ನೀಟ್ ಮುಂದೂಡಿಕೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು, ಜೂನ್ 17: ಕೋವಿಡ್19 ಹಿನ್ನೆಲೆಯಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ಮುಂದೂಡಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಏಪ್ರಿಲ್ 8ಕ್ಕೆ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪರೀಕ್ಷೆ ನಿಗದಿಯಾಗಿತ್ತು. ಆದರೆ, ಪರೀಕ್ಷೆಗಳನ್ನು ನಾಲ್ಕು ತಿಂಗಳ ಕಾಲ ಮುಂದೂಡಲಾಗಿದೆ.
ನೀಟ್ ಪರೀಕ್ಷೆ ಮುಂದೂಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ದಿವಂಗತ ಜಿ ಬಿ ಕುಲಕರ್ಣಿ ಸ್ಮಾರಕ ಕಾನೂನು ಟ್ರಸ್ಟ್ ಅಧ್ಯಕ್ಷ ಡಾ. ವಿನೋದ್ ಕುಲಕರ್ಣಿ ಪ್ರಶ್ನಿಸಿದ್ದರು. ಪರೀಕ್ಷೆ ಮುಂದೂಡಿರುವುದರಿಂದ ಸ್ನಾತಕೋತ್ತರ ಪದವಿ ಆಕಾಂಕ್ಷಿಗಳು ಒತ್ತಡ, ಆತಂಕ ಮತ್ತು ಖಿನ್ನತೆಗೆ ಒಳಗಾಗಿದ್ದಾರೆ. ಸಾಂಕ್ರಾಮಿಕತೆಯ ನಡುವೆ ಎಲ್ಲಾ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ನೀಟ್ ಪರೀಕ್ಷೆ ಮುಂದೂಡುವುದರಲ್ಲಿ ಅರ್ಥವಿಲ್ಲ ಎಂದು ವಾದಿಸಿದ್ದರು.
''ನೀಟ್ ಪರೀಕ್ಷೆಯನ್ನು ಆಗಸ್ಟ್ 31ರ ಬಳಿಕ ನಡೆಸುವ ಕೇಂದ್ರ ಸರ್ಕಾರದ ನಿರ್ಧಾರದಲ್ಲಿ ತಪ್ಪು ಹುಡುಕುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ತಜ್ಞರ ಸಲಹೆ ಆಧರಿಸಿ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದ್ದು, ಎರಡನೇ ಪ್ರತಿವಾದಿಯಾದ ಇಲಾಖೆಯು ಎಚ್ಚರಿಕೆ ವಹಿಸಿದೆ'' ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಹಂಚಾಟೆ ಸಂಜೀವ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
''ಕೋವಿಡ್ ಸಾಂಕ್ರಾಮಿಕತೆ ಈಗ ಹೆಚ್ಚು ತೀವ್ರವಾಗಿದೆ. ಎರಡನೇ ಅಲೆ ಎಂದು ಬಿಂಬಿತವಾಗಿರುವ ಸಾಂಕ್ರಾಮಿಕತೆಯು ಎಲ್ಲಾ ಸಮುದಾಯದವರಿಗೆ ಸಮಸ್ಯೆ ಉಂಟು ಮಾಡಿದ್ದು, ಮಾರ್ಚ್, ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿವೆ. ಕೊರೊನಾ ಸೋಂಕು ಮತ್ತು ಸಾವಿನ ಪ್ರಕರಣಗಳು ತುತ್ತ ತುದಿಗೇರಿರುವುದು ಮತ್ತು ರೋಗದಿಂದ ಗುಣಮುಖವಾದ ನಂತರವೂ ಜನರಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಆಗಸ್ಟ್ 31ರ ನಂತರ ಪರೀಕ್ಷೆ ನಡೆಸುವ ನಿರ್ಧಾರ ಪ್ರಕಟಿಸಿದೆ,'' ಎಂದು ವಿಭಾಗೀಯ ಪೀಠವು ತನ್ನ ಆದೇಶದಲ್ಲಿ ಹೇಳಿದೆ.(ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್).