ಆಡಳಿತ ಮತ್ತು ಶಿಕ್ಷಣದಲ್ಲಿ AI ಕ್ರಾಂತಿ: ಆಂಥ್ರೋಪಿಕ್ ಸಂಸ್ಥೆಯೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಸಭೆ
ರಾಜ್ಯದ ಆಡಳಿತ ವ್ಯವಸ್ಥೆ, ಉನ್ನತ ಶಿಕ್ಷಣ, ಆರೋಗ್ಯ ರಕ್ಷಣೆ, ಸಂಶೋಧನೆ ಹಾಗೂ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆಯನ್ನು ಮತ್ತಷ್ಟು ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಸುದೀರ್ಘ ಸಹಭಾಗಿತ್ವ ಸಾಧಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಾಗತಿಕ ಎಐ ನಾಯಕ ಸಂಸ್ಥೆಯಾದ 'ಆಂಥ್ರೋಪಿಕ್' ನಿಯೋಗದೊಂದಿಗೆ ಮಹತ್ವದ ಚರ್ಚೆ ನಡೆಸಿದರು.
ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರವು ಪ್ರಮುಖ ಹೆಜ್ಜೆ ಇಟ್ಟಿದೆ. ಸಭೆಯಲ್ಲಿ ಜವಾಬ್ದಾರಿಯುತ ಎಐ ಬಳಕೆ, ನಾಗರಿಕರ ಡೇಟಾ ಗೌಪ್ಯತೆ ಮತ್ತು ಡೇಟಾ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವ ಮೂಲಕ ಸರ್ಕಾರ ಹಾಗೂ ಉದ್ಯಮಗಳಿಗಾಗಿ ಅಪ್ಲೈಡ್ ಎಐ ಪರಿಹಾರಗಳ ಅಳವಡಿಕೆ ಕುರಿತು ಸಮಾಲೋಚನೆ ನಡೆಸಲಾಯಿತು. ರಾಜ್ಯದಲ್ಲಿ 'ಎಐ ವಿಶ್ವವಿದ್ಯಾಲಯ' ಸ್ಥಾಪನೆ, ಬೃಹತ್ ಮಟ್ಟದ ಕೌಶಲ್ಯಾಭಿವೃದ್ಧಿ ಯೋಜನೆಗಳು ಮತ್ತು ಡೀಪ್-ಟೆಕ್ ಅನ್ವೇಷಣೆಗಳಿಗೆ ಬೆಂಬಲ ನೀಡುವ ಸಮಗ್ರ ದೃಷ್ಟಿಕೋನವನ್ನು ಮುಖ್ಯಮಂತ್ರಿಗಳು ನಿಯೋಗದ ಮುಂದೆ ವಿವರಿಸಿದರು.

ನಿಪುಣ ಕಾರ್ಯಕ್ರಮದಡಿ 'ಕ್ಲಾಡ್ ಎಐ' ಸರ್ಟಿಫಿಕೇಶನ್
ದೇಶದಲ್ಲೇ ಅತಿ ಹೆಚ್ಚು ಎಐ ಪ್ರಮಾಣೀಕೃತ ಪ್ರತಿಭಾವಂತರನ್ನ ರೂಪಿಸುವ ಗುರಿಯೊಂದಿಗೆ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ನಿಪುಣ' (NIPUNA) ಕಾರ್ಯಕ್ರಮದಡಿ ಆಂಥ್ರೋಪಿಕ್ ಸಂಸ್ಥೆಯ ಪ್ರಸಿದ್ಧ 'ಕ್ಲಾಡ್' (Claude) ಸರ್ಟಿಫಿಕೇಶನ್ ಸೇರಿದಂತೆ ಹಲವು ಎಐ-ಸಂಬಂಧಿತ ಕೋರ್ಸ್‌ಗಳನ್ನು ಪರಿಚಯಿಸಲು ನಿರ್ಧರಿಸಲಾಗಿದೆ. ಜೊತೆಗೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆಂಥ್ರೋಪಿಕ್‌ನ 'ಕ್ಲಾಡ್ ಎಐ' ವೇದಿಕೆಯನ್ನು ಸಬ್ಸಿಡಿ ಅಥವಾ ರಿಯಾಯಿತಿ ದರದಲ್ಲಿ ಒದಗಿಸುವಂತೆ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದರು. ಈ ಸಹಯೋಗದೊಂದಿಗೆ ಸಿಎಂ 100 ದಿನಗಳ ಮೈಲಿಗಲ್ಲನ್ನು ಸಾಧಿಸುವ ಬಗ್ಗೆಯೂ ಚರ್ಚೆಗಳು ನಡೆದವು.
ಪರೀಕ್ಷಾ ಅಕ್ರಮಗಳಿಗೆ ಎಐ ಬ್ರೇಕ್
ರಾಜ್ಯ ಸರ್ಕಾರವು ತನ್ನ "ಸರ್ಕಾರಕ್ಕೆ ಮೊದಲ ಆದ್ಯತೆ" ನೀತಿಯನ್ನು ಪುನರುಚ್ಚರಿಸಿದ್ದು, ಸಾರ್ವಭೌಮ ಸರ್ಕಾರಿ ಡೇಟಾವನ್ನ ರಾಜ್ಯದೊಳಗಿನ ಸರ್ವರ್‌ಗಳಲ್ಲೇ ಸುರಕ್ಷಿತವಾಗಿ ಸಂಗ್ರಹಿಸುವ ಬಗ್ಗೆ ಒತ್ತು ನೀಡಿತು. ಇ-ಆಡಳಿತ, ಗೃಹ ಇಲಾಖೆ ಹಾಗೂ ಇತರ ಸರ್ಕಾರಿ ಸಂಸ್ಥೆಗಳಲ್ಲಿ ಎಐ ಅನ್ವಯಿಕೆಗಳನ್ನ ಗುರುತಿಸಲು ಇಲಾಖಾವಾರು ಕಾರ್ಯಪಡೆಗಳನ್ನು ರಚಿಸಲು ನಿರ್ಧರಿಸಲಾಗಿದೆ. ವಿಶೇಷವಾಗಿ ಸರ್ಕಾರಿ ವ್ಯವಸ್ಥೆಗಳಲ್ಲಿ ನಡೆಯುವ ವಂಚನೆಗಳನ್ನು ತಡೆಯಲು ಹಾಗೂ ವಿವಿಧ ಶಿಕ್ಷಣ ಮತ್ತು ಸರ್ಕಾರಿ ಸಂಸ್ಥೆಗಳು ನಡೆಸುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಲ್ಲಿ ಭದ್ರತೆ, ಗೌಪ್ಯತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಎಐ ತಂತ್ರಜ್ಞಾನವನ್ನ ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಮುಖ್ಯಮಂತ್ರಿಗಳು ಆಂಥ್ರೋಪಿಕ್‌ನ ತಾಂತ್ರಿಕ ಸಲಹೆಯನ್ನ ಕೋರಿದರು.
ಡೀಪ್-ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಎಐ ಬೆಂಬಲ
ರಾಜ್ಯದ 20,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ, ವಿಶೇಷವಾಗಿ ಡೀಪ್-ಟೆಕ್ ಕ್ಷೇತ್ರದಲ್ಲಿರುವ ನವೋದ್ಯಮಗಳಿಗೆ ಆಂಥ್ರೋಪಿಕ್‌ನಿಂದ ತಾಂತ್ರಿಕ ಬೆಂಬಲ ವಿಸ್ತರಿಸುವ ಬಗ್ಗೆ ಪರಿಶೀಲಿಸಲಾಯಿತು. ತೆರಿಗೆ ಸಂಗ್ರಹಣೆ ಮತ್ತು ಸಾರ್ವಜನಿಕ ಸೇವಾ ವಿತರಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಎಐ ಅನ್ವಯಿಕೆಗಳನ್ನು ಪ್ರಾಯೋಗಿಕ ಯೋಜನೆಗಳಾಗಿ (Pilot Projects) ಜಾರಿಗೊಳಿಸಲು ತೀರ್ಮಾನಿಸಲಾಯಿತು. ಇದಲ್ಲದೆ, ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ವೈಜ್ಞಾನಿಕ ಸಂಶೋಧನೆ, ಆರೋಗ್ಯ ರಕ್ಷಣೆ ಮತ್ತು ಲೈಫ್ ಸೈನ್ಸಸ್ ಕ್ಷೇತ್ರಗಳಲ್ಲಿ ಎಐ ಬಳಕೆಯ ಕುರಿತು ಚರ್ಚಿಸಲಾಯಿತು.
ಈ ಮಹತ್ವದ ಸಭೆಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳಾದ ಡಾ. ಮಂಜುಳಾ ಎನ್., ಮುನೀಶ್ ಮೌದ್ಗಿಲ್, ಸಿಎಂ ಹಣಕಾಸು ಸಲಹೆಗಾರ ಎಲ್.ಕೆ. ಅತೀಕ್ ಹಾಗೂ ಆಂಥ್ರೋಪಿಕ್ ಸಂಸ್ಥೆಯ ಅಂತಾರಾಷ್ಟ್ರೀಯ ನೀತಿ ವಿಭಾಗದ ಮುಖ್ಯಸ್ಥ ಮೈಕೆಲ್ ಸೆಲ್ಲಿಟೋ, ಭಾರತದ ವ್ಯವಸ್ಥಾಪಕ ನಿರ್ದೇಶಕಿ ಐರಿನಾ ಘೋಷ್ ಸೇರಿದಂತೆ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.


Click it and Unblock the Notifications
