ಪಠ್ಯ ಪುಸ್ತಕ ಪರಿಷ್ಕರಣೆಗೆ 37 ಮಂದಿ ಸದಸ್ಯರ ಸಮಿತಿ ರಚನೆ
ಬೆಂಗಳೂರು, ಸೆಪ್ಟೆಂಬರ್ 26: ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಮಾಡಬೇಕಾದ ಬದಲಾವಣೆಗಳ ಕುರಿತು ಶಿಕ್ಷಣ ಇಲಾಖೆಗೆ ಸಲಹೆ ನೀಡಲು 37 ಜನ ಸದಸ್ಯರನ್ನು ಒಳಗೊಂಡ ಪಠ್ಯಪರಿಷ್ಕರಣೆ ಸಮಿತಿಯನ್ನು ಕರ್ನಾಟಕ ಸರ್ಕಾರ ರಚನೆ ಮಾಡಿದೆ.
ಮುಂಬರುವ 2024-25ರ ಶೈಕ್ಷಣಿಕ ವರ್ಷದಿಂದ ಅನುಷ್ಟಾನಗೊಳಿಸಲು ಸಾಧ್ಯವಾಗುವಂತೆ ಸಮಿತಿಗೆ ವರದಿ ಸಲ್ಲಿಸಲು ಸರ್ಕಾರ ಮೂರು ತಿಂಗಳ ಕಾಲಾವಕಾಶವನ್ನು ನೀಡಿದೆ.

ಇತಿಹಾಸ ನಿವೃತ್ತ ಪ್ರಾಧ್ಯಾಪಕ ಡಾ. ಮಂಜುನಾಥ್ ಹೆಗಡೆ ಅವರನ್ನು ಮುಖ್ಯ ಸಂಯೋಜಕರನ್ನಾಗಿ ಪಠ್ಯಪರಿಷ್ಕರಣಾ ಸಮಿತಿಗೆ ಸರ್ಕಾರ ನೇಮಿಸಿದೆ. ಇದರೊಂದಿಗೆ ಸರ್ಕಾರವು ಕರ್ನಾಟಕದ ವಿವಿಧ ವಿಶ್ವವಿದ್ಯಾನಿಲಯಗಳ ಆರಯ ಹಿರಿಯ ಶಿಕ್ಷಣ ತಜ್ಞರ ಅಧ್ಯಕ್ಷತೆಯಲ್ಲಿ ಉಪ ಸಮಿತಿಗಳನ್ನು ರಚನೆ ಮಾಡಿದೆ.
ಸಮಿತಿಯು ಪರಿಷ್ಕರಣೆ ಮಾಡಬೇಕಾದ ವಿಷಯಗಳು:
1. 1 ರಿಂದ 10 ನೇ ತರಗತಿಯವರೆಗೆ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕ
2. ದ್ವಿತೀಯ ಭಾಷೆ ಕನ್ನಡ ಪಠ್ಯಪುಸ್ತಕ 1 ರಿಂದ 10 ರವರೆಗೆ
3. 9 ಮತ್ತು 10 ನೇ ತರಗತಿಗಳ ತೃತೀಯ ಭಾಷೆಯ ಕನ್ನಡ ಪಠ್ಯಪುಸ್ತಕ
4. 6 ರಿಂದ 10 ನೇ ತರಗತಿಗಳಿಗೆ ಸಮಾಜ ವಿಜ್ಞಾನ ಪಠ್ಯಪುಸ್ತಕದ ಪಠ್ಯಕ್ರಮ
5. 6 ರಿಂದ 9 ನೇ ತರಗತಿಗಳ ಸಮಾಜ ವಿಜ್ಞಾನ ಪಠ್ಯಪುಸ್ತಕ.
ಮೇಲಿನ ವಿಷಯಗಳ ಪಠ್ಯಕ್ರಮವನ್ನು ಪರಿಷ್ಕರಣೆ ಮಾಡಲು ಸರ್ಕಾರ ಈಗ ನೇಮಿಸಿರುವ ಸಮಿತಿಗೆ ಮೂರು ತಿಂಗಳ ಕಾಲಾವಕಾಶವನ್ನು ನೀಡಿದೆ. ಇದು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಬಲಪಂಥೀಯ ವಿಚಾರವಾದಿ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷನ್ನಾಗಿ ನೇಮಿಸಿದ್ದಕ್ಕಾಗಿ ತೀವ್ರ ಟೀಕೆಗೆ ಒಳಗಾಗಿತ್ತು. ಸಮಾಜಿ ವಿಜ್ಞಾನ ವಿಷಯಗಳಲ್ಲಿ ಶೈಕ್ಷಣಿಕ ವಿಷಯಗಳ ಬದಲು ಬಲಪಂಥಿಯ ವಿಚಾರಗಳನ್ನು ತುರುಕಿತ್ತು ಎಂದು ಆರೋಪಿಸಲಾಗಿತ್ತು.
ಪಠ್ಯಪುಸ್ತಕಗಳಲ್ಲಿ ಕೇಸರೀಕರಣ ಮಾಡಲಾಗುತ್ತಿದೆ. ಸಮಾಜ ವಿಜ್ಞಾನ ವಿಷಯಗಳಲ್ಲಿ ಆರ್‌ಎಸ್ಎಸ್ ಸಂಸ್ಥಾಪಕ ಕೆಬಿ ಹೆಡಗೇವಾರ್, ವಿಡಿ ಸಾವರ್ಕರ್ ಹಾಗೂ ವಿವಾದಿತ ಲೇಖಕ ಚಕ್ರವರ್ತಿ ಸೂಲಿಬೆಲೆ ಅವರ ಅಧ್ಯಾಯಗಳನ್ನು ಸೇರಿಸಲಾಗಿತ್ತು. ಬಳಿಕ ಕಾಂಗ್ರೆಸ್ ಸರ್ಕಾರ ಈ ವರ್ಷ ಸಮಾಜ ವಿಜ್ಞಾನ ಪುಸ್ತಕಗಳಲ್ಲಿ 18 ಬದಲಾವಣೆಗಳನ್ನು ಮಾಡಿತ್ತು.
ಅಲ್ಲದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೇರಿಸಲಾಗಿದ್ದ ಹೆಡಗೇವಾರ್ ಮತ್ತು ಇತರರ ಅಧ್ಯಾಯಗಳನ್ನು ಕಾಂಗ್ರೆಸ್ ಸರ್ಕಾರ ತೆಗೆದುಹಾಕಿತ್ತು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದಾಗ ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದಾಗಿ ಘೋಷಣೆ ಮಾಡಿತ್ತು.












Click it and Unblock the Notifications