ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಪಟ್ಟಿ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗಲೇ ಕರ್ನಾಟಕ ಸರ್ಕಾರ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಬೆಂಗಳೂರು, ಮಾರ್ಚ್ 05; ಕರ್ನಾಟಕ ಸರ್ಕಾರ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಸರ್ಕಾರ ಚುನಾವಣೆ ದಿನಾಂಕ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಕೆಲವು ವರ್ಗಾವಣೆಗಳನ್ನು ಮಾಡಿಕೊಳ್ಳುತ್ತದೆ.
ಶನಿವಾರ ಡಾ. ಅನೂಪ್ ಎ. ಶೆಟ್ಟಿ ಮತ್ತು ಬಿ. ಎಂ. ಲಕ್ಷ್ಮೀ ಪ್ರಸಾದ್ ಎಂಬ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಇಬ್ಬರು ಅಧಿಕಾರಿಗಳಿಗೂ ಸ್ಥಳ ನಿಯೋಜನೆ ಮಾಡಿದೆ. ಕೆಲವು ದಿನಗಳ ಹಿಂದೆ ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿ ಡಿ. ರೂಪಾಗೆ ಸರ್ಕಾರ ಇನ್ನು ಸ್ಥಳ ನಿಯೋಜನೆ ಮಾಡಿಲ್ಲ.

ಬೆಂಗಳೂರಿನ ಈಶಾನ್ಯ ವಿಭಾಗದ ಡಿಪಿಸಿಯಾಗಿದ್ದ ಡಾ. ಅನೂಪ್ ಎ. ಶೆಟ್ಟಿ (ಕೆಎನ್ 2013) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಮುಂದಿನ ಆದೇಶದ ತನಕ ಡಿಸಿಪಿ (ಆಡಳಿತ) ಬೆಂಗಳೂರು ನಗರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಸ್ಥಾನದಲ್ಲಿದ್ದ ಬಿ. ಎಂ. ಲಕ್ಷ್ಮೀ ಪ್ರಸಾದ್ ವರ್ಗಾವಣೆ ಮಾಡಲಾಗಿದೆ.
ಬಿ. ಎಂ. ಲಕ್ಷ್ಮೀ ಪ್ರಸಾದ್, ಐಪಿಎಸ್ (ಕೆಎನ್ 2014) ಡಿಸಿಪಿ (ಆಡಳಿತ) ಬೆಂಗಳೂರು, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಮುಂದಿನ ಆದೇಶದ ತನಕ ಬೆಂಗಳೂರಿನ ಈಶಾನ್ಯ ವಿಭಾಗದ ಡಿಸಿಪಿಯಾಗಿ ನೇಮಕ ಮಾಡಲಾಗಿದೆ.

ವರ್ಗಾವಣೆ ಮಾಡುವಂತಿಲ್ಲ; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಿದ್ಧತೆಗಳು ನಡೆಯುತ್ತಿವೆ. ಏಪ್ರಿಲ್ ಅಂತ್ಯ ಅಥವ ಮೇ ಮೊದಲ ವಾರದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಮಾರ್ಚ್ ಅಂತ್ಯದಲ್ಲಿ ಕೇಂದ್ರ ಚುನಾವಣಾ ಆಯೋಗ ವಿಧಾನಸಭೆ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ವೇಳಾಪಟ್ಟಿ ಪ್ರಕಟವಾದರೆ ಬಳಿಕ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ. ವರ್ಗಾವಣೆ ಮಾಡಲೇಬೇಕಿದ್ದರೆ ಚುನಾವಣಾ ಆಯೋಗದ ಅನುಮತಿ ಪಡೆಯಬೇಕಿದೆ.
ಈಗಾಗಲೇ ಕೇಂದ್ರ ಚುನಾವಣಾ ಆಯೋಗ ಚುನಾವಣಾ ಸಿದ್ಧತೆಯಲ್ಲಿ ತೊಡಗಿರುವ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು ಎಂದು ಕರ್ನಾಟಕಕ್ಕೆ ಸರ್ಕಾರಕ್ಕೆ ಮನವಿ ಮಾಡಿದೆ. ಜನವರಿ, ಫೆಬ್ರವರಿ ತಿಂಗಳಿನಲ್ಲಿ ಸರ್ಕಾರ ಹಲವು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು.












Click it and Unblock the Notifications