ಪಟಾಕಿ ಗೋದಾಮುಗಳ ಮಾಲೀಕರಿಗೆ ಕರ್ನಾಟಕ ಸರ್ಕಾರದಿಂದ ಶಾಕ್!
ಬೆಂಗಳೂರು: ರಾಜಧಾನಿ ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲೂಕಿನ ಅತ್ತಿಬೆಲೆ ಪಟಾಕಿ ಗೋಡಾನ್‌ನಲ್ಲಿ ಸಂಭವಿಸಿದ ದುರಂತ ದೀಪಾವಳಿಗೆ ಮೊದಲು ವಾರ್ನಿಂಗ್ ಕೊಟ್ಟಂತಿದೆ. ಹಾಗೇ ರಾಜಧಾನಿ ಜನರಿಗೂ ಈ ಘಟನೆ ಎಚ್ಚರಿಕೆ ಕರೆಗಂಟೆಯಾಗಿದೆ. ಹೀಗಾಗಿ ಈ ಕುರಿತು ಸೂಕ್ತ ಕ್ರಮಕ್ಕೂ ಕರ್ನಾಟಕ ಸರ್ಕಾರ ಮುಂದಾಗಿದೆ. ಈಗಾಗಲೇ ಮೈಸೂರಲ್ಲಿ ಸಿಎಂ ಈ ಬಗ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದು ಕಡೆ ಪಟಾಕಿ ಗೋದಾಮು ಮಾಲೀಕರಿಗೆ ಕರ್ನಾಟಕ ಸರ್ಕಾರ ಶಾಕ್ ನೀಡಿದೆ.
ಹೌದು, ರಾಜ್ಯದಾದ್ಯಂತ ಇರುವ ಪಟಾಕಿ ಗೋದಾಮುಗಳ ಸರ್ವೆ ನಡೆಸಿ. ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ರು. ಇಂದು ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಇನ್ನು ಮುಂದೆ ಯಾವುದೇ ಅವಘಡ ಆಗದಂತೆ ಎಚ್ಚರವಹಿಸುತ್ತೇವೆ. ರಾಜ್ಯದಲ್ಲಿ ಇರುವ ಪಟಾಕಿಯ ಗೋದಾಮುಗಳ ಪರಿಶೀಲನೆ ನಡೆಯಲಿದೆ. ಈ ಬಗ್ಗೆ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳಿಗೆ ನೋಟೀಸ್ ನೀಡಿ ಸುರಕ್ಷತೆ ಪರಿಶೀಲನೆ ಮಾಡಲು ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

5 ಲಕ್ಷ ರೂಪಾಯಿ ಪರಿಹಾರ ಘೋಷಣೆ
ತಮಿಳುನಾಡಿನ ಕಾರ್ಮಿಕರು ದುರಂತದಲ್ಲಿ ಸಾವನ್ನಪ್ಪಿದ್ದಾರೆ, ಯುವಕರ ಸಾವು ದುಃಖಕರ ಸಂಗತಿ. ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದೇವೆ. ಇನ್ನು ತಮಿಳುನಾಡು 3 ಲಕ್ಷ ಮೊತ್ತದ ಚೆಕ್ ಈಗಾಗಲೇ ವಿತರಣೆ ಮಾಡಿದೆ. ಈ ದುರಂತಕ್ಕೆ ಕಾರಣ ಏನು ಎಂಬ ಬಗ್ಗೆ ಶೀಘ್ರ ತನಿಖೆ ನಡೆಸಲಾಗುವುದು ಎಂದು ಡಿಸಿಎಂ ಈ ವೇಳೆ ತಿಳಿಸಿದರು. ಈ ಮೂಲಕ ಪಟಾಕಿ ಗೋದಾಮುಗಳ ಮಾಲೀಕರಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ.
ಗೋಡೆ ಹೊಡೆದು ಹಾಕಲು ಸೂಚನೆ
ಒಳಗೆ ಹೋಗಲು ಆಗದ ಕಾರಣ, ಕಟ್ಟಡದ ಹಿಂದಿನ ಗೋಡೆಯನ್ನ ಒಡೆದು ಹಾಕಲು ಸೂಚನೆ ನೀಡಿದ್ದೆ. ಇನ್ನು ಮುಂದೆ ಅಯಾಮಕರ ಸಾವು ಸಂಭವಿಸದಂತೆ ಮುನ್ನೆಚರಿಕೆ ವಹಿಸುತ್ತೇವೆ. ಸಾವಿನ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ, ಯುವಕರ ಸಾವು ನೋವಿನ ಸಂಗತಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಈ ದುರಂತದ ದೇಶಾದ್ಯಂತ ಸದ್ದು ಮಾಡಿದ್ದು, ಡಿಸಿಎಂ ಕೂಡ ಈ ಕುರಿತು ಸುಕ್ತ ಕ್ರಮದ ಭರವಸೆ ನೀಡಿದ್ದಾರೆ.

ಬೊಮ್ಮಾಯಿ ಹೇಳಿಕೆಯಂತೆ ನಡೆಯುತ್ತಿದ್ದೇವೆ
ಕ್ಷೇತ್ರಗಳಿಗೆ ಅನುದಾನದ ವಿಚಾರದಲ್ಲಿ ಕಾಂಗ್ರೆಸ್ ತಾರತಮ್ಯ ಮಾಡುತ್ತಿದ್ದು, ಬಿಜೆಪಿ ಈ ರೀತಿ ಮಾಡಿರಲಿಲ್ಲ ಎನ್ನುವ ಮಾಜಿ ಸಿಎಂ ಬೊಮ್ಮಾಯಿ ಆರೋಪಕ್ಕೂ ಡಿಸಿಎಂ ಉತ್ತರಿಸಿದ್ದಾರೆ. ಬೊಮ್ಮಾಯಿ ಅವರು ವಿಧಾನ ಪರಿಷತ್ತಿನಲ್ಲಿ ಏನು ಹೇಳಿಕೆ, ಉತ್ತರ ನೀಡಿದ್ದರೋ ಅದನ್ನೇ ನಾವು ಪಾಲನೆ ಮಾಡುತ್ತಿದ್ದೇವೆ ಎಂದು ಡಿಸಿಎಂ ತಿರುಗೇಟು ನೀಡಿದ್ದಾರೆ.
ಸೋಮವಾರ ಬ್ರಾಂಡ್ ಬೆಂಗಳೂರು ಮೀಟ್
ಬ್ರಾಂಡ್ ಬೆಂಗಳೂರು ವಿಚಾರದಲ್ಲಿ 70,000 ಸಲಹೆ ಬಂದಿದ್ದು, ಅವುಗಳನ್ನೆಲ್ಲಾ ಒಂದು ಕಡೆ ಕ್ರೂಡಿಕರಿಸಿ ವಿಂಗಡಿಸುವ ಕೆಲಸ ಮಾಡಲಾಗ್ತಿದೆ. ಇದಕ್ಕಾಗಿಯೇ 7 ತಂಡಗಳನ್ನು ಮಾಡಿದ್ದು, ಆ ತಂಡಗಳು ಉತ್ತಮ ಸಲಹೆ ಆಯ್ಕೆ ಮಾಡುತ್ತದೆ. Voice of the citizens, should be voice of the karnataka ಮಾತಿನಂತೆ ಜನಸಾಮಾನ್ಯರ ಮಾತಿಗೆ ಮನ್ನಣೆ ನೀಡೋಕೆ ರಾಜ್ಯ ಸರ್ಕಾರ ಮುಂದಾಗಿದೆ. ಸೋಮವಾರ ಬೆಳಗ್ಗೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಭೆ ಸೇರಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ ಡಿಸಿಎಂ.
14 ಜನರ ಜೀವ ತೆಗೆದ ಪಟಾಕಿ
ಅಂದಹಾಗೆ ರಾಜಧಾನಿ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ, ಅತ್ತಿಬೆಲೆಯ ಪಟಾಕಿ ಗೋಡಾನ್‌ನಲ್ಲಿ ಲಾರಿಯಿಂದ ಪಟಾಕಿ ಇಳಿಸುವಾಗ ನಿನ್ನೆ ಬೆಂಕಿ ಕಾಣಿಸಿತ್ತು. ಬೆಂಕಿ ದಿಢೀರ್ ಆವರಿಸಿದ ಪರಿಣಾಮ 14 ಜನರು ಮೃತಪಟಿದ್ದಾರೆ. ಈ ವೇಳೆ ಗೋಡಾನ್‌ನಲ್ಲಿ 20 ಜನ ಕೆಲಸ ಮಾಡುತ್ತಿದ್ದರು. ಹೀಗೆ ರಾಜಧಾನಿ ಬೆಂಗಳೂರು ಹೊರವಲಯ, ಕರ್ನಾಟಕ & ತಮಿಳುನಾಡು ಗಡಿಭಾಗದಲ್ಲಿ ಸಂಭವಿಸಿದ ಪಟಾಕಿ ದುರಂತ ದೊಡ್ಡ ಸದ್ದು ಮಾಡಿದೆ. ಈ ನಡುವೆ ಕರ್ನಾಟಕ ಸರ್ಕಾರ ಪಟಾಕಿ ದುರಂತವನ್ನ ಗಂಭೀರವಾಗಿ ಪರಿಗಣಿಸಿದ್ದು, ಕ್ರಮಕ್ಕೆ ಮುಂದಾಗಿದೆ.












Click it and Unblock the Notifications