ನೇಕಾರ ಸಮುದಾಯದ ಬೇಡಿಕೆಗೆ ಒಪ್ಪಿಗೆ ಕೊಟ್ಟ ಸರ್ಕಾರ
ಕರ್ನಾಟಕ ಸರ್ಕಾರ ರಾಜ್ಯದ ನೇಕಾರ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದೆ.
ಬೆಂಗಳೂರು, ಮಾರ್ಚ್ 21; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಗೆ ಕೆಲವೇ ದಿನಗಳು ಬಾಕಿ ಇದೆ. ಚುನಾವಣೆ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ಸರ್ಕಾರ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲೇ ವಿವಿಧ ಸಮುದಾಯದ ಬೇಡಿಕೆಗಳನ್ನು ಈಡೇರಿಸುತ್ತಿದೆ. ನೇಕಾರ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಲಾಗಿದೆ. ಕಳೆದ ವಾರ ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗಿತ್ತು.
ಸೋಮವಾರ ಕರ್ನಾಟಕ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಟ್ವೀಟ್ ಮಾಡಿದ್ದು, ರಾಜ್ಯದ ನೇಕಾರ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಲಾಗಿದ್ದು, ಈ ನಿಗಮವು ನೇಕಾರ, ತೊಗಟವೀರ, ಪದ್ಮಸಾಲಿ, ಕುರುಹಿನಶೆಟ್ಟಿ ಸೇರಿದಂತೆ ಇತರ ನೇಕಾರ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ಮಾನ್ಯ ಮುಖ್ಯಮಂತ್ರಿಯವರ ಟಿಪ್ಪಣಿಯ ಅನ್ವಯ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 2ಎ ನ ಕ್ರ.ಸಂ:75(ಎ) ಯಿಂದ (ಐ) ವರೆಗೂ ನಮೂದಾಗಿರುವ ದೇವಾಂಗ, ದೇವಾಂಗ್, ಕೋಷ್ಠಿ, ಹಟಗಾ: ಹಟಕಾ ಜೇಡ್, ವಿಂಕಾರ್, ಜುಲೋಹಿ, ಹಲ್ಕಾರ್, ಹಟಗಾರ್, ಸಮುದಾಯಗಳು ಹಾಗೂ ಕ್ರಮ ಸಂಖ್ಯೆ 76 (ಎ) ಯಿಂದ (ಕೂ) ವರೆಗೆ ಕ್ರಮವಾಗಿ ನಮೂದಾಗಿರುವ ನೇಯ್ದೆ, ಕುರುಹಿನ ಶೆಟ್ಟಿ, ಬಿಳಿಮಗ್ಗ, ತೊಗಟ: ತೂಗಟರು: ತೊಗಟಿಗ: ತೊಗಟವೀರ: ತೊಗಟಗೇರ: ತೊಗಟವೀರ ಕ್ಷತ್ರಿಯ: ತೂಗಜ ಪುಷ್ಪಾಂಜಲಿ, ಸೋಣಿಗ, ಜಂಖಾನ, ಐರಿ, ಅವಿರ್, ಸಾಲೆ: ಪಟ್ಟಸಾಲೆ, ಪದ್ಮಸಾಲೆ: ಪದ್ಮಶಾಲಿ: ಪದ್ಮಸಾಲಿ, ಸಾಲಿ: ಪಟ್ಟಸಾಲಿ, ಕೈಕೋಳನ್: ಸೆಂಗುಂದರ್, ನೇಯ್ಕಾರ್ (Neikar), ಜಾಡರ್, ಜಾಂದ್ರ, ಸ್ವಕುಳಸಾಳಿ: ಕುಳಸಾಳೆ ಜಾತಿಗಳಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯನ್ನು ಕಲ್ಪಿಸಲಾಗಿರುತ್ತದೆ.
ಮಾನ್ಯ ಮುಖ್ಯಮಂತ್ರಿಯವರ ಟಿಪ್ಪಣಿಯಲ್ಲಿ ಕರ್ನಾಟಕ ರಾಜ್ಯ ನೇಕಾರರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಆದೇಶಿಸಲಾಗಿರುತ್ತದೆ. ಪ್ರಸ್ತಾವನೆಯನ್ನು ಪರಿಶೀಲಿಸಿ ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಲಾಗಿದೆ. ಹಿಂದುಳಿದ ವರ್ಗಗಳ ಪ್ರವರ್ಗ-2 ಎ ಪಟ್ಟಿಯಲ್ಲಿರುವ ನೇಕಾರ ಸಮುದಾಯದ 38 ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ನೇಕಾರರ ಅಭಿವೃದ್ಧಿ ನಿಗಮ ರಚನೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಹಿಂದೆ ಕೊಡವ ಅಭಿವೃದ್ಧಿ ನಿಗಮ, ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡವುದಾಗಿ ಭರವಸೆ ನೀಡಿದ್ದರು. ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಎರಡು ಅಭಿವೃದ್ಧಿ ನಿಗಮಗಳನ್ನು ಸ್ಥಾಪನೆ ಮಾಡಿ ಅವರು ಆದೇಶ ಹೊರಡಿಸಿದ್ದಾರೆ. ಆದೇಶವನ್ನು ತಮ್ಮ ಟ್ವಿಟರ್, ಫೇಸ್‌ಬುಕ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ವಿವಿಧ ಅಭಿವೃದ್ಧಿ ನಿಗಮ ಸ್ಥಾಪನೆ; ಕರ್ನಾಟಕ ಸರ್ಕಾರ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ವಿವಿಧ ಸಮುದಾಯದ ಬೇಡಿಕೆಗಳನ್ನು ಈಡೇರಿಸುತ್ತಿದೆ. ರಾಜ್ಯದ ಕುಂಬಾರ ಸಮುದಾಯದ ಬಹುದಿನಗಳ ಬೇಡಿಕೆಯಾಗಿದ್ದ ಕುಂಬಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಸರ್ಕಾರ ಶನಿವಾರ ಆದೇಶ ಹೊರಡಿಸಿತ್ತು. ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ-1 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಷಾಹೀನ್ ಪರ್ವೀನ್ ಕೆ. ಈ ಕುರಿತು ಆದೇಶ ಹೊರಡಿಸಿದ್ದರು.
ಇದಕ್ಕೂ ಮೊದಲು ಸರ್ಕಾರ ಕರ್ನಾಟಕ ಹಡಪದ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿತ್ತು. ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಆದೇಶ ಹೊರಡಿಸಿತ್ತು. ಚುನಾವಣೆಯಲ್ಲಿ ವಿವಿಧ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಸರ್ಕಾರ ಸಮುದಾಯದ ಬೇಡಿಕೆಗಳನ್ನು ಈಡೇರಿಸುತ್ತಿದೆ.












Click it and Unblock the Notifications