1 ಲಕ್ಷ ಜನರಿಗೆ ಸಿಗಲಿದೆ ಹಕ್ಕುಪತ್ರ: ಮಹತ್ವದ ಅಪ್ಡೇಟ್ ಕೊಟ್ಟ ಸರ್ಕಾರ
ಕಳೆದ ತಿಂಗಳು ಹೋಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 1.11 ಲಕ್ಷ ಹಾಡಿ, ಹಟ್ಟಿ, ತಾಂಡ ನಿವಾಸಿಗಳಿಗೆ ರಾಜ್ಯ ಸರ್ಕಾರ ಹಕ್ಕುಪತ್ರ ನೀಡಿದೆ. ಈ ಕೆಲಸವನ್ನು ಸಂಪೂರ್ಣವಾಗಿ ಮುಗಿಸಬೇಕು. ಮುಂದಿನ ವರ್ಷದೊಳಗೆ ಕನಿಷ್ಟ ಇನ್ನೂ 1 ಲಕ್ಷ ಜನರಿಗೆ ಹಕ್ಕುಪತ್ರ ನೀಡಬೇಕು ಎಂಬುದು ಸರ್ಕಾರದ ಗುರಿ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರೂ ಸಹ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗಾಗಿ ಅಧಿಕಾರಿಗಳು ಆಸಕ್ತಿ ವಹಿಸಿ ತಾಂಡಾ ನಿಗಮ ಹಾಗೂ ಜಲ ಜೀವನ್ ಮಿಷನ್‌ನಿಂದ ಪಟ್ಟಿ ತರಿಸಿಕೊಂಡು ಬಿಟ್ಟು ಹೋಗಿರುವ ಜನವಸತಿ ಪ್ರದೇಶಗಳನ್ನು ಗುರುತಿಸಿ ಕಂದಾಯ ಗ್ರಾಮಗಳು ಎಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ. ಹಲವು ವರ್ಷಗಳಿಂದ ಕಚೇರಿಗಳಿಲ್ಲದೆ ಪರಿತಪಿಸುತ್ತಿದ್ದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೊನೆಗೂ ಕಚೇರಿ ಭಾಗ್ಯ ಸಿಗಲಿದೆ. ರಾಜ್ಯದಾದ್ಯಂತ ಲಭ್ಯವಿರುವ ಗ್ರಾಮ ಪಂಚಾಯತ್ ಕಾರ್ಯಾಲಯಗಳಲ್ಲೇ ಮುಂದಿನ 15 ದಿನಗಳಲ್ಲಿ ಕನಿಷ್ಟ 1000 ಗ್ರಾಮ ಆಡಳಿತ ಅಧಿಕಾರಿಗಳಿಗೆ ನೂತನ ಕಚೇರಿ ನೀಡಬೇಕು ಎಂದು ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ (ಸಿಇಓ) ಗಡುವು ನೀಡಿದ್ದಾರೆ.

ಜನಸಾಮಾನ್ಯರು ಹಾಗೂ ಪ್ರತಿನಿಧಿಗಳೇ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ ಎಂದು ದೂರು ನೀಡುತ್ತಿದ್ದಾರೆ. ಅವರಿಗೆ ಸ್ವಂತದ್ದೊಂದು ಕಚೇರಿ ಇಲ್ಲದ ಕಾರಣ ಸಾರ್ವಜನಿಕರ ಅಗತ್ಯತೆಗಳಿಗೆ ಸ್ಪಂದಿಸುತ್ತಿಲ್ಲ, ತಮಗೊಂದು ಕಚೇರಿ ನೀಡುವಂತೆ ಗ್ರಾಮ ಆಡಳಿತ ಅಧಿಕಾರಿಗಳೂ ಹಲವು ವರ್ಷಗಳಿಂದ ಬೇಡಿಕೆ ಮುಂದಿಡುತ್ತಿದ್ದಾರೆ. ಹೀಗಾಗಿ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳಿಗೂ ಕಚೇರಿ ನೀಡಲು ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.
1000 ಗ್ರಾಮ ಆಡಳಿತ ಕಚೇರಿ
ರಾಜ್ಯದಾದ್ಯಂತ ಕಂದಾಯ ವೃತ್ತಗಳಲ್ಲಿ 5,944 ಗ್ರಾಮ ಆಡಳಿತ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ ಗ್ರಾಮ ಪಂಚಾಯತ್ ಕಾರ್ಯಾಲಯದ ಆವರಣದಲ್ಲೇ ಕನಿಷ್ಟ 1,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ ನಿರ್ಮಿಸುವಷ್ಟು ಸ್ಥಳಾವಕಾಶ ಇದೆ. ಹೀಗಾಗಿ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಮುಂದಿನ 15 ದಿನಗಳಲ್ಲಿ ಈ ಸಂಬಂಧ ಕಾರ್ಯ ಪ್ರವೃತ್ತರಾಗಬೇಕು. ಉಳಿದ ಅಧಿಕಾರಿಗಳಿಗೆ ಮುಂದಿನ ಹಂತದಲ್ಲಿ ಗ್ರಾಮ ಪಂಚಾಯತ್ ಆವರಣದಲ್ಲೇ ನೂತನ ಕಟ್ಟಡಗಳನ್ನು ನಿರ್ಮಿಸಿ ಕಚೇರಿ ತೆರೆಯಬೇಕು ಎಂದು ಸೂಚನೆ ನೀಡಿದ್ದಾರೆ.
ಎಲ್ಲ ಅಧಿಕಾರಿಗಳೂ ಒಂದೇ ಸೂರಿನಡಿ ಜನರ ಕೈಗೆ ಸಿಗುವಂತಿರಬೇಕು ಎಂಬುದೇ ಸರ್ಕಾರದ ಉದ್ದೇಶ. ಇದೇ ಕಾರಣಕ್ಕೆ ಪಂಚಾಯತ್ ಕಾರ್ಯಾಲಯದಲ್ಲೇ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗಳನ್ನು ತೆರೆಯಲಾಗುತ್ತಿದೆ. ಹೀಗಾಗಿ ಸ್ಥಳಾವಕಾಶ ಇದ್ದರೆ ಒಂದೇ ಪಂಚಾಯತ್ ಕಾರ್ಯಾಲಯದಲ್ಲಿ ಇಬ್ಬರು ಗ್ರಾಮ ಲೆಕ್ಕಿಗರಿಗೂ ಕಚೇರಿ ನೀಡಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.
ಕಂದಾಯ ಗ್ರಾಮಗಳನ್ನ ಘೋಷಿಸಿ
ಅಧಿಕಾರಿಗಳ ಕಣ್ತಪ್ಪಿನಿಂದ ಪಟ್ಟಿಯಿಂದ ಬಿಟ್ಟುಹೋಗಿರುವ ಹಾಡಿ, ಹಟ್ಟಿ, ತಾಂಡ, ಗೊಲ್ಲರ ಹಟ್ಟಿಗಳನ್ನು ಗುರುತಿಸಿ ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಅಧಿಸೂಚನೆ ಹೊರಡಿಸಿ. ಕಂದಾಯ ಗ್ರಾಮಗಳ ಘೋಷಣೆ ಬಡವರ ಕೆಲಸ. ಬಡವರ ಕೆಲಸ ಮಾಡಲು ಅಧಿಕಾರಿಗಳು ಅಸಡ್ಡೆ ತೋರುವುದು ಸರಿಯಲ್ಲ. ಹಾಡಿ ಹಟ್ಟಿ ತಾಂಡಾಗಳು ಗ್ರಾಮದ ಜೊತೆ ಹೊಂದಿಕೊಂಡಿದ್ದರೆ ಅವುಗಳಿಗೆ ಅಂತಹ ಜನವಸತಿ ಪ್ರದೇಶಗಳಿಗೆ ಕಂದಾಯ ಗ್ರಾಮ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರದ 2016 ರ ಸುತ್ತೋಲೆ ಇದೆ. ಅಧಿಕಾರಿಗಳು ಇದೇ ಕಾರಣವನ್ನು ಮುಂದಿಟ್ಟು ಹಾಡಿ, ಹಟ್ಟಿಗಳಿಗೆ ಕಂದಾಯ ಗ್ರಾಮ ಸ್ಥಾನ-ಮಾನ ನೀಡದಿರುವುದು ಸರಿಯಲ್ಲ ಎಂದಿದ್ದಾರೆ.
ಕಂದಾಯ ಗ್ರಾಮಗಳಿಗೆ ಸಂಬಂಧಿಸಿದಂತೆ 2016ರ ಸುತ್ತೋಲೆಯನ್ನೇ ಪರಿಗಣಿಸುವ ಅಧಿಕಾರಿಗಳು, 2017 ಮತ್ತು 2019ರ ಹೊಸ ಸುತ್ತೋಲೆಯನ್ನು ಏಕೆ ಓದುವುದಿಲ್ಲ? ಆ ಸುತ್ತೋಲೆಯಲ್ಲಿ ಗ್ರಾಮದ ಜೊತೆ ಹೊಂದಿಕೊಂಡಿದ್ದರೂ ಸಹ ತಾಂಡಾ, ಹಟ್ಟಿಗಳಿಗೆ ಕಂದಾಯ ಗ್ರಾಮ ಸ್ಥಾನಮಾನ ನೀಡಲು ಅವಕಾಶ ನೀಡಲಾಗಿದೆ. ಆದರೆ, ಅಧಿಕಾರಿಗಳು ಇದನ್ನು ಏಕೆ ಪರಿಗಣಿಸುವುದಿಲ್ಲ? 2016ರ ಸುತ್ತೋಲೆಯಲ್ಲೂ ಸಹ ದಾಖಲೆ ರಹಿತ ಜನವಸತಿ ಪ್ರದೇಶ ನಗರ ಸ್ಥಳೀಯ ವ್ಯಾಪ್ತಿಗೆ ಒಳಪಟ್ಟಿದ್ದರೆ ಕಂದಾಯ ಗ್ರಾಮ ಎಂದು ಘೋಷಿಸುವಂತಿಲ್ಲ. ನಿವಾಸಿಗಳಿಗೆ ಹಕ್ಕುಪತ್ರ ಇಲ್ಲದಿದ್ದಲ್ಲಿ ಬಡಾವಣೆ ಅಥವಾ ಕಂದಾಯ ಗ್ರಾಮ ಅಥವಾ ಉಪಗ್ರಾಮ ಎಂದು ಘೋಷಿಸಬಹುದು. ಈ ಬಗ್ಗೆ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರಬಹುದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ಅಧಿಕಾರಿಗಳು ಇದರ ಬಗ್ಗೆ ಗಮನಹರಿಸುತ್ತಿಲ್ಲ, ಅಧಿಕಾರಿಗಳು ಮಾಡುವ ತಪ್ಪಿಗೆ ನಾವು ಸದನದಲ್ಲಿ ಬಂಜಾರ ಮತ್ತು ಗೊಲ್ಲರ ಸಮಾಜದ ಶಾಸಕರ ಮಾತಿನ ದಾಳಿಗೆ ತುತ್ತಾಗಬೇಕು ಎಂದು ಗರಂ ಆಗಿದ್ದಾರೆ.












Click it and Unblock the Notifications