ವಿದೇಶದಿಂದ ಮರಳು ಆಮದು ಮಾಡಿಕೊಳ್ಳಲು ಸರ್ಕಾರದ ನಿರ್ಧಾರ
ಬೆಂಗಳೂರು, ಆಗಸ್ಟ್ 1: ರಾಜ್ಯದಲ್ಲಿ ತಲೆದೋರಿರುವ ಮರಳಿನ ಅಭಾವ ಹಾಗೂ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿದೇಶದಿಂದ ಮರಳನ್ನು ತರಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನೆರೆ ದೇಶಗಳಾದ ಬರ್ಮಾ, ಮಲೇಷ್ಯಾ, ಥಾಯ್ಲೆಂಡ್ ನಿಂದ ಮರಳನ್ನು ತಯಾರಿಸಲು ನಿರ್ಧರಿಸಲಾಗಿದ್ದು, ಇದು ಅನುಷ್ಠಾನಕ್ಕೆ ಬಂದರೆ, ಗ್ರಾಹಕರಿಗೆ 25 ಕೆ.ಜಿ. ಬ್ಯಾಗ್ ಗಳಲ್ಲಿ ಮರಳು ಸಿಗಲಿದೆ.
ಅಂದ ಹಾಗೆ, ಕಡಿಮೆ ದರಲ್ಲಿ ಈ ಮರಳನ್ನು ಮಾರಾಟ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರಿಂದ ಗ್ರಾಹಕರಿಗೆ ಅನುಕೂಲವೂ ಆಗಲಿದ್ದು, ರಾಜ್ಯದ ಪ್ರಾಕೃತಿಕ ಸಂಪತ್ತು ಉಳಿಯುವ ನಿಟ್ಟಿನಲ್ಲಿ ಮರಳು ಆಮದು ಸಹಕಾರಿಯಾಗಲಿದೆ ಎಂದು ಸರ್ಕಾರ ಆಲೋಚಿಸಿದೆ.

ಕಡಿಮೆ ದರದಲ್ಲಿ ಮರಳು ಲಭ್ಯವಾದರೆ, ಅಕ್ರಮ ಮರಳುಗಾರಿಕೆಗೆ ತಾನೇ ತಾನಾಗಿ ಕಡಿವಾಣ ಬೀಳುತ್ತದೆ ಎಂಬುದು ರಾಜ್ಯ ಸರ್ಕಾರದ ವಿಚಾರವಾಗಿದೆ.
ಹೆಚ್ಚುತ್ತಿರುವ ಮರಳು ಬೇಡಿಕೆಯಿಂದಾಗಿ, ಅಕ್ರಮ ಮರಳು ದಂಧೆಕೋರರು ಹಲವಾರು ನದಿಪಾತ್ರಗಳನ್ನು ಬಗೆದು ನದಿಗಳಿಗೆ ಹೆಚ್ಚು ಹಾನಿ ಮಾಡುತ್ತಿದ್ದಾರೆ. ಇದರಿಂದ ನದಿಗಳು ಒಂದೇ ದಿಕ್ಕಿನಲ್ಲಿ ಹರಿಯುವ ಬದಲು ಅಕ್ಕಪಕ್ಕದ ದಡಗಳ ಕಡೆಗೆ ಹರಿಯುವುದರಿಂದ ನಿಸರ್ಗಕ್ಕೆ ಹಾನಿಯಾಗುವ ಸಂಭವ ತಲೆದೋರಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ವಿದೇಶದಿಂದ ಮರಳು ಆಮದು ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದೇ ವಾರದಲ್ಲಿ ವಿದೇಶಿ ಮರಳು ಆಮದುದಾರರಿಗೆ ಪರವಾನಗಿ ಕೊಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.












Click it and Unblock the Notifications