ಬೋರ್‌ವೆಲ್ ಹಾಕಿಸಿದವರಿಗೆ ರಾಜ್ಯ ಸರ್ಕಾರದಿಂದ ದೊಡ್ಡ ಶಾಕ್! ಏನದು..
ನೀರಿಗಾಗಿ ಬೋರ್‌ವೆಲ್ ಕೊರೆಸಲು ರಾಜ್ಯ ಸರ್ಕಾರ ಈಗಾಗಲೇ ಕಟ್ಟುನಿಟ್ಟಿನ ರೂಲ್ಸ್ ಜಾರಿ ಮಾಡಿದೆ. ಇದೀಗ ಬೋರ್‌ವೆಲ್ ವಿಚಾರವಗಿ ಸರ್ಕಾರವು ಮತ್ತಷ್ಟು ಬಿಗಿಯಾದ ಕ್ರಮಗಳನ್ನು ಹೇರಲು ಮುಂದಾಗಿದೆ. ಈಗಾಗಲೇ ಬೋರ್‌ವೆಲ್ ಕೊರೆಸುವವರಿಗೂ ಸಹ ಇದರಿಂದ ಆತಂಕ ಎದುರಾಗಿದೆ.
ಹೌದು, ಬೋರ್‌ವೆಲ್ ಕೊರೆಸಿ, ಅದನ್ನು ಸಕಾಲದಲ್ಲಿ ಮುಚ್ಚದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಮುಂದಾಗಿದೆ. ಅದರಂತೆ ಖಾಲಿ ಬೋರ್‌ವೆಲ್‌ಗಳನ್ನು ಮುಚ್ಚದವರಿಗೆ ಬರೋಬ್ಬರಿ ಒಂದು ವರ್ಷ ಜೈಲು ಶಿಕ್ಷೆಯೂ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಕಾನೂನು ಜಾರಿ ಮಾಡಲು ಸಜ್ಜಾಗಿದೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಪ್ರಸ್ತಾಪಿಸಿರುವ ಕರ್ನಾಟಕ ಅಂತರ್ಜಲ (ನಿಯಂತ್ರಣ ಮತ್ತು ಅಭಿವೃದ್ಧಿ ನಿರ್ವಹಣೆಯ ನಿಯಂತ್ರಣ) ತಿದ್ದುಪಡಿ ಮಸೂದೆ-2024ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ರಾಜ್ಯದ ಹಲವೆಡೆ ಕೊರೆಸಲಾಗಿರುವ ಬೋರ್‌ವೆಲ್‌ಗಳನ್ನು ಮುಚ್ಚಿಲ್ಲ. ಅಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದ ಕಾರಣ ಅಪಾಯದ ಸ್ಥಿತಿಯಲ್ಲಿವೆ. ಇವುಗಳನ್ನು ತ್ವರಿತವಾಗಿ ಮುಚ್ಚಬೇಕು ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ರಾಜ್ಯದಲ್ಲಿ ನಿಷ್ಕ್ರಿಯ ಬೋರ್‌ವೆಲ್‌ಗಳಿಂದ ಎದುರಾಗಿರುವ ಅನಾಹುತಗಳು ಒಂದೆರಡಲ್ಲ. ಹಲವು ಜಿಲ್ಲೆಗಳಲ್ಲಿ ಬೋರ್‌ವೆಲ್‌ಗಳಿಂದ ಅಪಾಯ ಸಂಭವಿಸಿದೆ. ಮಕ್ಕಳು ಬೋರ್‌ವೆಲ್‌ಗೆ ಬಿದ್ದಿರುವ ಘಟನೆಗಳು ವರದಿಯಾಗಿವೆ. ಅಂದಿನಿಂದಲೂ ಕೊಳವೆಬಾವಿ ಮಾಲೀಕರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಹೇಳಲಾಗುತ್ತಿದೆ. ಬೋರ್‌ವೆಲ್ ಹಾಕಿಸಿದ ನಂತರ ಅದು ಫೇಲ್ ಆದರೆ, ಮಾಲೀಕರೇ ಅದನ್ನು ಮುಚ್ಚಿ ಭದ್ರಪಡಿಸಬೇಕು ಎಂದು ಹೇಳಿದ್ದಾರೆ.
ಬೋರ್‌ವೆಲ್‌ಗಳಿಂದ ಯಾವುದೇ ಅನಾಹುತಗಳು ಸಂಭವಿಸಬಾರದು ಎಂಬ ನಿಟ್ಟಿನಲ್ಲಿ ಈ ಮಸೂದೆಯನ್ನು ಪ್ರಸ್ತಾಪಿಸಲಾಗಿದೆ. ಒಂದು ವೇಳೆ ಬೋರ್‌ವೆಲ್ ಮುಚ್ಚದಿದ್ದರೆ ಆಯಾ ಜಮೀನಿನ ಮಾಲೀಕರು, ಬೋರ್‌ವೆಲ್ ಹಾಕಿದ ಏಜೆನ್ಸಿಯವರನ್ನೇ ಹೊಣೆ ಮಾಡಲಾಗುತ್ತದೆ. ಈ ನಿಯಮ ಉಲ್ಲಂಘಿಸಿದರೆ, ಒಂದು ವರ್ಷಗಳ ಕಠಿಣ ಜೈಲು ಶಿಕ್ಷೆ ಸಹ ವಿಧಿಸಲಾಗುವುದು. ಜೊತೆಗೆ ಬೋರ್‌ವೆಲ್ ಮುಚ್ಚದವರಿಗೆ 10,000 ರೂಪಾಯಿವರೆಗೆ ದಂಡ ಕೂಡ ವಿಧಿಸಲಾಗುವುದು. ಅನುಮತಿಯಿಲ್ಲದೆ ಬೋರ್‌ವೆಲ್ ಕೊರೆದರೆ, ಭಾರಿ ದಂಡದೊಂದಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲು ಈ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ವಿವರಿಸಿದ್ದಾರೆ.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕವೂ ಸೇರಿದಂತೆ ಒಂಬತ್ತು ವಿವಿಧ ವಿಧೇಯಕಗಳಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಕಾರ್ಮಿಕರ ಕಲ್ಯಾಣ ನಿಧಿ ಕಾಯ್ದೆ 1965ಕ್ಕೆ ತಿದ್ದುಪಡಿ ಮಾಡಲಾಗುತ್ತಿದೆ. ಈ ಹಿಂದೆ ಪ್ರತಿ ಕಾರ್ಮಿಕರಿಂದ 20 ರೂಪಾಯಿ ಹಾಗೂ ಮಾಲೀಕರಿಂದ 40 ರೂಪಾಯಿ, ಸರ್ಕಾರದಿಂದ ಕಾರ್ಮಿಕರ ಪಾಲು ಎಂದು 20 ರೂಪಾಯಿಗಳನ್ನು ಕಾರ್ಮಿಕ ಕಲ್ಯಾಣ ನಿಧಿಗೆ ಸಂಗ್ರಹಿಸಲಾಗುತ್ತಿತ್ತು. ಅದನ್ನು ಈಗ ಹೆಚ್ಚಿಸಲಾಗಿದ್ದು, ಕಾರ್ಮಿಕರಿಂದ 50 ರೂಪಾಯಿ, ಮಾಲೀಕರಿಂದ 100 ರೂಪಾಯಿ ಹಾಗೂ ಸರ್ಕಾರದಿಂದ 50 ರೂಪಾಯಿ ವಂತಿಕೆ ಹೆಚ್ಚಿಸಲು ಕಾಯ್ದೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಕಾರ್ಮಿಕ ಕಲ್ಯಾಣ ಮಂಡಳಿಯ ವಂತಿಕೆ ಹೆಚ್ಚುವ ಮೂಲಕ ಕಾರ್ಮಿಕರು ಮತ್ತು ಅವರ ಕುಟುಂಬದ ಅವಲಂಬಿತರಿಗೆ ಇರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಇದರಿಂದ ಅನುಕೂಲವಾಗಲಿದೆ. ಪ್ರಸ್ತುತ ಇದರ ವಾರ್ಷಿಕ ವಂತಿಕೆ 42.18 ಕೋಟಿ ರೂಪಾಯಿ ಬರುತ್ತಿದೆ. ತಿದ್ದುಪಡಿ ಬಳಿಕ 100 ಕೋಟಿ ರೂಪಾಯಿಗೂ ಹೆಚ್ಚು ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications