Government Employee: ಸರ್ಕಾರಿ ನೌಕರರ ಹಬ್ಬದ ಮುಂಗಡ ಹಣ ಏರಿಕೆ
ಬೆಂಗಳೂರು, ಜನವರಿ 11: ಕರ್ನಾಟಕದ ಸರ್ಕಾರಿ ನೌಕರರಿಗೆ ಹಬ್ಬಕ್ಕೆ ಮುಂಗಡ ಹಣ ದೊರಕುತ್ತದೆ. ಅವುಗಳನ್ನು ಏರಿಕೆ ಮಾಡಬೇಕು ಎಂಬ ಬೇಡಿಕೆ ಇದೆ. 2025ರಲ್ಲಿ ನೌಕರರು ಸರ್ಕಾರದ ಮುಂದೆ ಇಡುವ ಬೇಡಿಕೆಗಳಲ್ಲಿ ಇದು ಸಹ ಸೇರಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯಲ್ಲಿಯೂ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಶನಿವಾರ ದಾವಣಗೆರೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಡೆಯಿತು. ಸಭೆಯಲ್ಲಿ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿ, ಈ ಕೆಳಕಂಡ ನಿರ್ಣಯಗಳಿಗೆ ಬೆಂಬಲ ಸೂಚಿಸಲಾಗಿದೆ.

ಯಾವ ಯಾವ ನಿರ್ಣಯಗಳು
* NPS ರದ್ದುಪಡಿಸಿ OPS ಮರುಸ್ಥಾಪನೆಗೆ ಮೊದಲ ಆದ್ಯತೆ ಮೇರೆಗೆ ಯಾವುದೇ ರೀತಿಯ ಹೋರಾಟಕ್ಕೆ ಬೆಂಬಲ ನೀಡುವುದು.
* ನಗದು ರಹಿತ ಚಿಕಿತ್ಸೆ ಆದಷ್ಟು ಬೇಗನೆ ಜಾರಿಗೆ ತರಲು ಒತ್ತಾಯ.
* 2026ಕ್ಕೆ ಕೇಂದ್ರ ಮಾದರಿ ವೇತನಕ್ಕೆ ಹೋರಾಟ ರೂಪಿಸುವುದು.
* ಪ್ರಾಥಮಿಕ ಶಾಲಾ ಶಿಕ್ಷಕರ (PST) C&R ತಿದ್ದುಪಡಿ ಹೋರಾಟಕ್ಕೆ ಬೆಂಬಲಿಸುವುದು.
* ಬಾಕಿ ಉಳಿದಿರುವ ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಲುಗಳಿಗೆ ಶೀಘ್ರವಾಗಿ ಹಣ ಬಿಡುಗಡೆ ಮಾಡಿಸಲು ಕ್ರಮ.
* ಹಬ್ಬದ ಮುಂಗಡ ಹಣ 25,000 ರಿಂದ 50,000 ರೂ.ಗಳಿಗೆ ಹೆಚ್ಚಿಸಲು ಕ್ರಮ.
* ನಿವೃತ್ತಿ ಸಮಯದ ಗಳಿಕೆ ರಜೆಗಳನ್ನು 300 ರಿಂದ 340ಕ್ಕೆ ಹೆಚ್ಚಿಸಲು ಕ್ರಮ.
* ಮರಣ ಉಪಲಬ್ಧ ಹಣವನ್ನು 15,000 ಗಳಿಂದ 25,000 ರೂ.ಗಳಿಗೆ ಹೆಚ್ಚಿಸುವುದು.
* ಕೇಂದ್ರ ಸಂಘದದಿಂದ ಪ್ರತಿ ಜಿಲ್ಲಾ ಶಾಖೆಯು ತಾಲೂಕ ಶಾಖೆಯ ಎಲ್ಲಾ ನೌಕರಿಗೆ ಕ್ಯಾಲೆಂಡರ್ ವಿತರಿಸುವ ಕುರಿತು ನಿರ್ಧಾರ
ಇವುಗಳು ಮಾತ್ರವಲ್ಲ ಕೇಂದ್ರ ಸಂಘಕ್ಕೆ ಮತ್ತು ಜಿಲ್ಲಾ ಸಂಘಕ್ಕೆ ವಂತಿಗೆ ರೂಪದಲ್ಲಿ ಸಲ್ಲಿಸುವ ಹಣವನ್ನು ಕಡಿತಗೊಳಿಸಿ ತಾಲೂಕ (200, 150+25+25) ಮಟ್ಟದಲ್ಲಿ ಉಳಿಸಿಕೊಳ್ಳುವ ವಿಷಯಕ್ಕೆ ವಿನಂತಿಸಿಕೊಳ್ಳಲಾಗಿದೆ.
ಇನ್ನು ಹಲವಾರು ವಿಷಯಗಳ ಕುರಿತು ಚರ್ಚಿಸಿ ಮುಂಬರುವ ದಿನಗಳಲ್ಲಿ ಸರ್ಕಾರಿ ನೌಕರ ಸಂಘ ನೌಕರರ ಪರವಾಗಿ ಸದಾ ಕಾರ್ಯನಿರ್ವಹಿಸುತ್ತಿದೆ ಎಂಬ ಮಾತನ್ನು ರಾಜ್ಯಾಧ್ಯಕ್ಷರಾದ ಸಿ. ಎಸ್. ಷಡಕ್ಷರಿ ಭರವಸೆಯಾಗಿ ನೀಡಿದ್ದಾರೆ.
ಶುಕ್ರವಾರ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಇವುಗಳಲ್ಲಿ NPS ರದ್ಧತಿ ಪ್ರಮುಖ ಭರವಸೆಯಾಗಿತ್ತು. ಸಂಘದ ಹೋರಾಟದ ಮೇರೆಗೆ ಈಗಾಗಲೇ ಒಪಿಎಸ್ ಅನುಷ್ಠಾನಗೊಂಡಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಸರ್ಕಾರದ ಮೇಲೆ ಒತ್ತಡವನ್ನು ತಂದು ಹಳೆ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಿ ಗುರಿ ತಲುಪುವವರೆಗೆ ನಿರ್ಣಾಯಕ ಹೋರಾಟ ನಡೆಸಲಾಗುತ್ತದೆ ಎಂದು ಭರವಸೆ ಕೊಡಲಾಗಿತ್ತು.
ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯ ಮೂಲಕ ಕುಟುಂಬದ ಎಲ್ಲಾ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಯ ಸರ್ಕಾರಿ ಆದೇಶವನ್ನು ಹೊರಡಿಸಿದ್ದು, ಶೀಘ್ರದಲ್ಲಿ ಈ ಯೋಜನೆಯನ್ನು ರಾಜ್ಯ ಸರ್ಕಾರಿ ನೌಕರರು ಹಾಗೂ ಕುಟುಂಬದ ಸದಸ್ಯರಿಗೆ ಸರ್ಕಾರ ಲೋಕಾರ್ಪಣೆ ಮಾಡಲಿದೆ ಎಂದು ಭರವಸೆ ನೀಡಲಾಗಿತ್ತು.












Click it and Unblock the Notifications