Karnataka: ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡದ ಸರ್ಕಾರ ವರ್ಗಾವಣೆ ದಂಧೆಯಲ್ಲಿ ನಿರತ
ಬೆಳಗಾವಿ, ಜುಲೈ 30: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ರಾಜ್ಯ ಜನರ ಬಗ್ಗೆ ಕಾಳಜಿ ತೋರಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಠಿಯಿಂದ ಮನೆಗಳ ಹಾನಿ, ಜಾನುವಾರು ಸಾವು ದೊಡ್ಡ ಪ್ರಮಾಣದಲ್ಲಿ ಆಗಿದೆ. ಸುಮಾರು 11 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ, ಉಳಿದ ಜಿಲ್ಲೆಗಳಲ್ಲಿ ಬರದ ಛಾಯೆ ಇದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಗಮನಿಸದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಡಿಯೋ ಸಂವಾದ ಮಾಡುವುದು ಬಿಟ್ಟರೆ ಯಾವುದೇ ಪರಿಹಾರ ಕಾರ್ಯ ನಡೆದಿಲ್ಲ ಎಂದು ದೂರಿದರು.

ಮನೆ ಕಳೆದುಕೊಂಡವರಿಗೆ ತಕ್ಷಣವೇ 10 ಸಾವಿರ ಪರಿಹಾರ ಕೊಡಬೇಕಿದ್ದು, ಅದು ಇದುವರೆಗೂ ಆಗಿಲ್ಲ. ಬೆಳೆ ನಾಶ ಆಗಿರುವುದಕ್ಕೆ ಪ್ರಾಥಮಿಕ ಸಮೀಕ್ಷೆ ಕೂಡ ಆಗಿಲ್ಲ. ದೊಡ್ಡ ಪ್ರಮಾಣದಲ್ಲಿ ಪ್ರಾಣಹಾನಿ ಆಗಿದೆ, ಸರ್ಕಾರ ಇದನ್ನು ಗಮನಿಸುತ್ತಿಲ್ಲ.
ಸಚಿವರು ಪ್ರವಾಹ ಪೀಡಿತ ಸ್ಥಳಕ್ಕೆ ಬೇಟಿ ನೀಡಿಲ್ಲ
ಯಾವ ಸಚಿವರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿಲ್ಲ. ಬರಪೀಡಿತ ಪ್ರದೇಶಗಳಿಗೆ ಬೇರೆ ಬೆಳೆ ಬೆಳೆಯಲು ಬೀಜ-ರಸ ಗೊಬ್ಬರ ಕೊಡುವ ವ್ಯವಸ್ಥೆ ಆಗಿಲ್ಲ, ಸರ್ಕಾರದ ಪ್ರತಿನಿಧಿಗಳು ಕೇವಲ ರಾಜಕಾರಣದಲ್ಲಿ ನಿರತರಾಗಿದ್ದಾರೆ. ತಮ್ಮ ಸ್ಥಾನವನ್ನು ಉಳಿಸಿ ಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ಸಚಿವರು ಹಾಗೂ ಶಾಸಕರ ನಡುವೆ ಇರುವ ಸಮರ ಬಗೆಹರಿಸಲು ಮುಖ್ಯಮಂತ್ರಿಗಳು ಸಮಯ ಕಳೆಯುತ್ತಿದ್ದಾರೆ.

ರಾಜ್ಯ ಜನರು ಇಂದು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ, ಅವರ ನೆರವಿಗೆ ಸರ್ಕಾರ ಧಾವಿಸಿಲ್ಲ. ಕೂಡಲೇ ಎಲ್ಲ ಸಚಿವರು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ಕೊಡಬೇಕು. ಸಾವು ನೋವಾದ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಬೇಕು ಎಂದು ಒತ್ತಾಯಿಸಿದರು.
ಐದು ಲಕ್ಷ ಪರಿಹಾರ ನೀಡಲು ಆಗ್ರಹ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೂರ್ಣ ಮನೆ ಬಿದ್ದವರಿಗೆ 5 ಲಕ್ಷ ಪರಿಹಾರ ನೀಡಿದ್ದೇವೆ. ಆ ರೀತಿಯ ಮಾನದಂಡ ಅನುಸರಿಸಿ ಈಗಲೂ ಪರಿಹಾರ ನೀಡಬೇಕು. ತಕ್ಷಣವೇ ಸಂತ್ರಸ್ತರಿಗೆ 10 ಸಾವಿರ ಪರಿಹಾರ ಕೊಡಬೇಕು. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರ ಬೆಳೆ ಪರಿಹಾರ ನಾವು ಕೊಟ್ಟಂತೆ ಈಗಲೂ ಕೊಡಬೇಕು.
2,600 ಕೋಟಿ ಪರಿಹಾರ ನಾವು ಒಂದೇ ತಿಂಗಳಲ್ಲಿ ನೀಡಿದ್ದೇವೆ. ಕೇಂದ್ರ ಸರ್ಕಾರ ಒಣ ಬೇಸಾಯಸ್ಥರಿಗೆ 6500 ಪರಿಹಾರ ನೀಡಿತ್ತು, ನಾವು ಅದಕ್ಕೆ 1300 ಸಾವಿರ ನೀಡಿದ್ದೇವು. ನೀರಾವರಿ ಆಧಾರಿತ ಜಮೀನಿಗೆ 15 ಸಾವಿರ ನೀಡಿದ್ದರೆ ನಾವು 25000 ಪರಿಹಾರ ನೀಡಿದ್ದೇವು.
ತೋಟಗಾರಿಕೆ ಬೆಳೆಗಳಿಗೆ ಕೇಂದ್ರ ಸರ್ಕಾರ 18 ಸಾವಿರ ನೀಡಿದರೆ ನಾವು 28 ಸಾವಿರ ಪರಿಹಾರ ನೀಡಿದ್ದೆವು. ಅದೇ ರೀತಿ ಮಾನದಂಡಗಳನ್ನು ಅನುಸರಿಸಿ ಈಗಲೂ ರೈತರಿಗೆ ಪರಿಹಾರ ಕೊಡಬೇಕು. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಹೇಳಿದರು.
ಈ ತಕ್ಷಣವೇ ಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು. ಇಲ್ಲವಾದರೆ ಇಂತಹ ಸರ್ಕಾರ ಇದ್ದರೆಷ್ಟು, ಬಿಟ್ಟರೆಷ್ಟು ಎಂದು ಕಿಡಿ ಕಾರಿದ ಅವರು, ಐದು ಲಕ್ಷ ಪರಿಹಾರ ನೀಡಿ ಸಂತ್ರಸ್ತರಿಗೆ ಮನೆ ನಿರ್ಮಿಸಲು ಅನುಕೂಲ ಮಾಡಿದ್ದೇವೆ.
ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಪರಿಹಾರ ಕಾರ್ಯ ನಡೆದಿದೆ. ಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ, ಅಲ್ಪ ಬಿದ್ದ ಮನೆಗಳಿಗೆ 3 ಲಕ್ಷ ಪರಿಹಾರ ಕೊಡಲಾಗಿತ್ತು. ಸಂಕಷ್ಟದಲ್ಲಿರುವ ಪ್ರವಾಹ ಪೀಡಿತರ ನೆರವಿಗೆ ನಾವು ಬಂದಿದ್ದೆವು ಎಂದರು.
ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ
ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ಎಲ್ಲರೂ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ, ಇದಕ್ಕಾಗಿ ಸರ್ಕಾರದಲ್ಲಿ ಪೈಪೋಟಿ ನಡೆಯುತ್ತಿದೆ. ಇತ್ತೀಚೆಗೆ ನಡೆದ ಸಭೆ ವರ್ಗಾವಣೆಯ ಪೈಪೋಟಿ, ಭ್ರಷ್ಟಾಚಾರದ ಪೈಪೋಟಿ ಅಷ್ಟೇ. ವರ್ಗಾವಣೆ ದಂಧೆಯಲ್ಲಿ ಬಾರ್ಗೆನಿಂಗ್ ನಡೆಯುತ್ತಿದೆ ಎಂದು ಬೊಮ್ಮಾಯಿ ಆರೋಪಿಸಿದರು.
ಲೋಕಸಭೆ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿದೆ. ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದ್ದೇವೆ, ಜಿಲ್ಲಾವಾರು ಸಭೆ ಮಾಡುತ್ತೇವೆ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಆದಷ್ಟು ಬೇಗ ಆಗಲಿದೆ ಎಂದರು.
ಇನ್ನು ಬೆಳಗಾವಿಯಲ್ಲಿ ವಿಕಲಾಂಗನ ಮೇಲೆ ಪೊಲೀಸರ ಮಾರಣಾಂತಿಕ ಹಲ್ಲೆ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಮಾಜಘಾತುಕ ಶಕ್ತಿಗಳು ಈಗ ನಿರ್ಭಯವಾಗಿ ಓಡಾಡುತ್ತಿದ್ದಾರೆ. ಸಮಾಜ ಘಾತುಕ ಶಕ್ತಿಗಳಿಗೆ ಈ ಸರ್ಕಾರವೇ ಬೆಂಬಲ ನೀಡುತ್ತಿದೆ. ಅವರಿಗೆ ಪೊಲಿಸರ ಭಯ ಹೋಗಿದೆ, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಸಾಮಾನ್ಯ ಜನರ ಮೇಲೆ ಹಲ್ಲೆ, ಹೆಣ್ಣುಮಕ್ಕಳ ಮೇಲೆ ಹಲ್ಲೆ ಆಗುತ್ತದೆ ಎಂದು ಅವರು ರಾಜ್ಯ ಸರ್ಕಾರಕ್ಕೆ ಟಾಂಗ್ ನೀಡಿದರು.












Click it and Unblock the Notifications