ನೇಕಾರರಿಗೆ ಸಿಹಿ ಸುದ್ದಿ: ಆರ್ಥಿಕ ನೆರವು ನೀಡಲು 'ನೇಕಾರ ಸಮ್ಮಾನ್(ವಿದ್ಯುತ್ ಮಗ್ಗ)' ಯೋಜನೆ ಜಾರಿ: ಸಿಎಂ
ಬೆಂಗಳೂರು, ಜನವರಿ 10: ಕರ್ನಾಟಕ ರಾಜ್ಯ ಸರ್ಕಾರ ಸಕ್ರಾಂತಿಗೆ ರಾಜ್ಯದ ನೇಕಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ನೋಂದಾಯಿತ ಒಟ್ಟು 1,02,980 ಕಾರ್ಮಿಕರನ್ನು ಒಳಗೊಂಡಂತೆ ನೇಕಾರರಿಗೆ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದೆ.
ನೇಕಾರರ ಸಮಾಜದ ಏಳಿಗೆಗಾಗಿ ಪ್ರಸಕ್ತ 2023 ವರ್ಷದಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ಸರ್ಕಾರದ 'ನೇಕಾರ ಸಮ್ಮಾನ್ (ವಿದ್ಯುತ್ ಮಗ್ಗ)' ಹೊಸ ಯೋಜನೆ ಜಾರಿ ಮಾಡಿದೆ. ಇದರಿಂದ ರಾಜ್ಯದ ಒಟ್ಟು 1,02,980 ಕಾರ್ಮಿಕರನ್ನು ಒಳಗೊಂಡಂತೆ ನೇಕಾರರಿಗೆ ವಾರ್ಷಿಕ 5000ರೂ. ಆರ್ಥಿಕ ನೆರವು ದೊರೆಯಲಿದೆ.
ಆರ್ಥಿಕ ಹಿನ್ನೆಡೆಯಿಂದ ಸಂಕಷ್ಟದಲ್ಲಿರುವ ವಿದ್ಯುತ್ ಕೈ ಮಗ್ಗ ಹಾಗೂ ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ನೇಕಾರರು ಹಾಗೂ ಕಾರ್ಮಿಕರಿಗೆ ವಾರ್ಷಿಕ 5000ರೂ. ಆರ್ಥಿಕ ಸಹಾಯವನ್ನು ಈ ಯೋಜನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈಮಗ್ಗ ಮತ್ತು ಜವಳಿ ಇಲಾಖೆ ಮಂಗಳವಾರ ಹೊರಡಿಸಿದ ಅಧಿಕೃತ ಆದೇಶದಲ್ಲಿ ತಿಳಿಸಿದ್ದಾರೆ.

2020-21 ನೇ ಸಾಲಿನಲ್ಲಿ ಕೋವಿಡ್ ಸಂಕಷ್ಟ ಪ್ರಯುಕ್ತ 51862 ವಿದ್ಯುತ್ ಮಗ್ಗ ನೇಕಾರರಿಗೆ ರೂ.2000 ನಂತೆ ಒಟ್ಟು 1,03,724 ಲಕ್ಷ ರೂ. ಹಣವನ್ನು ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ.
2020-21ನೇ ಸಾಲಿನಲ್ಲಿ ಕೋವಿಡ್ 2ನೇ ಅಲೆಯ ಸಂಕಷ್ಟಕ್ಕೆ ತತ್ತರಿಸಿದ್ದ 85.718 ವಿದ್ಯುತ್ ಮಗ್ಗ ನೇಕಾರರಿಗೆ ರೂ.3000ನಂತೆ ಒಟ್ಟು 2,57,154 ರೂ. ಆರ್ಥಿಕ ನೆರವನ್ನು ನೇಕಾರರ ಖಾತೆಗೆ ಹಾಕಲಾಗಿದೆ.
ವಿದ್ಯುತ್ ಮಗ್ಗ ಮತ್ತು ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ನೇಕಾರರು ಮತ್ತು ಕಾರ್ಮಿಕರ ಮಾಹಿತಿಯನ್ನು ಕ್ರೂಢೀಕರಿಸಲು ಇಲಾಖೆಯಿಂದ ಗಣತಿ /ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಇಲಾಖೆಯ ಗಣತಿ ಕಾರ್ಯದಲ್ಲಿ ಇದುವರೆಗೆ ನೋಂದಾಯಿತ ಸುಮಾರು 1,02,980 ನೇಕಾರರು ತಲಾ 5000 ರೂ. ನಂತ ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಆದೇಶ ತಿಳಿಸಿದೆ.
ನೇಕಾರರಿಗೆ ಖಾತೆಗೆ ಹಣ ವರ್ಗಾವಣೆಗೆ ಜ.11ಕ್ಕೆ ಸಿಎಂ ಚಾಲನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯುತ್ ಮಗ್ಗ ನೇಕಾರರಿಗೆ/ ಕಾರ್ಮಿಕರಿಗೆ ನೇಕಾರ ಸಮ್ಮಾನ್ ಯೋಜನೆಯಡಿ ಆರ್ಥಿಕ ನೆರವನ್ನು ನೇರ ನಗದು (ಡಿಬಿಟಿ) ಮೂಲಕ ವರ್ಗಾವಣೆಗೆ ಪ್ರಕ್ರಿಯೆಗೆ ಜನವರಿ 11 ರಂದು ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಲಿದ್ದಾರೆ.
ಆರ್ಥಿಕ ಹಿನ್ನಡೆಯಿಂದ ಸಂಕಷ್ಟದಲ್ಲಿರುವ ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ನೇಕಾರರು ಹಾಗೂ ಕಾರ್ಮಿಕರಿಗೆ 2022-23 ನೇ ಸಾಲಿನ ನೇಕಾರ ಸಮ್ಮಾನ್ ಯೋಜನೆಯಡಿ 5000 ರೂ. ಆರ್ಥಿಕ ನೆರವು ಪಡೆಯಲಿದ್ದಾರೆ.












Click it and Unblock the Notifications