿತ್ತು ಎಂಬ ಕಾರಣಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂಬುದನ್ನ ಕೋರ್ಟ್‌ ಎತ್ತಿ ಹಿಡಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+