ಗ್ರಾಮ ಪಂಚಾಯಿತಿ ಚುನಾವಣೆ; ನೀತಿ ಸಂಹಿತೆ ವಿವರಗಳು
ಬೆಂಗಳೂರು, ಜುಲೈ 05; ರಾಜ್ಯ ಚುನಾವಣಾ ಆಯೋಗ, ಕರ್ನಾಟಕ ಗ್ರಾಮ ಪಂಚಾಯಿತಿ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದೆ. ಜಿಲ್ಲಾಧಿಕಾರಿಗಳು 6/7/2023ರ ಗುರುವಾರ ಚುನಾವಣಾ ಅಧಿಸೂಚನೆ ಪ್ರಕಟಿಸಲಿದ್ದಾರೆ. ಜುಲೈ 23ರಂದು ಮತದಾನ ನಡೆಯಲಿದ್ದು, ಜುಲೈ 26ರ ಬುಧವಾರ ಮತ ಎಣಿಕೆ ನಡೆಯಲಿದೆ.
ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎಸಿ ರಂತೆ ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಾಂಕ 6/7/2023 ರಿಂದ ದಿನಾಂಕ 26/7/2023ರ ತನಕ ಜಾರಿಯಲ್ಲಿರುತ್ತದೆ.

ರಾಜ್ಯ ಚುನಾವಣಾ ಆಯೋಗವು 2023ರ ಜೂನ್ ತಿಂಗಳಿನಿಂದ 2023ರ ಆಗಸ್ಟ್ ತನಕ ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎಎ ಮತ್ತು 308ಎಬಿ ರನ್ವಯ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದೆ.
ನೀತಿ ಸಂಹಿತೆಯ ವಿವರಗಳು; ಯಾವುದೇ ಕ್ಷೇತ್ರದಲ್ಲಿ ನಾಮಪತ್ರ ಸ್ವೀಕೃತವಾಗದೇ ಚುನಾವಣೆ ಪ್ರಕ್ರಿಯೆ ಮುಂದುವರೆಯಲಾಗದೆ ಇರುವಂತಹ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ/ ನಾಮಪತ್ರ ಹಿಂತೆಗೆತ ಇತ್ಯಾದಿ ಕಾರಣಗಳಿಂದ ಯಾವುದೇ ಅಭ್ಯರ್ಥಿಯು ಕಣದಲ್ಲಿರದೇ ಆ ಗ್ರಾಮ ಪಂಚಾಯಿತಿಯ ಯಾವುದೇ ಸ್ಥಾನಕ್ಕೂ ಚುನಾವಣೆ ನಡೆಯದೇ ಇದ್ದಲ್ಲಿ ಅಥವಾ ಗ್ರಾಮ ಪಂಚಾಯಿತಿಯಲ್ಲಿನ ಚುನಾವಣೆ ಘೋಷಿಸಿರುವ ಎಲ್ಲಾ ಸ್ಥಾನಗಳೂ ಅವಿರೋಧವಾಗಿ ಆಯ್ಕೆಯಾಗಿದ್ದು, ಆಯ್ಕೆಯಾದ ಅಭ್ಯರ್ಥಿಯ ಫಲಿತಾಂಶವನ್ನು ಚುನಾವಣಾಧಿಕಾರಿಯು ಘೋಷಿಸಿದ್ದಲ್ಲಿ, ಅಂತಹ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದು ತಕ್ಷಣದಿಂದ ನಿಂತು ಹೋಗುತ್ತದೆ.
ಗ್ರಾಮ ಪಂಚಾಯಿತಿಯ ಯಾವುದೇ ಕ್ಷೇತ್ರದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದಲ್ಲಿ ಅಂತಹ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇಲೆ ತಿಳಿಸಿರುವ ದಿನಾಂಕದ ತನಕ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ.
ಈ ಸಂದರ್ಭದಲ್ಲಿ ಚುನಾವಣೆ ಕಾಲದಲ್ಲಿ ಭ್ರಷ್ಟಾಚಾರಗಳನ್ನು ತಡೆಗಟ್ಟುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
* ಚುನಾವಣಾಧಿಕಾರಿಗಳು ಚುನಾವಣೆ ನಡೆಯುವ ಅತಿಸೂಕ್ಷ್ಮ ಮತಗಟ್ಟೆಯಲ್ಲಿ ಚುನಾವಣಾ ಪ್ರಕ್ರಿಯೆಗಳ ವಿಡಿಯೋಗ್ರಾಫಿಕ್ ಚಿತ್ರೀಕರಣ ಮಾಡಿಸುವುದು.
* ನೀತಿ ಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿ ಮತದಾನವು ಮುಕ್ತಾಯಗೊಳ್ಳುವ 48 ಗಂಟೆಗಳ ಮೊದಲಿನ ಅವಧಿಯಲ್ಲಿ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಹಾಗೂ ಮೊಹರು ಮಾಡಿ ಅದರ ಕೀಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ರಿಗೆ ಒಪ್ಪಿಸತಕ್ಕದ್ದು.
* ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿಟ್ಟು ಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡು ಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವವರೆಗೆ ಅಂತಹವರನ್ನು ಕಸ್ಟಡಿಯಲ್ಲಿ ಇಡತಕ್ಕದ್ದು.
* ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಗಮನಕ್ಕೆ ಬಂದಾಗ ಆಯೋಗದ ಆದೇಶ 29/06/2016 ಹಾಗೂ ತಿದ್ದುಪಡಿ ದಿನಾಂಕ 6/7/2016ರಂತೆ ಕ್ರಮ ವಹಿಸುವುದು.
* ಚುನಾವಣೆ ನಡೆಸಲಾಗುತ್ತಿರುವ ಗ್ರಾಮ ಪಂಚಾಯಿತಿ ಸ್ಥಾನಗಳ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿಯಾಗಿ (ವೆಚ್ಚ ಬಾರದಂತೆ) ಪ್ರಕಟಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದು. ಕಾಲ ಕಾಲಕ್ಕೆ ಚುನಾವಣೆಗೆ ಸಂಬಂಧಿಸಿದ ವರದಿಯನ್ನು ಆಯೋಗಕ್ಕೆ ಸಲ್ಲಿಸುವುದು.
* ರಾಜ್ಯ ಚುನಾವಣಾ ಆಯೋಗದ ಆದೇಶ ದಿನಾಂಕ 19/03/2015ರಂತೆ ಗ್ರಾಮ ಪಂಚಾಯಿತಿ ಚುನಾವಣೆಗಳ ಮತಪತ್ರದಲ್ಲಿ NOTA ಅವಕಾಶ ಇರುವುದಿಲ್ಲ.
* ಈಗಾಗಲೇ ನೀಡಿರುವ ನಿರ್ದೇಶನಗಳಂತೆ, ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸಲಾಗಿರುವ ಗ್ರಾಮ ಪಂಚಾಯತಿಯ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸುವುದು.
* ಚುನಾವಣೆ ನಡೆಸಲಾಗುವ ಗ್ರಾಮ ಪಂಚಾಯಿತಿಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಅವರಿಗೆ ತರಬೇತಿಯನ್ನು ಹಾಗೂ ಚುನಾವಣೆಗೆ ಸಂಬಂಧಪಟ್ಟ, ಎಲ್ಲಾ ಅಗತ್ಯ ಮಾಹಿತಿ ಹಾಗೂ ಸುತ್ತೋಲೆ/ ನಿರ್ದೇಶನ ಪತ್ರಗಳ ಪ್ರತಿಯನ್ನು ನೀಡುವುದು.
* ದಿನಾಂಕ 08/07/2023ರಂದು ಎರಡನೇ ಶನಿವಾರ ಘೋಷಿಸಲ್ಪಟ್ಟ ಸಾರ್ವತ್ರಿಕ ರಜಾ ದಿನವಾಗಿರುವುದರಿಂದ ಸದರಿ ದಿನದಂದು ಯಾವುದೇ ನಾಮಪತ್ರವನ್ನು ಸ್ವೀಕರಿಸದಂತೆ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡುವುದು.












Click it and Unblock the Notifications