ಮುಸ್ಲಿಮರಿಗೆ ಸರ್ಕಾರಿ ಟೆಂಡರ್‌ಗಳಲ್ಲಿ 4% ಮೀಸಲಾತಿ ತರಲು ಮುಂದಾದ ಸಿದ್ದರಾಮಯ್ಯ ಸರ್ಕಾರ
ಈಗಾಗಲೇ ವಕ್ಫ್ ಬೋರ್ಡ್ ವಿವಾದ, ಮುಡಾ ಪ್ರಕರಣ, ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪಗಳು ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಉಂಟುಮಾಡಿವೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು, ಗುತ್ತಿಗೆ ನೀಡುವಲ್ಲಿ ಕೂಡ ಮುಸ್ಲಿಮರಿಗೆ ಮೀಸಲಾತಿ ಕೊಡುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿಯಾಗಿದೆ.
ಸಿವಿಲ್ ಕಾಮಗಾರಿಗಳ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ 4 ಪ್ರತಿಶತ ಮೀಸಲಾತಿ ಕೊಡಲು ಚಿಂತಿಸಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಸದ್ಯ ಕರ್ನಾಟಕದಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ 43 ಪ್ರತಿಶತ ಮೀಸಲಾತಿ ನೀಡಲಾಗುತ್ತಿದೆ. ಎಸ್‌ಸಿ/ಎಸ್‌ಟಿ ಗುತ್ತಿಗೆದಾರರಿಗೆ 24% ರಷ್ಟು ಮೀಸಲಾತಿ ಇದ್ದರೆ, ಪ್ರವರ್ಗ-1 ಕ್ಕೆ 4 ಪ್ರತಿಶತ ಮೀಸಲಾತಿ ಇದೆ. 2ಎ ಪ್ರವರ್ಗಕ್ಕೆ 15% ಮೀಸಲಾತಿ ಇದೆ.

ಸದ್ಯ ಪ್ರಸ್ತಾವನೆಯನ್ನು ಮಾತ್ರ ಸಲ್ಲಿಸಿದ್ದು ಈ ಬಗ್ಗೆ ಇನ್ನೂ ಸರ್ಕಾರ ನಿರ್ಧಾರ ಮಾಡಬೇಕಾಗಿದೆ. ಪ್ರವರ್ಗ - 2ಬಿ ಅಡಿಯಲ್ಲಿ ಮುಸ್ಲಿಮರಿಗೆ 4 ಪ್ರತಿಶತ ಮೀಸಲಾತಿಯನ್ನು ನೀಡಲು ಯೋಚಿಸಲಾಗಿದೆ ಎನ್ನಲಾಗಿದ್ದು, ಇದರಿಂದ ಗುತ್ತಿಗೆಯಲ್ಲಿ ಮೀಸಲಾಯಿ 47 ಪ್ರತಿಶತಕ್ಕೆ ಏರಿಕೆಯಾಗಲಿದೆ.
ಸರ್ಕಾರದ ವಿರುದ್ಧ ಆಕ್ರೋಶ
ಗುತ್ತಿಗೆದಾರರಿಗೆ ಮೀಸಲಾತಿಯನ್ನು ವಿಸ್ತರಿಸುವ ಸರ್ಕಾರದ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಮುಖ್ಯವಾಗಿ ಒಕ್ಕಲಿಗ ಸಮುದಾಯ ಮತ್ತು ಲಿಂಗಾಯತ ಸಮುದಾಯದಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ ಎಂದು ವರದಿಯಾಗಿದೆ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಈ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿದೆ ಎಂದು ಡಿಎಚ್ ವರದಿ ಮಾಡಿದೆ.
ಈ ಬಗ್ಗೆ ಬಿಜೆಪಿ ನಾಯಕ ಅಮಿತ್ ಮಾಳವೀಯ ಪ್ರತಿಕ್ರಿಯೆ ನೀಡಿದ್ದು, ಮುಸ್ಲಿಮರಿಗೆ ಮೀಸಲಾತಿ ನೀಡಲು ಎಸ್‌ಸಿ, ಎಸ್‌ಟಿ ಅಥವಾ ಒಬಿಸಿ ಯಾರ ಕೋಟಾವನ್ನು ಕಡಿತ ಮಾಡಲಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ತೆಲಂಗಾಣದಲ್ಲೂ ಮುಸ್ಲಿಮರಿಗೆ 4% ಮೀಸಲಾತಿ ನೀಡಲಾಗಿದೆ, ಇದು ಸಂವಿಧಾನ ವಿರೋಧಿ ಎಂದು ಹೇಳಿದ್ದಾರೆ.
ಯದುವೀರ್ ಒಡೆಯರ್ ವಿರೋಧ
ಸರ್ಕಾರದ ಈ ಪ್ರಸ್ತಾವನೆಗೆ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ಮೂಲಕ ಸಾರ್ವಜನಿಕರ ನಂಬಿಕೆ ಮತ್ತು ಏಕತೆಯನ್ನು ಕುಗ್ಗಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಕರ್ನಾಟಕ ಸರ್ಕಾರದ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ 4% ಕೋಟಾವನ್ನು ಪರಿಚಯಿಸುವ ಪ್ರಸ್ತಾಪ ನನಗೆ ಆಘಾತ ಉಂಟುಮಾಡಿದೆ. . ನಮ್ಮ ಆಡಳಿತವು ನಿಲ್ಲಬೇಕಾದ ಸಮಾನತೆ ಮತ್ತು ಅರ್ಹತೆಯ ತಳಹದಿಯನ್ನೇ ಹಾಳುಮಾಡಿ, ಸಮಾಜವನ್ನು ಧಾರ್ಮಿಕ ನೆಲೆಯಲ್ಲಿ ವಿಭಜಿಸುವತ್ತ ಸಾಗುತ್ತಿರುವುದು ಒಂದು ಅಪಾಯಕಾರಿ ಹೆಜ್ಜೆಯಾಗಿದೆ. ರ್ಕಾರಿ ಗುತ್ತಿಗೆಗಳನ್ನು ಅರ್ಹತೆ, ಸಾಮರ್ಥ್ಯ ಮತ್ತು ಬದ್ಧತೆಯ ಆಧಾರದ ಮೇಲೆ ನೀಡಬೇಕೆ ಹೊರತು ಧಾರ್ಮಿಕ ಸಂಬಂಧಗಳ ಮೇಲೆ ಅಲ್ಲ." ಎಂದು ಹೇಳಿದ್ದಾರೆ.
ಮತ-ಬ್ಯಾಂಕ್ ರಾಜಕೀಯಕ್ಕಿಂತ ಅರ್ಹತೆ ಮತ್ತು ಪಾರದರ್ಶಕತೆಗೆ ಆದ್ಯತೆ ನೀಡುವ ನಾಯಕತ್ವಕ್ಕೆ ಕರ್ನಾಟಕ ಸರ್ಕಾರ ಒತ್ತು ನೀಡಬೇಕು. ಈ ಧಾರ್ಮಿಕ ಸಂಘರ್ಷದ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications