ಮುಂದೇನು: ಕರ್ನಾಟಕದಲ್ಲಿ 4 ದಿನಕ್ಕೆ ಕೊರೊನಾ ಲಸಿಕೆ ಖಾಲಿ!
ಬೆಂಗಳೂರು, ಮಾರ್ಚ್ 23: ಕೊರೊನಾವೈರಸ್ 2ನೇ ಅಲೆಯು ಕರ್ನಾಟಕದಲ್ಲಿ ಹೊಸ ಆತಂಕ ಸೃಷ್ಟಿಸುತ್ತಿದೆ. ಕೇಂದ್ರ ಸರ್ಕಾರ ಲಸಿಕೆ ವಿತರಣೆ ವೇಗವನ್ನು ಹೆಚ್ಚಿಸಲು ಸಲಹೆ ನೀಡುತ್ತಿದೆ. ಆದರೆ ಸರ್ಕಾರದ ಬಳಿ ಸಂಗ್ರಹಿಸಿರುವ ಲಸಿಕೆ ಪ್ರಮಾಣವು ಇನ್ನು ನಾಲ್ಕು ದಿನಗಳಿಗಷ್ಟೇ ಸಾಕಾಗುತ್ತದೆ.
ಕರ್ನಾಟಕದಲ್ಲಿ ಕೊರೊನಾವೈರಸ್ ಲಸಿಕೆ ಸಂಗ್ರಹವು ಖಾಲಿ ಆಗಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಮುಂದಿನ ನಾಲ್ಕು ದಿನಗಳ ಮಟ್ಟಿಗೆ ಸಾಕಾಗುವಷ್ಟು ಲಸಿಕೆ ಮಾತ್ರ ಸರ್ಕಾರದ ಬಳಿಯಿದೆ.
ಕೊರೊನಾವೈರಸ್ ಲಸಿಕೆ ಬೇಕಾದಲ್ಲಿ ರಾಜ್ಯಗಳು ಇನ್ನೂ ಎರಡು ವಾರಗಳ ಕಾಲ ಕಾಯಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಕರ್ನಾಟಕದಲ್ಲಿ ಲಸಿಕೆ ವಿತರಣೆ ಮತ್ತು ಹೊಸ ಸೋಂಕಿತ ಪ್ರಕರಣಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಲಸಿಕೆ ವಿತರಣೆಗೆ ಯಾವುದೇ ತೊಂದರೆಯಿಲ್ಲ
ಕರ್ನಾಟಕದಲ್ಲಿ ನಮ್ಮ ಬಳಿಯಿರುವ ಕೊರೊನಾವೈರಸ್ ಲಸಿಕೆಯು ನಾಲ್ಕು ದಿನಗಳ ಮಟ್ಟಿಗೆ ಸಾಕಾಗುತ್ತದೆ. ಆದರೆ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಲಸಿಕೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ನಾವು ಕೊರೊನಾವೈರಸ್ ಲಸಿಕೆ ಕಳುಹಿಸುವಂತೆ ಕೇಂದ್ರ ಸರ್ಕಾರದ ಬಳಿ ಮಾತನಾಡಿದ್ದೇವೆ. ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದಿಂದ ಲಸಿಕೆ ಸರಬರಾಜು ಮಾಡುವ ನಿರೀಕ್ಷೆಯಿದೆ. ಸಾರ್ವಜನಿಕರು ಯಾವುದೇ ರೀತಿ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಕೊರೊನಾ ಲಸಿಕೆ ಪಡೆದವರ ಸಂಖ್ಯೆ ಎಷ್ಟು?
ಕರ್ನಾಟಕದಲ್ಲಿ ಈವರೆಗೂ 60 ವರ್ಷಕ್ಕಿಂತ ಮೇಲ್ಪಟ್ಟ 11,73,848 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. 45 ವರ್ಷ ಮೇಲ್ಪಟ್ಟ 3,09,660 ಜನರಿಗೆ ಕೊವಿಡ್-19 ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದು, ಹಲವು ಎರಡನೇ ಡೋಸ್ ಲಸಿಕೆ ಪಡೆಯಲು ನಿರೀಕ್ಷೆಯಲ್ಲಿದ್ದಾರೆ. ಎರಡನೇ ಡೋಸ್ ಪಡೆಯಲು ನಿರೀಕ್ಷೆಯಲ್ಲಿ ಫಲಾನುಭವಿಗಳು ಇರುವ ಸಂದರ್ಭದಲ್ಲೇ ಲಸಿಕೆಯ ಅಭಾವ ಎದುರಾಗಿದೆ. ಇದರ ಮಧ್ಯೆ ವೈಜ್ಞಾನಿಕ ಕಾರಣದಿಂದಾಗಿ ಕೊವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದವರು 6 ರಿಂದ 8 ವಾರಗಳ ನಂತರ ಎರಡನೇ ಡೋಸ್ ಲಸಿಕೆ ಪಡೆಯಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಕೊರೊನಾ 2ನೇ ಅಲೆ ನಡುವೆ ಲಸಿಕೆ ಅಭಾವ ಒಳಿತಲ್ಲ
ಕರ್ನಾಟಕದಲ್ಲಿ ಎರಡನೇ ಡೋಸ್ ಲಸಿಕೆ ಪಡೆಯಲು ಫಲಾನುಭವಿಗಳು ಎದುರು ನೋಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೊರೊನಾವೈರಸ್ ಲಸಿಕೆಯು ಸರಿಯಾದ ಸಮಯಕ್ಕೆ ರಾಜ್ಯಕ್ಕೆ ತಲುಪಬೇಕಿದೆ. ಇಲ್ಲದೇ ಹೋದಲ್ಲಿ ಲಸಿಕೆ ವಿತರಣೆ ವೇಗ ಕುಗ್ಗುತ್ತದೆ. ರಾಜ್ಯದಲ್ಲಿ ಕೊವಿಡ್-19 ಸೋಂಕಿನ ಎರಡನೇ ಅಲೆಯ ಅಪಾಯ ಹೆಚ್ಚುತ್ತಿರುವ ಇಂಥ ಸಂದರ್ಭದಲ್ಲಿ ಲಸಿಕೆ ವಿತರಣೆಗೆ ತೊಂದರೆ ಆಗುವುದರಿಂದ ಅಪಾಯ ಹೆಚ್ಚಾಗುತ್ತದೆ ಎಂದು ಹಿರಿಯ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಭಾರತದಲ್ಲಿ ದಿನವೂ 1 ಕೋಟಿ ಜನರಿಗೆ ಲಸಿಕೆ ವಿತರಣೆ
ದೇಶದಲ್ಲಿ ಪ್ರತಿನಿತ್ಯ ಒಂದು ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡುವ ಗುರಿ ಹೊಂದಬೇಕಿದೆ. ಅದೇ ನಿಟ್ಟಿನಲ್ಲಿ ಲಸಿಕೆ ಸರಬರಾಜು ಮತ್ತು ಉತ್ಪಾದನೆ ವೇಗವನ್ನು ಹೆಚ್ಚಿಸಬೇಕಿದೆ. ಇದರ ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೊವಿಡ್-19 ಲಸಿಕೆಯ ಬಳಕೆಗೂ ಕೇಂದ್ರ ಸರ್ಕಾರವು ಅನುಮೋದನೆ ನೀಡಬೇಕಿದೆ. ಕೇಂದ್ರ ಸರ್ಕಾರದ ತುರ್ತು ಬಳಕೆ ಪ್ರಾಧಿಕಾರ ಇನ್ನಷ್ಟು ಲಸಿಕೆಗಳಿಗೆ ಅನುಮೋದನೆ ನೀಡುವ ಅಗತ್ಯವಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಲಸಿಕೆ ವಿತರಣೆ ಫಲಾನುಭವಿಗಳ ವ್ಯಾಪ್ತಿ
ಕೇಂದ್ರ ಸರ್ಕಾರವು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ಮತ್ತು ಸಾವಿನ ಪ್ರಮಾಣ ತಗ್ಗಿಸುವ ಉದ್ದೇಶದಿಂದ ಲಸಿಕೆ ವಿತರಣೆಗೆ ನಿರ್ದಿಷ್ಟ ವ್ಯಾಪ್ತಿಯನ್ನು ಹಾಕಿಕೊಳ್ಳಲಾಗಿದೆ. ವೈದ್ಯಕೀಯ ಸಿಬ್ಬಂದಿ, ಮೊದಲ ಶ್ರೇಣಿ ಕಾರ್ಮಿಕರು, 60 ವರ್ಷ ಮೇಲ್ಪಟ್ಟವರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊವಿಡ್-19 ಲಸಿಕೆಯನ್ನು ನೀಡಲಾಗುತ್ತಿದೆ. ಆ ಮೂಲಕ ಆರೋಗ್ಯ ಸುರಕ್ಷತೆ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಗಿರಿಧರ್ ಬಾಬು ತಿಳಿಸಿದ್ದಾರೆ.

ದೇಶದಲ್ಲಿ ಲಸಿಕೆ ಪಡೆದವರ ಒಟ್ಟು ಸಂಖ್ಯೆ ಎಷ್ಟಿದೆ?
ಭಾರತದಲ್ಲಿ 66 ದಿನಗಳಲ್ಲಿ 4,72,07,134 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. 78,30,626 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 49,30,888 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 81,72,121 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 27,93,013 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. ಎರಡನೇ ಹಂತದ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಮಾರ್ಚ್.01ರಿಂದ ಆರಂಭವಾಗಿದ್ದು, ಈವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ 4072747 ಜನರಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ 1,94,07,739 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.












Click it and Unblock the Notifications