ಉದ್ಯೋಗ ಕೊಟ್ಟು 3 ತಿಂಗಳಲ್ಲೇ ಕೆಲಸ ಕಟ್‌ ಮಾಡಿದ್ರೆ ಕಾದಿದೆ ಶಾಕ್‌; MSMEಗಳಿಗೆ ಸರ್ಕಾರದ ಎಚ್ಚರಿಕೆ

ಬೆಂಗಳೂರು: ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಉದ್ಯೋಗ ನಿಧಿ ಯೋಜನೆ (Udyoga Nidhi Scheme) ಅಡಿ ಪ್ರೋತ್ಸಾಹಧನ ಪಡೆಯುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSME) ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿದೆ. ಪ್ರೋತ್ಸಾಹಧನ ಪಡೆದ ಬಳಿಕ ಮೂರು ತಿಂಗಳೊಳಗೆ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಿದರೆ, ನೀಡಿರುವ ಹಣವನ್ನು ಬಡ್ಡಿ ಸಮೇತ ವಾಪಸ್ ಪಡೆಯಲು ಸರ್ಕಾರಕ್ಕೆ ಅಧಿಕಾರವಿರಲಿದೆ.

ರಾಜ್ಯದ ಹಿಂದುಳಿದ 11 ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲು ಉದ್ಯೋಗ ನಿಧಿ ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಯಡಿ ಅರ್ಹ MSME ಘಟಕಗಳು ಸೃಷ್ಟಿಸುವ ಪ್ರತಿಯೊಂದು ಉದ್ಯೋಗಕ್ಕೆ ತಿಂಗಳಿಗೆ ₹2,500ರಂತೆ ಎರಡು ವರ್ಷಗಳ ಕಾಲ ಸರ್ಕಾರದಿಂದ ಪ್ರೋತ್ಸಾಹಧನ ಪಡೆಯಲಿವೆ. ಈ ಯೋಜನೆಯಡಿ ಸುಮಾರು 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದ್ದು, ಸರ್ಕಾರಕ್ಕೆ ಸುಮಾರು ₹300 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

Karnataka government Tightens MSME Rules Incentive Recovered If Workers Are Fired Within Three Months

11 ಹಿಂದುಳಿದ ಜಿಲ್ಲೆಗಳಲ್ಲಿ ಯೋಜನೆ

ಅರ್ಥಶಾಸ್ತ್ರಜ್ಞ ಎಂ. ಗೋವಿಂದ ರಾವ್ ನೇತೃತ್ವದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ವರದಿ ಆಧರಿಸಿ ಉದ್ಯೋಗ ನಿಧಿ ಯೋಜನೆ ಜಾರಿಗೆ ತರಲಾಗುತ್ತಿದೆ.

ಯಾದಗಿರಿ, ಬೀದರ್, ರಾಯಚೂರು, ಕಲಬುರಗಿ, ಕೊಪ್ಪಳ, ವಿಜಯನಗರ, ಬೆಳಗಾವಿ, ಗದಗ, ಹಾವೇರಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ.

ಉದ್ಯೋಗಿಗಳನ್ನು ವಜಾ ಮಾಡಿದರೆ ಹಣ ವಾಪಸ್

ಸರ್ಕಾರ ಈ ತಿಂಗಳ ಆರಂಭದಲ್ಲಿ ಹೊರಡಿಸಿರುವ ಆದೇಶದಲ್ಲಿ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಹಲವು ನಿಯಮಗಳನ್ನು ನಿಗದಿಪಡಿಸಿದೆ.

ಅದರಂತೆ, ಪ್ರೋತ್ಸಾಹಧನ ಪಡೆದ ನಂತರ ಮೂರು ತಿಂಗಳೊಳಗೆ ಯಾವುದೇ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಿರುವುದು ಕಂಡುಬಂದರೆ, ಈಗಾಗಲೇ ನೀಡಿರುವ ಪ್ರೋತ್ಸಾಹಧನವನ್ನು ಬಡ್ಡಿ ಸಮೇತ ವಸೂಲಿ ಮಾಡುವ ಅಧಿಕಾರ ಸರ್ಕಾರಕ್ಕಿದೆ.

ಅದೇ ರೀತಿ, ಉದ್ಯೋಗ ಸೃಷ್ಟಿಸಿರುವುದಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದಿಂದ ಹಣ ಪಡೆದಿರುವುದು ಪತ್ತೆಯಾದರೂ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಅಸ್ತಿತ್ವದಲ್ಲಿರುವ ಇತರ ಕಾನೂನು ಮತ್ತು ನಿಯಮಗಳ ಅಡಿಯಲ್ಲೂ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

10% MSME ಘಟಕಗಳ ಪರಿಶೀಲನೆ

ಯೋಜನೆಯ ಅನುಷ್ಠಾನಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ (DLIC) ಕಾರ್ಯನಿರ್ವಹಿಸಲಿದೆ. ಪ್ರೋತ್ಸಾಹಧನ ಬಿಡುಗಡೆ ಮಾಡುವ ಮುನ್ನ ಅರ್ಹ MSME ಘಟಕಗಳ ಪೈಕಿ ಕನಿಷ್ಠ 10ರಷ್ಟು ಘಟಕಗಳನ್ನು ಸ್ಥಳಕ್ಕೆ ತೆರಳಿ ಭೌತಿಕವಾಗಿ ಪರಿಶೀಲಿಸಬೇಕು ಎಂದು ಸರ್ಕಾರ ಸೂಚಿಸಿದೆ.

ಅದೇ ರೀತಿ, ಪ್ರೋತ್ಸಾಹಧನದ ಮೂರನೇ ಕಂತು ಬಿಡುಗಡೆ ಮಾಡುವ ಸಂದರ್ಭದಲ್ಲಿ ಫಲಾನುಭವಿಗಳ ಪೈಕಿ ಶೇ.10ರಷ್ಟು ಮಂದಿಯನ್ನು ಭೌತಿಕವಾಗಿ ಪರಿಶೀಲಿಸಲಾಗುತ್ತದೆ.

ಉದ್ಯೋಗಿಗಳಿಗೆ ಇರಬೇಕಾದ ಅರ್ಹತೆ ಏನು?

ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ನೇಮಕಗೊಂಡ ಉದ್ಯೋಗಿಗಳು ಯೋಜನೆಗೆ ಆಯ್ಕೆಯಾಗಿರುವ 11 ಜಿಲ್ಲೆಗಳ ಪೈಕಿ ಯಾವುದಾದರೂ ಜಿಲ್ಲೆಯ ನಿವಾಸಿಗಳಾಗಿರಬೇಕು. ಇದಕ್ಕಾಗಿ ಉದ್ಯೋಗಿಗಳು ನಿವಾಸ ಪ್ರಮಾಣಪತ್ರ, ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ (EPIC) ಸಲ್ಲಿಸಬೇಕಾಗುತ್ತದೆ.

ಇದಲ್ಲದೆ, ಉದ್ಯೋಗಿಯ ವಯಸ್ಸು 18ರಿಂದ 45 ವರ್ಷಗಳೊಳಗಿರಬೇಕು.ಉದ್ಯೋಗಿಗಳಿಗೆ ಪ್ರತಿ ತಿಂಗಳು ಪೂರ್ಣ ಹಾಜರಾತಿ ಇರುವಂತೆ MSMEಗಳು ಖಚಿತಪಡಿಸಿಕೊಳ್ಳಬೇಕು. ಪೂರ್ಣ ಮಾಸಿಕ ಹಾಜರಾತಿ ಇಲ್ಲದಿದ್ದರೆ ಪ್ರೋತ್ಸಾಹಧನ ಪಡೆಯುವಲ್ಲಿ ಸಮಸ್ಯೆಯಾಗಬಹುದು.

ಒಂದೇ ಉದ್ಯೋಗಿಗೆ ಎರಡು ಯೋಜನೆಗಳ ಲಾಭ ಇಲ್ಲ

ಒಂದೇ ಉದ್ಯೋಗಿಗೆ ಉದ್ಯೋಗ ನಿಧಿ ಯೋಜನೆಯ ಜೊತೆಗೆ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮೋಷನ್ ಸ್ಕೀಮ್ (NAPS) ಸೇರಿದಂತೆ ಇದೇ ರೀತಿಯ ಮತ್ತೊಂದು ಪ್ರೋತ್ಸಾಹಧನವನ್ನು ಪಡೆಯಲು MSMEಗಳಿಗೆ ಅವಕಾಶ ಇರುವುದಿಲ್ಲ.

ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು MSMEಗಳು ಉದ್ಯೋಗ ನಿಧಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಈ ಪೋರ್ಟಲ್ ಮೂಲಕವೇ ಉದ್ಯೋಗ ಸೃಷ್ಟಿಯ ವಿವರಗಳನ್ನು ಸಲ್ಲಿಸಿ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.

Karnataka government:‌ ರಾಜ್ಯ ಮಟ್ಟದಲ್ಲೂ ಮೇಲ್ವಿಚಾರಣೆ

ಯೋಜನೆಯ ಒಟ್ಟಾರೆ ಅನುಷ್ಠಾನ ಮತ್ತು ಮೇಲ್ವಿಚಾರಣೆಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ರಾಜ್ಯ ಮಟ್ಟದ ಸಮಿತಿ ರಚಿಸಲಾಗುತ್ತದೆ. ಹಿಂದುಳಿದ ಜಿಲ್ಲೆಗಳಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವುದರ ಜೊತೆಗೆ, ಉದ್ಯೋಗ ಸೃಷ್ಟಿಯ ಹೆಸರಿನಲ್ಲಿ ಪ್ರೋತ್ಸಾಹಧನ ಪಡೆದು ನಂತರ ಸಿಬ್ಬಂದಿಯನ್ನು ಕಡಿತಗೊಳಿಸುವುದನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+