Gruha Lakshmi: ಗೃಹ ಲಕ್ಷ್ಮಿ ಯೋಜನೆಗೆ ರಾಹುಲ್‌ರಿಂದ ಚಾಲನೆ- ಎಲ್ಲಿ ಉದ್ಘಾಟನೆ? ಹಣ ವರ್ಗಾವಣೆ ಯಾವಾಗ? ವಿವರ ತಿಳಿಯಿರಿ
ಬೆಂಗಳೂರು, ಆಗಸ್ಟ್ 11: ಕರ್ನಾಟಕ ಸರ್ಕಾರವು ಆಗಸ್ಟ್ 27 ರಂದು ಬಹು ನಿರೀಕ್ಷಿತ 'ಗೃಹ ಲಕ್ಷ್ಮಿ' ಯೋಜನೆಗೆ ಚಾಲನೆ ನೀಡಲು ನಿರ್ಧರಿಸಿದೆ. ಈ ಯೋಜನೆಯ ಮೂಲಕ ಮನೆ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಗೃಹಲಕ್ಷಿ ಯೋಜನೆಗೆ ಚಾಲನೆ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳೊಂದಿಗೆ ವರ್ಚುವಲ್ ಸಭೆ ನಡೆಸಿದರು.

ಯೋಜನೆಗಾಗಿ ನಡೆಯುತ್ತಿರುವ ನೋಂದಣಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಪಸ್ಥಿತರಿದ್ದರು.
ಆಗಸ್ಟ್ 27 ರಂದು ಬೆಳಗಾವಿಯಲ್ಲಿ ನಡೆಯುವ ಬೃಹತ್ ಸಮಾರಂಭದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದರು.

ಒಂದು ಕೋಟಿಗೂ ಹೆಚ್ಚು ಮಹಿಳೆಯರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದು, ನೋಂದಣಿಗೆ ಯಾವುದೇ ಗಡುವು ನೀಡಲಾಗಿಲ್ಲ. ಅರ್ಹ ಮಹಿಳೆಯರು ಯಾವಾಗ ಬೇಕಾದರೂ ನೋಂದಾಯಿಸಿಕೊಳ್ಳಬಹುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಹೆಸರನ್ನು ನಮೂದಿಸಿರುವ ಮಹಿಳೆ ಈ ಯೋಜನೆಗೆ ಅರ್ಹಳು. ಆದಾಗ್ಯೂ, ಫಲಾನುಭವಿ ಅಥವಾ ಅವರ ಪತಿ ಆದಾಯ ತೆರಿಗೆ ರಿಟರ್ನ್ಸ್ ಅಥವಾ ಕ್ಲೈಮ್ಸ್, ಸರಕು ಮತ್ತು ಸೇವಾ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸುವವರಾಗಿರಬಾರದು.
ಈ ಮೊದಲು ಗೃಹ ಲಕ್ಷ್ಮೀ ಯೋಜನೆಯನ್ನು ಆಗಸ್ಟ್ 20 ರಂದು ಪ್ರಾರಂಭಿಸಲು ಯೋಜಿಸಲಾಗಿತ್ತು. ಆದರೆ, ಈಗ ಅದನ್ನು ಆಗಸ್ಟ್ 27 ಕ್ಕೆ ಮುಂದೂಡಲಾಗಿದೆ.

'ಗೃಹ ಲಕ್ಷ್ಮಿ' ನೋಂದಣಿಗೆ ಅಗತ್ಯವಿರುವ ದಾಖಲೆಗಳ ಪಟ್ಟಿ
1 ಮಹಿಳೆಯರ ಆಧಾರ್ ಕಾರ್ಡ್
2 ಫಲಾನುಭವಿಗಳ ಪತಿಯ ಆಧಾರ್ ಕಾರ್ಡ್
3 ಪಡಿತರ ಚೀಟಿ ಅಥವಾ ಬಡತನ ರೇಖೆಗಿಂತ ಕೆಳಗಿರುವ (BPL) ಕಾರ್ಡ್ ಅಥವಾ ಬಡತನ ರೇಖೆಗಿಂತ ಮೇಲಿನ (APL) ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್
4 ಬ್ಯಾಂಕ್ ಪಾಸ್ಬುಕ್
ಮೇಲೆ ತಿಳಿಸಿದ ಕಾರ್ಡ್‌ಗಳಲ್ಲಿ ಕುಟುಂಬದ ಮುಖ್ಯಸ್ಥರಾಗಿ ಹೆಸರನ್ನು ನಮೂದಿಸಿರುವ ಮಹಿಳೆಯರು ಯೋಜನೆಗೆ ಅರ್ಹರು ಎಂದು ಸರ್ಕಾರ ಹೇಳಿದೆ.
ಒಂದು ಕುಟುಂಬದಲ್ಲಿ ಒಬ್ಬ ಮಹಿಳೆ ಮಾತ್ರ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ರಾಜ್ಯಾದ್ಯಂತ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಹಿಳೆಯರು ನೋಂದಾಯಿಸಿಕೊಳ್ಳಬಹುದು.
ಆಗಸ್ಟ್ 16 ರಂದು ಫಲಾನುಭವಿಗಳಿಗೆ ಹಣ ವರ್ಗಾವಣೆಯಾಗುವ ನಿರೀಕ್ಷೆಯಿದೆ. 1.28 ಕೋಟಿ ಜನರು ಯೋಜನೆಗೆ ಅರ್ಹರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು.












Click it and Unblock the Notifications