ಪಠ್ಯಪುಸ್ತಕ ಪರಿಷ್ಕರಣೆ; ಬದಲಾದ ಪಠ್ಯ, ವಾಕ್ಯಗಳ ಪಟ್ಟಿ
ಬೆಂಗಳೂರು, ಜೂನ್ 18; ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಭಾರೀ ಚರ್ಚೆಗೆ ಕಾರಣವಾದ ವಿಚಾರ ಪಠ್ಯಪುಸ್ತಕ ಪರಿಷ್ಕರಣೆ. ಶೈಕ್ಷಣಿಕ ವರ್ಷ ಆರಂಭವಾಗಿ, ಶಾಲೆಗಳು ಬಾಗಿಲು ತೆರೆದಿದ್ದರೂ ಸಹ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಮಾಡಿದೆ. ಯಾವ-ಯಾವ ಪಠ್ಯ ಪರಿಷ್ಕರಣೆಯಾಗಿದೆ? ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ಕರ್ನಾಟಕ ಪಠ್ಯಪುಸ್ತಕ ಸಂಘ ಮಲ್ಲೇಶ್ವರಂ, ಬೆಂಗಳೂರು ಪತ್ರಿಕಾ ಪ್ರಕಟಣೆ ಮೂಲಕ ಯಾವ-ಯಾವ ಪಠ್ಯ ಪರಿಷ್ಕರಣೆಯಾಗಿದೆ ಎಂದು ಹೇಳಿದೆ. 2023-24ನೇ ಸಾಲಿಗೆ ಜಾರಿಯಲ್ಲಿರುವ ಪಠ್ಯಪುಸ್ತಕಗಳನ್ನು ಸರ್ಕಾರದ ಆದೇಶದ ಮೇರೆಗೆ ವಿಷಯ ತಜ್ಞರು 6 ರಿಂದ 10ನೇ ತರಗತಿಗಳ ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಹಾಗೂ 6 ರಿಂದ 10ನೇ ತರಗತಿಗಳ ಸಮಾಜ ವಿಜ್ಞಾನ ಪಠ್ಯಪುಸ್ತಕಗಳನ್ನು ಪರಿಶೀಲಿಸಿ, ಕೆಲವು ಮಾರ್ಪಾಡುಗಳನ್ನು ಸೂಚಿಸಿರುತ್ತಾರೆ ಎಂದು ಹೇಳಿದೆ.

ಹೊಸ ಪಠ್ಯಗಳನ್ನು ತಿದ್ದೋಲೆ ರೂಪದಲ್ಲಿ ಸಿದ್ಧಪಡಿಸಿ, ರಾಜ್ಯ ಸರ್ಕಾರ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಶಾಲೆಗಳಿಗೆ ನೀಡಲಾಗುವುದು. ತಿದ್ದೋಲೆಯ ಸಾಫ್ಟ್ ಪ್ರತಿಯನ್ನು ಕರ್ನಾಟಕ ಪಠ್ಯಪುಸ್ತಕ ಸಂಘದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಯಾವ-ಯಾವ ಪಠ್ಯಗಳು?; 2023-24ನೇ ಸಾಲಿನಲ್ಲಿ ಜಾರಿಯಲ್ಲಿರುವ ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕಗಳಿಗೆ ಸಂಬಂಧಿಸಿದಂತೆ ಸೂಚಿಸಿರುವ ಬದಲಾವಣೆಗಳು ಹೀಗಿವೆ.

6ನೇ ತರಗತಿ, ಸಮಾಜ ವಿಜ್ಞಾನ ಭಾಗ-1; ನಮ್ಮ ಹೆಮ್ಮೆಯ ರಾಜ್ಯ- ಕರ್ನಾಟಕ ಎಂಬ ಅಧ್ಯಾಯದ ಪುಟ ಸಂಖ್ಯೆ 33ರಲ್ಲಿ ಕಲಬುರ್ಗಿ ವಿಭಾಗದ ವಿಷಯಾಂಶವನ್ನು ಬೋಧಿಸುವಾಗ "ಈ ವಿಭಾಗದ ಜಿಲ್ಲೆಗಳಿಗೆ ವಿಶೇಷ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸಂವಿಧಾನದ ಅನುಚ್ಛೇದ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿದೆ"ಎಂಬ ವ್ಯಾಕ್ಯವನ್ನು ಸೇರ್ಪಡೆ ಮಾಡಲಾಗಿದೆ.
6ನೇ ತರಗತಿ, ಸಮಾಜ ವಿಜ್ಞಾನ ಭಾಗ-1: "ವೇದಕಾಲದ ಸಂಸ್ಕೃತಿ" ಎಂಬ ಹೊಸ ಅಧ್ಯಾಯವನ್ನು ಸೇರ್ಪಡೆ ಮಾಡಲಾಗಿದೆ.
6ನೇ ತರಗತಿ, ಸಮಾಜ ವಿಜ್ಞಾನ ಭಾಗ-1: "ಹೊಸ ಧರ್ಮಗಳ ಉದಯ" ಎಂಬ ಹೊಸ ಅಧ್ಯಾಯವನ್ನು ಸೇರ್ಪಡೆ ಮಾಡಲಾಗಿದೆ.
6ನೇ ತರಗತಿ, ಸಮಾಜ ವಿಜ್ಞಾನ ಭಾಗ-2: ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಎಂಬ ಅಧ್ಯಾಯದ ಜೊತೆಗೆ "ಮಾನವ ಹಕ್ಕುಗಳು" ಎಂಬ ವಿಷಯಾಂಶವನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
7ನೇ ತರಗತಿ, ಸಮಾಜ ವಿಜ್ಞಾನ ಭಾಗ-1: "ಜಗತ್ತಿನ ಪ್ರಮುಖ ಘಟನೆಗಳು" ಎಂಬ ಅಧ್ಯಾಯದಲ್ಲಿ ಎಲ್ಲೆಲ್ಲಿ 'ರಿಲಿಜನ್' ಎಂದು ಬಂದಿದೆಯೋ ಅಲ್ಲೆಲ್ಲಾ 'ಧರ್ಮ' ಎಂದು ಬದಲಾಯಿಸಲಾಗಿದೆ.
7ನೇ ತರಗತಿ, ಸಮಾಜ ವಿಜ್ಞಾನ ಭಾಗ-1; "ಮೈಸೂರು ಮತ್ತು ಇತರ ಸಂಸ್ಥಾನಗಳು" ಎಂಬ ಅಧ್ಯಾಯದ ಜೊತೆಗೆ ಮುಮ್ಮಡಿಕೃಷ್ಣರಾಜ ಒಡೆಯರ್, ಕಮಿಷನರ್‌ಗಳ ಆಡಳಿತ, ಹತ್ತನೆಯ ಚಾಮರಾಜ ಒಡೆಯರು. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್. ಎಂ. ವಿಶ್ವೇಶ್ವರಯ್ಯ ಮತ್ತು ಸರ್. ಮಿರ್ಜಾ ಇಸ್ಮಾಯಿಲ್ ಈ ವಿಷಯಾಂಶಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
7ನೇ ತರಗತಿ, ಸಮಾಜ ವಿಜ್ಞಾನ ಭಾಗ-2: "ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು" ಎಂಬ ಅಧ್ಯಾಯದ ಜೊತೆಗೆ ಮಹಿಳಾ ಸುಧಾರಕಿಯರು ಎಂಬ ವಿಷಯಾಂಶಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
7ನೇ ತರಗತಿ, ಸಮಾಜ ವಿಜ್ಞಾನ ಭಾಗ-2; "ಸ್ವಾತಂತ್ರ್ಯ ಸಂಗ್ರಾಮ" ಎಂಬ ಅಧ್ಯಾಯದ ಜೊತೆಗೆ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಎಂಬ ವಿಷಯಾಂಶಗಳನ್ನು ಸೇರಿಸಲಾಗಿದೆ.
10ನೇ ತರಗತಿ, ಸಮಾಜ ವಿಜ್ಞಾನ ಭಾಗ-1: "ಭಾರತಕ್ಕಿರುವ ಸವಾಲುಗಳು ಹಾಗೂ ಪರಿಹಾರೋಪಾಯಗಳು" ಎಂಬ ಅಧ್ಯಾಯದ ಪ್ರಾದೇಶಿಕವಾದ ಎಂಬ ಉಪ ಶೀರ್ಷಿಕೆ ಅಡಿಯಲ್ಲಿ "ಭಾಷಾಭಿಮಾನವು ರಾಷ್ಟ್ರೀಯವಾದದ ವಿರುದ್ಧ ಸಂಕುಚಿತ ಮನೋಭಾವವನ್ನು ಬೆಳೆಸುತ್ತದೆ. ಪ್ರಾದೇಶಿಕ ವಾದವನ್ನು ವೈಭವೀಕರಿಸುವುದರಿಂದ ದೇಶದ ಏಕತೆಗೆ ಧಕ್ಕೆ ಉಂಟಾಗುತ್ತದೆ. ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿನ ತೆಲಂಗಾಣ ಭಾಗದ ಪ್ರಾದೇಶಿಕವಾದದ ಹೋರಾಟವನ್ನು ಗಮನಿಸಬಹುದು. ದೇಶದ ಇನ್ನಿತರ ಭಾಗಗಳಲ್ಲಿ ನಡೆಯುತ್ತಿರುವ ಪ್ರಾದೇಶಿಕವಾದದ ಹೋರಾಟಗಳು ಕೂಡ ದೇಶದ ಅಭಿವೃದ್ಧಿಗೆ ತೊಡಕಾಗುವ ಸಾಧ್ಯತೆಗಳಿವೆ. ಇಂತಹ ಸಂಕುಚಿತ ಪ್ರಾದೇಶಿಕ ವಾದವನ್ನು ದೂರೀಕರಿಸಲು ನಮ್ಮ ಭಾರತ ಸಂವಿಧಾನವೇ ಹಲವಾರು ಮಾರ್ಗಗಳನ್ನು ಸೂಚಿಸಿದೆ"ಎಂಬ ವಾಕ್ಯಗಳನ್ನು ಕೈಬಿಡಲಾಗಿದೆ.
2023-24ನೇ ಸಾಲಿನಲ್ಲಿ ಜಾರಿಯಲ್ಲಿರುವ ಕನ್ನಡ ಭಾಷಾ ವಿಷಯದ ಪಠ್ಯಪುಸ್ತಕಗಳಿಗೆ ಸಂಬಂಧಿಸಿದಂತೆ ಸೂಚಿಸಿರುವ ಬದಲಾವಣೆಗಳು
6ನೇ ತರಗತಿ, ಪ್ರಥಮ ಭಾಷೆ ಪದ್ಯ. ನಿರ್ಮಲಾ ಸುರತ್ಕಲ್ ಅವರ 'ನಮ್ಮದೇನಿದೆ?' ಬದಲು, ಚೆನ್ನಣ್ಣ ವಾಲೀಕಾರ ಅವರ 'ನೀ ಹೋದ ಮರುದಿನ' ಸೇರ್ಪಡೆ/ ತಿದ್ದುಪಡಿ.
7ನೇ ತರಗತಿ ಪ್ರಥಮ ಭಾಷೆ ಪೂರಕ ಗದ್ಯ. ರಮಾನಂದ ಆಚಾರ್ಯ ಅವರ 'ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ' ಬದಲು, ಡಾ. ಎಚ್. ಎಸ್. ಅನುಪಮ ಅವರ 'ಸಾವಿತ್ರಿಬಾಯಿ ಪುಲೆ' ಸೇರ್ಪಡೆ/ ತಿದ್ದುಪಡಿ.
8ನೇ ತರಗತಿ ಪ್ರಥಮ ಭಾಷೆ ಪೂರಕ ಗದ್ಯ. ಪಾರಂಪಳ್ಳಿ ನರಸಿಂಹ ಐತಾಳ ಅವರ 'ಭೂ ಕೈಲಾಸ' ಪೌರಾಣಿಕದ ಬದಲು, ತಿ. ಶಾ. ಶರ್ಮ ಸಿದ್ಧನಹಳ್ಳಿ ಕೃಷ್ಣಶರ್ಮ ಅನುವಾದಿತ 'ಮಗಳಿಗೆ ಬರೆದ ಪತ್ರ' ಕೃತಿಕಾರರು ಜವಾಹರಲಾಲ್ ನೆಹರು ಸೇರ್ಪಡೆ/ ತಿದ್ದುಪಡಿ.
10ನೇ ತರಗತಿ ಪ್ರಥಮ ಭಾಷೆ ಗದ್ಯ. ಕೇಶವ ಬಲಿರಾಮ ಹೆಗಡೇವಾರ 'ನಿಜವಾದ ಆದರ್ಶಪುರುಷಯಾಗಾಗಬೇಕು' ಬದಲು, ಶಿವಕೋಟ್ಯಾಚಾರ್ಯ ಅವರ 'ಸುಕುಮಾರಸ್ವಾಮಿಯ ಕಥೆ' ಸೇರ್ಪಡೆ/ ತಿದ್ದುಪಡಿ.
10ನೇ ತಗರತಿ ಪ್ರಥಮ ಭಾಷೆ ಗದ್ಯ. ಶತಾವಧಾನಿ ಡಾ. ಆರ್. ಗಣೇಶ್ 'ಶ್ರೇಷ್ಠ ಭಾರತೀಯ ಚಿಂತನೆಗಳು' ಬದಲು, ಸಾ. ರಾ. ಅಬೂಬಕ್ಕರ್ ಅವರ 'ಯುದ್ಧ' ಸೇರ್ಪಡೆ/ ತಿದ್ದುಪಡಿ.
10ನೇ ತಗರತಿ ಪ್ರಥಮ ಭಾಷೆ ಪೂರಕ ಗದ್ಯ. ಚಕ್ರವರ್ತಿ ಸೂಲಿಬೆಲೆ 'ತಾಯಿ ಭಾರತೀಯ ಅಮರಪುತ್ರರು' ಪೂರ್ಣ ಗದ್ಯ ಕೈ ಬಿಡಲಾಗಿದೆ.
10ನೇ ತರಗತಿ ಪ್ರಥಮ ಭಾಷೆ ಪದ್ಯ. ಲಕ್ಷ್ಮೀಶ ಅವರ 'ವೀರಲವ', 'ವೀರಲವ' ಪದ್ಯದ ಟಿಪ್ಪಣಿಯಲ್ಲಿ ವಾಲ್ಮೀಕಿ ಮಹರ್ಷಿಗಳ ಪರಿಚಯದ ತಿದ್ದುಪಡಿ.
8ನೇ ತರಗತಿ ದ್ವಿತೀಯ ಭಾಷೆ ಗದ್ಯ. ಕೆ. ಟಿ. ಗಟ್ಟಿ 'ಕಾಲವನ್ನು ಗೆದ್ದವರು' ಬದಲು, ವಿಜಯಮಾಲಾ ರಂಗನಾಥ್ ಅವರ 'ಬ್ಲಡ್‌ಗ್ರೂಪ್' ಸೇರ್ಪಡೆ/ ತಿದ್ದುಪಡಿ.
9ನೇ ತರಗತಿ ದ್ವಿತೀಯ ಭಾಷೆ ಗದ್ಯ. ಪಿ. ಸತ್ಯನಾರಾಯಣಭಟ್ ಅವರ 'ಅಚ್ಚರಿಯ ಇಂಬಳ' ಬದಲು, ದಸ್ತಗಿರಿ ಅಲ್ಲೀಭಾಯಿ ಅವರ 'ಉರುಸುಗಳಲ್ಲಿ ಭಾವೈಕ್ಯತೆ' ಸೇರ್ಪಡೆ/ ತಿದ್ದುಪಡಿ.












Click it and Unblock the Notifications