ಚಿತ್ತಾಪುರ: RSS ಪಥಸಂಚಲನಕ್ಕೆ ಷರತ್ತುಬದ್ಧ ಕೋರ್ಟ್ ಅನುಮತಿ: ಸರ್ಕಾರಕ್ಕೆ ಮುಖಭಂಗ ಎಂದ ಬಿಜೆಪಿ
ಬೆಂಗಳೂರು, ನವೆಂಬರ್ 13: ರಾಷ್ಟ್ರೀಯ ಸ್ವಯಂ ಸೇವಾ ಸಂಘ (RSS) ಪಥಸಂಚಲನಕ್ಕೆ ಹೈಕೋರ್ಟ್ ಗುರುವಾರ ಷರತ್ತುಬದ್ಧ ಅನುಮತಿ ನೀಡಿದೆ. ಇದರ ಬೆನ್ನಲ್ಲೆ ರಾಜ್ಯ ಬಿಜೆಪಿಯು ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದೆ. ಅಕವಾಶ ನೀಡಲ್ಲ ಎಂದು ಹೇಳಿದ್ದ ಸರ್ವಾಧಿಕಾರಿ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಭಾರೀ ಮುಖಭಂಗವಾಗಿದೆ ಎಂದು ತಿಳಿಸಿದೆ.
ಹೈಕೋರ್ಟ್ ಅನುಮತಿ ನೀಡುತ್ತಿದ್ದಂತೆ ಇದೇ ನವೆಂಬರ್ 16 ರಂದು ಭಾನುವಾರ ಕಲಬುರಗಿಯ ಚಿತ್ತಾಪುರದಲ್ಲಿ RSS ಪಥಸಂಚಲನ ನಡೆಸಲಾಗುವುದು ಎಂದು ಬಿಜೆಪಿ ತಿಳಿಸಿ ಎಕ್ಸ್ ಪೋಸ್ಟ್ ಮಾಡಿದೆ. "ಇಡೀ ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ RSS ಪಥ ಸಂಚಲನ ಮಾಡಬಹುದು. ಆದರೆ, ಕರ್ನಾಟಕದ ಚಿತ್ತಾಪುರದಲ್ಲಿ ಪಥ ಸಂಚಲನ ಮಾಡುವುದಕ್ಕೆ ಅವಕಾಶವಿಲ್ಲ ಎಂದು ತಗಾದೆ ತೆಗೆದಿದ್ದ ಸರ್ವಾಧಿಕಾರಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಇದೀಗ ಭಾರೀ ಮುಖಭಂಗವಾಗಿದೆ'.

"ಮಿಸ್ಟರ್ ಪ್ರಿಯಾಂಕ್ ಖರ್ಗೆ ಅವರೇ, ಚಿತ್ತಾಪುರವೇನು ಪಾಕಿಸ್ತಾನದಲ್ಲಿದೆಯೇ? ಭಾನುವಾರ ಚಿತ್ತಾಪುರದಲ್ಲಿ "ನಮಸ್ತೇ ಸದಾ ವತ್ಸಲೇ ಮಾತೃಭೂಮೇ, ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಮ್..' ಗೀತೆ ಧ್ವನಿಸಲಿದೆ ಎಂದು ಸರ್ಕಾರ ನಡೆಯ ಬಗ್ಗೆ ಕಿಡಿ ಕಾರಿದೆ. ಇದರ ಬೆನ್ನಲ್ಲೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಹ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
"ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ. ಸಂವಿಧಾನಕ್ಕೆ ತಲೆಬಾಗಿದರೆ ಮಾತ್ರ ಬದುಕು ಸುಂದರ. ಸಂವಿಧಾನಕ್ಕೆ ಸವಾಲು ಹಾಕಿದರೆ ಬದುಕು ದುಸ್ಥರ! ಆರ್ಎಸ್ಎಸ್ ಎಂಬ ಸಂಘಟನೆಗೆ ಈ ಸತ್ಯದ ಅರಿವಾಗಿದೆ ಎಂದು ಭಾವಿಸಿದ್ದೇನೆ. ಸಂವಿಧಾನ, ಕಾನೂನುಗಳು ನಮಗೆ ಅನ್ವಯಿಸುವುದಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದ RSS ಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ' ಎಂದು ಕುಟುಕಿದ್ದಾರೆ.
"ಯಾವುದೇ ಸಂಘಗಳು, ವ್ಯಕ್ತಿಗಳು ಇದನ್ನು ಅರ್ಥೈಸಿಕೊಂಡು ನೀತಿ, ನಿಯಮಗಳಿಗೆ ಬದ್ಧರಾಗಿ ನಡೆಯಬೇಕು. ಸರ್ಕಾರ ಮತ್ತು ಕಲಬುರಗಿ ಜಿಲ್ಲಾಡಳಿತ ರೂಪಿಸಿರುವ ಮಾನದಂಡಗಳನ್ನು ಒಪ್ಪಬೇಕು. ನಿಯಮಗಳಿಗೆ ಅನುಸಾರವಾಗಿ ಆರ್ಎಸ್ಎಸ್ ತಮ್ಮ ಕಾರ್ಯಕ್ರಮ ನಡೆಸಬೇಕು ಇದರ ಹೊರತಾಗಿ ಯಾವುದೇ ಅತಿ ಬುದ್ದಿವಂತಿಕೆಗೂ ಅವಕಾಶವಿಲ್ಲ' ಎಂದರು.
ಪಥಸಂಚಲನದಲ್ಲಿ 300 ಜನರು ಮಾತ್ರ ಭಾಗವಹಿಸಬೇಕು. ಸರ್ಕಾರ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಚಿತ್ತಾಪುರದ ಹೊರಗಿನವರು ಭಾಗಿಯಾಗುವಂತಿಲ್ಲ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡುವಂತಿಲ್ಲ ಎಂದು ಕೋರ್ಟ್ ವಿಧಿಸಿದ ಷರತ್ತನ್ನು ಸಚಿವರು ಬಿಜೆಪಿಗೆ ಪುನರುಚ್ಚರಿಸಿದ್ದಾರೆ.
ಈ ನಿಯಮಗಳ ಮೂಲಕ ಸರ್ಕಾರ ತೋರಿದ ಉದಾರತೆಯನ್ನು, ಕಲಬುರಗಿ ಜಿಲ್ಲಾಡಳಿತ ತೋರಿದ ಸಹನೆಯನ್ನು ಗೌರವಿಸಿ ತಮ್ಮ ಕಾರ್ಯಕ್ರಮವನ್ನು ಪೂರೈಸಿಕೊಳ್ಳಬೇಕು ಎಂದು ಹೇಳಿದರು.












Click it and Unblock the Notifications