ಎಂಬಿಬಿಎಸ್ ಗುತ್ತಿಗೆ ವೈದ್ಯರ ವೇತನ ಹೆಚ್ಚಿಸಿದ ರಾಜ್ಯ ಸರ್ಕಾರ
ಬೆಂಗಳೂರು, ಜೂ. 02: ಸರ್ಕಾರಿ ಗುತ್ತಿಗೆ ವೈದ್ಯರ ಬಹುದಿನ ಬೇಡಿಕೆಯನ್ನು ರಾಜ್ಯ ಸರ್ಕಾರ ಕೊನೆಗೂ ಈಡೇರಿಸಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಬಿಬಿಎಸ್ ವೈದ್ಯರ ವೇತನವನ್ನು ಹೆಚ್ಚಿಸಲಾಗಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಆದೇಶ ಮಾಡಿದ್ದು, ಎಂಬಿಬಿಎಸ್ ಗುತ್ತಿಗೆ ವೈದ್ಯರ ಸೇವೆಯನ್ನು ಖಾಯಂಗೊಳಿಸುವ ಬೇಡಿಕೆಗೆ ಆಸ್ಪದ ಕೊಡುವಂತಿಲ್ಲ ಎಂಬ ಷರತ್ತಿಗೆ ಒಳಪಟ್ಟು ಆದೇಶ ಮಾಡಲಾಗಿದೆ ಎಂದು ಇಲಾಖೆ ಅಧೀನ ಕಾರ್ಯದರ್ಶಿ ಯ. ಶಿವಶಂಕರ್ ಆದೇಶ ಹೊರಡಿಸಿದ್ದಾರೆ.
Recommended Video
ಆರೋಗ್ಯ ಇಲಾಖೆಯಲ್ಲಿ ಗ್ರಾಮೀಣ ಭಾಗ, ತಾಲ್ಲೂಕು ಕೇಂದ್ರ, ಜಿಲ್ಲಾ ಕೇಂದ್ರ ಹಾಗೂ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂಬಿಬಿಎಸ್ ವೈದ್ಯರ ಗುತ್ತಿಗೆ ಮಾಸಿಕ ವೇತನವನ್ನು ಈಗಿನ 45 ಸಾವಿರ ರೂ. ಗಳಿಂದ 60 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗಿದೆ.

ರಾಜ್ಯಾದ್ಯಂತ ಒಟ್ಟು 504 ಎಂಬಿಬಿಎಸ್ ವೈದ್ಯರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಈ ಆದೇಶ ಅನ್ವಯವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ನಮ್ಮ ವೇತನವನ್ನೂ ಹೆಚ್ಚಿಸಿ: ಆಯುಷ್ ಇಲಾಖೆ ವೈದ್ಯರು ಕೂಡ ರಾಜ್ಯಾದ್ಯಂತ ಮುಷ್ಕರ ನಡೆಸಿ ವೇತನ ಹೆಚ್ಚಳಕ್ಕೆ ಮನವಿ ಮಾಡಿದ್ದರು. ಅಲೋಪತಿ (ಎಂಬಿಬಿಎಸ್) ಗುತ್ತಿಗೆ ವೈದ್ಯರಿಗೆ ವೇತನ ಹೆಚ್ಚಿಸಲಾಗಿರುವ ರೀತಿಯಲ್ಲಿ ನಮಗೂ ವೇತನ ಹೆಚ್ಚಳ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸರ್ಕಾರ ಇನ್ನೂ ಆ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಬೇಕಿದೆ.












Click it and Unblock the Notifications