ಗೃಹ ಲಕ್ಷ್ಮಿ ನೋಂದಣಿಗೆ ಹಣ ಕೇಳುವ ಸೈಬರ್ ಸೆಂಟರ್‌ಗಳ ಪರವಾನಗಿ ರದ್ದು: ಸರ್ಕಾರದ ಕಟ್ಟಪ್ಪಣೆ
ಬೆಂಗಳೂರು, ಜುಲೈ 25: ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಹಣ ಕೇಳುವ ಸೈಬರ್ ಸೆಂಟರ್‌ಗಳು ವಿರುದ್ಧ ಸರ್ಕಾರ ಕಟ್ಟಪ್ಪಣೆ ಹೊರಡಿಸಿದೆ. ಯೋಜನೆಗೆ ನೋಂದಾಯಿಸಿಕೊಳ್ಳಲು ಹಣ ಕೇಳಿದ ಸೈಬರ್ ಸೆಂಟರ್‌ಗಳ ಪರವಾನಗಿಯನ್ನೇ ರದ್ದುಗೊಳಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.
ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಮಹಿಳೆಯರು ನೋಂದಾವಣಿ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೈಬರ್ ಕೇಂದ್ರಗಳು ಮಹಿಳೆಯರಿಂದ ಹಣ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನನ್ನ ಕ್ಷೇತ್ರದ ಕೆಲವು ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಲಾಡ್ ಹೇಳಿದ್ದಾರೆ.
'ನೋಂದಣಿಗಾಗಿ ಹಣವನ್ನು ಸಂಗ್ರಹಿಸಲಾಗುತ್ತಿದೆ ಎಂಬ ದೂರಗಳು ಬಂದರೆ, ಅಂತಹ ಸೈಬರ್ ಸೆಂಟರ್‌ಗಳ ಪರವಾನಗಿಯನ್ನು ರದ್ದುಗೊಳಿಸುತ್ತೇವೆ' ಎಂದು ಸಂತೋಷ್ ಲಾಡ್ ತಿಳಿಸಿದ್ದಾರೆ.

ಗೃಹ ಲಕ್ಷ್ಮಿ ಫಲಾನುಭವಿಗಳ ನೋಂದಣಿಗಾಗಿ ಧಾರವಾಡದ ಮೂರು ಸೈಬರ್ ಕೇಂದ್ರಗಳು ಹಣವನ್ನು ವಸೂಲು ಮಾಡುತ್ತಿದ್ದವು. ಈ ಕುರಿತು ದೂರುಗಳನ್ನು ಸ್ವೀಕರಿಸಿರುವ ಪೊಲೀಸರು ಸೈಬರ್ ಕೇಂದ್ರಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೂರು ಸೈಬರ್ ಕೇಂದ್ರಗಳನ್ನು ಮುಚ್ಚುವಂತೆ ತಹಶೀಲ್ದಾರ್ ಆದೇಶಿಸಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಯು ಕಾಂಗ್ರೆಸ್‌ನ ಚುನಾವಣಾ ಗ್ಯಾರಂಟಿ ಆಗಿತ್ತು. ಕರ್ನಾಟಕ ಸರ್ಕಾರವು ಮನೆಯ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 2,000 ರೂ ನೀಡುವುದಾಗಿ ಭರವಸೆ ನೀಡಿದೆ. ಜುಲೈ 19 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಆಗಸ್ಟ್ 16 ರಿಂದ ಗೃಹ ಲಕ್ಷ್ಮಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ಪ್ರಾರಂಭಿಸುತ್ತದೆ. ಸರ್ಕಾರದ ಪ್ರಕಾರ, ಅರ್ಹರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳನ್ನೂ ಸಂಪರ್ಕಿಸಬಹುದು.

ರಾಯಚೂರಿನಲ್ಲಿ ಪ್ರಕರಣ ದಾಖಲು
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣ ಠಾಣೆ ಪೊಲೀಸರು ಸೈಬರ್ ಸೆಂಟರ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಗೃಹ ಲಕ್ಷ್ಮಿ ಯೋಜನೆಗೆ ಫಲಾನುಭವಿಗಳ ನೋಂದಣಿ ಮಾಡಿಸಿ ಅಕ್ರಮವಾಗಿ ಹಣ ಪಡೆಯಲಾಗಿತ್ತು. ಅಂತದ ಮೂರು ಸೈಬರ್ ಕೇಂದ್ರಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ.
ಅಧಿಕೃತ ಸರ್ಕಾರಿ ಕಚೇರಿಗಳಿಗೆ ನೀಡಲಾದ ಲಾಗಿನ್ ಐಡಿಗಳನ್ನು ಸೈಬರ್ ಕೇಂದ್ರಗಳು ಕಾನೂನುಬಾಹಿರವಾಗಿ ಪಡೆದುಕೊಂಡಿದ್ದವು. ಈ ಮೂಲಕ ಹಣ ಪಡೆದು ಯೋಜನೆಗೆ ನೋಂದಣಿ ಮಾಡುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮಾನ್ವಿ ತಹಶೀಲ್ದಾರ್ ಚಂದ್ರಕಾಂತ್ ಅವರು ಮೂರು ಸೈಬರ್ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದಾರೆ. 'ಗೃಹಲಕ್ಷ್ಮಿ' ಯೋಜನೆಗೆ ಈ ಸೈಬರ್ ಕೇಂದ್ರಗಳಲ್ಲಿ ಅಕ್ರಮವಾಗಿ ಹಣ ಪಡೆದು ನೋಂದಣಿ ಮಾಡಿರುವುದು ಬೆಳಕಿಗೆ ಬಂದಿದೆ.
ದೂರಿನ ಆಧಾರದ ಮೇಲೆ, ಮೂರು ಸೈಬರ್ ಕೇಂದ್ರಗಳ ವಿರುದ್ಧ ಐಟಿ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮೂರು ಕೇಂದ್ರಗಳನ್ನು ಮುಚ್ಚಲು ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
ಫಲಾನುಭವಿಗಳನ್ನು ನೋಂದಾಯಿಸಲು ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ ಮತ್ತು ಅರ್ಹರು ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ.












Click it and Unblock the Notifications