SSLC ಪರೀಕ್ಷೆಯಲ್ಲಿ ಸಾವಿರಾರು ಮಕ್ಕಳು ಕನ್ನಡದಲ್ಲೇ ಫೇಲ್: ಎಚ್ಚೆತ್ತ ಸರ್ಕಾರ ಕನ್ನಡ ಪಠ್ಯಪುಸ್ತಕ ಸರಳೀಕರಣಕ್ಕೆ ಚಿಂತನೆ
ಬೆಂಗಳೂರು: ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಾತೃಭಾಷೆ ಕನ್ನಡದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮಕ್ಕಳ ಮೇಲಿನ ಶೈಕ್ಷಣಿಕ ಹೊರೆ ತಪ್ಪಿಸಲು ಮತ್ತು ಕನ್ನಡ ವಿಷಯದಲ್ಲಿ ಫೇಲ್ ಆಗುವವರ ಸಂಖ್ಯೆಯನ್ನು ಕಡಿಮೆ ಮಾಡಲು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕನ್ನಡ ಭಾಷಾ ಪಠ್ಯಕ್ರಮವನ್ನು ಗಣನೀಯವಾಗಿ ಸರಳೀಕರಣಗೊಳಿಸಲು ಗಂಭೀರ ಚಿಂತನೆ ನಡೆಸಿದೆ.
ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗುರುವಾರ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ, ಈ ವಿಚಾರವಾಗಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುವ ಮಕ್ಕಳು ಕನ್ನಡ ಭಾಷಾ ವಿಷಯದ ಪರೀಕ್ಷೆಯಲ್ಲಿ ಸುಲಭವಾಗಿ ತೇರ್ಗಡೆಯಾಗಬೇಕು ಎಂಬ ನಿಟ್ಟಿನಲ್ಲಿ, ಈಗಿರುವ ಪಠ್ಯಕ್ರಮವನ್ನು ಯಾವ ರೀತಿ ಸರಳೀಕರಿಸಬೇಕು ಎಂಬ ಬಗ್ಗೆ ರೂಪರೇಷೆ ಸಿದ್ಧಪಡಿಸಲಾಗುತ್ತಿದೆ.

ಈ ಮಧ್ಯೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಭಾಷಾ ವಿಷಯದ ಪಠ್ಯಕ್ರಮ ಸರಳೀಕರಿಸುವ ಕುರಿತು ಭಾಷಾ ತಜ್ಞರು ಹಾಗೂ ಪ್ರೌಢ ಶಾಲೆಯ ನುರಿತ ಶಿಕ್ಷಕರಿಂದಲೇ ವರದಿಯೊಂದನ್ನು ತಯಾರಿಸಿದ್ದು, ಅದನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯ ಸಾಧಕ-ಬಾಧಕಗಳ ಬಗ್ಗೆ ಸಚಿವರು ಮತ್ತು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲನೆ ನಡೆಸಲಿದ್ದಾರೆ. ಈ ಯೋಜನೆ ಅನುಷ್ಠಾನ ಯೋಗ್ಯ ಎಂದು ಕಂಡುಬಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು, ಸಚಿವ ಸಂಪುಟದ ಒಪ್ಪಿಗೆ ಪಡೆದು ಪಠ್ಯಕ್ರಮ ಸರಳೀಕರಣಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.
ಕಳೆದ ವರ್ಷ 90,000ಕ್ಕೂ ಹೆಚ್ಚು ಮಕ್ಕಳು ಫೇಲ್
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಂಕಿ-ಅಂಶಗಳನ್ನು ಗಮನಿಸಿದರೆ ಈ ಪಠ್ಯಕ್ರಮ ಬದಲಾವಣೆಯ ಅನಿವಾರ್ಯತೆ ಸ್ಪಷ್ಟವಾಗಿ ಅರ್ಥವಾಗುತ್ತದೆ. 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಶೇ.94.1ರಷ್ಟು ಐತಿಹಾಸಿಕ ಫಲಿತಾಂಶ ಬಂದಿದ್ದರೂ, ಶಿಕ್ಷಣ ಇಲಾಖೆಯೊಳಗೆ ಆತಂಕ ಮನೆಮಾಡಿದೆ. ಏಕೆಂದರೆ, ಪ್ರಥಮ ಭಾಷೆಯಲ್ಲಿ 21 ಸಾವಿರಕ್ಕೂ ಹೆಚ್ಚು ಮಕ್ಕಳು ಅನುತ್ತೀರ್ಣರಾಗಿದ್ದು, ಇದರಲ್ಲಿ ಕೇವಲ ಕನ್ನಡ ಭಾಷಾ ವಿಷಯದಲ್ಲೇ 19 ಸಾವಿರ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.
ಇನ್ನು, 2025ನೇ ಸಾಲಿನ ಮೂರೂ ಪರೀಕ್ಷೆಗಳ ಫಲಿತಾಂಶ ಅವಲೋಕಿಸಿದಾಗ ಪ್ರಥಮ ಭಾಷಾ ವಿಷಯಗಳಲ್ಲಿ 90 ಸಾವಿರಕ್ಕೂ ಹೆಚ್ಚು ಮಕ್ಕಳು ಫೇಲಾಗಿದ್ದರು. ಈ ಪೈಕಿ ಕನ್ನಡವನ್ನು ಪ್ರಥಮ ಭಾಷೆಯಾಗಿ ವ್ಯಾಸಂಗ ಮಾಡಿದವರೇ 85 ಸಾವಿರಕ್ಕೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.
ಪಠ್ಯಕ್ರಮ ಯಾಕೆ ಕಷ್ಟವಾಗಿದೆ?
ಕನ್ನಡ ಭಾಷಾ ಪಠ್ಯದಲ್ಲಿ ಕಠಿಣವಾದ ಹಳಗನ್ನಡ, ಕವಿತೆಗಳ ಪ್ರಮಾಣ ಹೆಚ್ಚಿರುವುದು ಹಾಗೂ ಕಷ್ಟಕರವಾದ ವ್ಯಾಕರಣ ವಿಷಯಗಳು ಅಗತ್ಯಕ್ಕಿಂತ ಹೆಚ್ಚು ತುಂಬಿರುವುದರಿಂದ ವಿದ್ಯಾರ್ಥಿಗಳಿಗೆ ಇದು ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಏಪ್ರಿಲ್ ತಿಂಗಳ ಅಂತ್ಯದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಸಚಿವರ ನೇತೃತ್ವದಲ್ಲಿ ನಡೆಯುವ ಸಭೆಯ ಬಳಿಕ ಈ ಕುರಿತು ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.














Click it and Unblock the Notifications