KSRTC: ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಶುಭಾರಂಭ; 2,764 ಬಸ್ ಪಾಸ್ ವಿತರಣೆ, ಹೇಗಿದೆ ಪಾಸ್?
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಘೋಷಣೆಯಂತೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಆರಂಭಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸೇರಿ ನಾಲ್ಕು ನಿಗಮಗಳ ಬಸ್‌ನಲ್ಲಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣ ಮಾಡಲಿದ್ದಾರೆ. ಸರ್ಕಾರದ ಉಚಿತ ಬಸ್ ಪಾಸ್ ಯೋಜನೆ ಅಡಿಯಲ್ಲಿ ಶುಕ್ರವಾರ ಸಂಜೆ 4ಕ್ಕೆ ಮೊದಲ ಬಸ್ ಪಾಸ್ ವಿತರಿಸಲಾಗಿದೆ. ಹಾಸನ ಕಾಲೇಜು ವಿದ್ಯಾರ್ಥಿ ಮೊದಲ ಬಸ್ ಪಾಸ್ ಪಡೆದಿದ್ದಾರೆ. ಎರಡು ದಿನಗಳಲ್ಲಿ ರಾಜ್ಯದಲ್ಲಿ ಒಟ್ಟು 2700ಕ್ಕೂ ಅಧಿಕ ಬಸ್ ಪಾಸ್ ವಿತರಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವ್ಯಾಪ್ತಿಯಲ್ಲಿ ನೆನ್ನೆ ಜೂನ್ 12 ರಂದು ಸಂಜೆ 4 ಗಂಟೆಗೆ ಹಾಸನ ಕಾಲೇಜಿನ ಪ್ರಥಮ ಪಿ.ಯು.ಸಿ ಓದುತ್ತಿರುವ ವಿದ್ಯಾರ್ಥಿಗೆ ಮೊದಲ ಉಚಿತ 'ವಿದ್ಯಾರ್ಥಿ ಬಸ್ ಪಾಸ್' ವಿತರಿಸಲಾಗಿದೆ. ಈ ಮೂಲಕ 'ಉಚಿತ ಬಸ್ ಪಾಸ್ ಯೋಜನೆ'ಯ ರಾಜ್ಯದ ಮೊದಲ ಅರ್ಹ ಫಲಾನುಭವಿಯಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. (ವಿದ್ಯಾರ್ಥಿಯ ವೈಕಿಕ್ತಿಕ ಹಕ್ಕಿನ ಕಾರಣಕ್ಕೆ ಹೆಸರು ಬಹಿರಂಗಪಡಿಸಿಲ್ಲ).

ಉಚಿತ ವಿದ್ಯಾರ್ಥಿ ಬಸ್ ಪಾಸ್ ಹೇಗಿದೆ?
ಉಚಿತ ವಿದ್ಯಾರ್ಥಿ ಬಸ್ ಪಾಸ್ ನೋಡಲು ಆಧಾರ್ ಕಾರ್ಡ್‌ನಂತೆ ಭಾಸವಾಗುತ್ತದೆ. ಮೇಲೆ ನೀಲಿ ಪಟ್ಟಿಯಲ್ಲಿ 'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ' ನಿಗಮ, ಅದರ ಕೆಳಗೆ ಎಡಭಾಗದಲ್ಲಿ ಜಿಎಸ್‌ಸಿ ಸಂಖ್ಯೆ, ವಿದ್ಯಾರ್ಥಿ ಹೆಸರು, ತರಗತಿ, ಶಾಲೆ/ಕಾಲೇಜು, ಬಸ್ ಪ್ರಯಾಣ ಎಲ್ಲಿಂದ? ಎಲ್ಲಿಗೆ? ಮಾರ್ಗ ಬದಲಾವಣೆ ಸ್ಥಳ ಹಾಗೂ ಈ ಪಾಸ್ ಸಹಿತ ವಿದ್ಯಾರ್ಥಿಗಳು ಮುಂದಿನ ವರ್ಷ ಯಾವ ದಿನಾಂಕದವರೆಗೂ ಓಡಾಡಬಹುದೆಂಬ ಮಾಹಿತಿಯನ್ನು ಪಾಸ್‌ನಲ್ಲಿ ನೀಡಲಾಗಿದೆ. ಈ ಪಾಸ್ 2027ರ ಮಾರ್ಚ್ ಅಂತ್ಯದವರೆಗೂ ಮಾನ್ಯವಾಗಿರಲಿದೆ.
ಇನ್ನೂ ಪಾಸ್‌ನ ಬಲ ಬದಿಯಲ್ಲಿ ವಿದ್ಯಾರ್ಥಿಯ ಫೋಟೋ ಅಚ್ಚಾಗಿದ್ದು, ಕೆಳಗೆ ಕ್ಯೂಆರ್ ಕೋಡ್ ಸಹ ಕೊಡಲಾಗಿದೆ. ಮುಖ್ಯವಾಗಿ ಬಸ್ ಪಾಸ್ ಮೇಲೆ 'ದರ ರೂ. ಉಚಿತ' ಎಂದು ಬರೆಯಲಾಗಿದೆ. ಈ ಹಿಂದೆ ಬಸ್ ಪಾಸ್ ಹಣವನ್ನು ಅಲ್ಲಿ ಬರೆಯಲಾಗುತ್ತಿತ್ತು. ಜೊತೆಗೆ ಈ ಬಸ್ ಪಾಸ್ ಅನ್ನು ಯಾರಿಗೂ ಹಸ್ತಾಂತರಿಸುವಂತಿಲ್ಲ. ಬೇರೆಡೆ ಪ್ರಯಾಣಕ್ಕೆ ಬಳಸುವಂತಿಲ್ಲ ಎಂಬ ಕೆಲವು ಷರತ್ತುಗಳನ್ನು ತಿಳಿಸಲಾಗಿದೆ. ಮೊದಲ ಬಸ್ ಪಾಸ್ ವಿದ್ಯಾರ್ಥಿ ವಿನಯ್.ಆರ್. ಅವರು ಬಾಣಾವರದಿಂದ ಹಾಸನಕ್ಕೆ ತೆರಳಲಿದ್ದು, ಅರಸೀಕರೆಯಲ್ಲಿ ಬಸ್ ಬದಲಾಯಿಸಲಿದ್ದು, ಅದೆಲ್ಲವನ್ನು ಬಾಸ್‌ನಲ್ಲಿ ಉಲ್ಲೇಖಿಸಲಾಗಿದೆ.
04 ನಿಗಮಗಳಿಂದ 2764 ಉಚಿತ ಬಸ್ ಪಾಸ್ ವಿತರಣೆ
ಜೂನ್ 12ರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲಾಗುತ್ತಿದ್ದು, ಎರಡು ದಿನಗಳಲ್ಲಿ 2764 ಫಲಾನುಭವಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಒದಗಿಸಲಾಗಿದೆ. ಇದರಲ್ಲಿ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಅತ್ಯಧಿಕ ಪಾಸ್ ವಿತರಣೆ ಮಾಡಿದೆ. ಸಾರಿಗೆ ಸಂಸ್ಥವಾರು ಎರಡು ದಿನಗಳ ವಿತರಣಾ ಮಾಹಿತಿ ಮುಂದಿದೆ.
1. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಜೂನ್ 12ರಂದು ಶುಕ್ರವಾರ 350 ಮತ್ತು ಶನಿವಾರ ಜೂ. 13ರಂದು 510 ಸೇರಿ ಒಟ್ಟು 860 ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಂಮಾಡಿದೆ.
2. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮೊದಲ ದಿನ ವಿತರಿಸಿಲ್ಲ. ಇಂದು ಶನಿವಾರ 268 ಮಂದಿಗೆ ಬಸ್ ಪಾಸ್ ನೀಡಿದೆ.
3. ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KKRTC) ಶುಕ್ರವಾರ 146 ಮತ್ತು ಎರಡನೇ ದಿನ ಶನಿವಾರ 495 ಸೇರಿ ಒಟ್ಟು 641 ವಿದ್ಯಾರ್ಥಿಗಳಿಗೆ ವಿತರಿಸಿದೆ.
4. ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ (NWKRTC) ಶುಕ್ರವಾರ 325 ವಿದ್ಯಾರ್ಥಿಗಳು ಮತ್ತು ಶನಿವಾರ 670 ಸೇರಿ ಒಟ್ಟು 995 ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ವಿತರಣೆ ಪಡೆದುಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.













Click it and Unblock the Notifications