ಬಸ್ ಪ್ರಯಾಣ ದರ ಇಳಿಕೆ?, ಸಚಿವರ ಸುಳಿವು
ಬೆಂಗಳೂರು, ನ.3 : ಡೀಸೆಲ್ ದರ ಇಳಿಕೆಯಾಗಿರುವ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಪ್ರಯಾಣದರ ಕಡಿತಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ನ.5ರಂದು ಈ ಕುರಿತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ರಾಮಲಿಂಗಾ ರೆಡ್ಡಿ, ಡೀಸೆಲ್ ದರ ಇಳಿಕೆಯಾಗಿರುವ ಹಿನ್ನಲೆಯಲ್ಲಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಪ್ರಯಾಣ ದರ ಇಳಿಕೆ ಮಾಡುವ ಚಿಂತನೆ ಇದೆ. ನ.5ರಂದು ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಅಂದು ಈ ಕುರಿತು ನಿರ್ಧರಿಸಲಾಗುವುದು ಎಂದರು. [ಬೆಂಗಳೂರಿಗರು ಪೆಟ್ರೋಲ್ ಗೆ 70 ರೂ. ಕೊಟ್ರೆ ಸಾಕು]

ಡೀಸೆಲ್ ದರದಲ್ಲಿ ಇಳಿಕೆಯಾದ ಕಾರಣ ಬಸ್ ಪ್ರಯಾಣದರವನ್ನು ಕಡಿಮೆ ಮಾಡಬೇಕು ಎಂದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದರು. ಮಾಜಿ ಸಾರಿಗೆ ಸಚಿವ ಆರ್.ಅಶೋಕ್ ಸಹ ದರ ಇಳಿಕೆ ಮಾಡುವಂತೆ ಒತ್ತಾಯಿಸಿದ್ದರು.
ಪರಿಶೀಲಿಸುತ್ತೇವೆ : ಡೀಸೆಲ್ ದರ ಇಳಿಕೆಯಾಗುವುದು ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಥಿತ್ಯಂತರದಿಂದ. ಆದ್ದರಿಂದ, ದರ ಇಳಿಕೆಯಾದ ತಕ್ಷಣ ಬಸ್ ಪ್ರಯಾಣ ದರ ಕಡಿಮೆ ಮಾಡಿ ಎನ್ನುವುದು ಸರಿಯಲ್ಲ, ಆದರೂ ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭಾನುವಾರ ಮಂಗಳೂರಿನಲ್ಲಿ ಹೇಳಿದ್ದರು.
ಅಂದಹಾಗೆ ಅ.31ರಿಂದ ಜಾರಿಗೆ ಬರುವಂತೆ ಡೀಸೆಲ್ ದರವನ್ನು 2.25 ರೂ. ಇಳಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಡಿಸೇಲ್ ದರ 57.94 ಆಗಿದೆ. ಡೀಸೆಲ್ ಬೆಲೆ ಇಳಿಕೆಯಾಗಿರುವುದರಿಂದ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.












Click it and Unblock the Notifications