ತುಮಕೂರಿನಲ್ಲಿ ಟೊಯೋಟಾ ಘಟಕ ನಿರ್ಮಾಣಕ್ಕೆ ಒಪ್ಪಿಗೆ
ಬೆಂಗಳೂರು, ಸೆಪ್ಟೆಂಬರ್, 15 : ಕರ್ನಾಟಕದಲ್ಲಿ 588 ಕೋಟಿ ಹೂಡಿಕೆ ಮಾಡುವ ಎರಡು ಯೋಜನೆಗಳಿಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ತುಮಕೂರು ಮತ್ತು ಬಳ್ಳಾರಿಯಲ್ಲಿ ಈ ಯೋಜನೆಗಳು ಜಾರಿಗೆ ಬರಲಿವೆ.
ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಎರಡು ಯೋಜನೆಗಳಿಗೆ ಒಪ್ಪಿಗೆ ಸಿಕ್ಕಿದೆ. ಟೊಯೋಟಾ ಮತ್ತು ಈಕೋ ಮೈಸ್ಟರ್ ಬೀಡ್ಸ್ ಕಂಪನಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲಿವೆ. [ಬಿಡದಿಯಲ್ಲಿ ಬಾಷ್ ಅತ್ಯಾಧುನಿಕ ಉತ್ಪಾದನಾ ಘಟಕ]

ತುಮಕೂರು : ತುಮಕೂರಿನ ವಸಂತನರಸಾಪುರದಲ್ಲಿರುವ ಕೈಗಾರಿಕಾ ಪ್ರದೇಶಲ್ಲಿ ಟೊಯೋಟಾ ಘಟಕವನ್ನು ನಿರ್ಮಾಣ ಮಾಡಲಿದೆ. ಸುಮಾರು 410 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, 800 ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ. [ಕರ್ನಾಟಕದಲ್ಲಿ ಯಾವ ಸಂಸ್ಥೆ ಎಲ್ಲೆಲ್ಲಿ, ಎಷ್ಟು ಹೂಡಿಕೆ?]
ಈಕೋ ಮೈಸ್ಟರ್ ಬೀಡ್ಸ್ ಇಂಡಿಯಾ ಸಂಸ್ಥೆ ಬಳ್ಳಾರಿಯಲ್ಲಿ 148 ಕೋಟಿ ವೆಚ್ಚದಲ್ಲಿ ಘಟಕವನ್ನು ನಿರ್ಮಾಣ ಮಾಡಲಿದೆ. ಈ ಯೋಜನೆಗೂ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದ ಸುಮಾರು 132 ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ.
ಬೆಳಗಾವಿಯಲ್ಲಿ 334 ಕೋಟಿ ಹೂಡಿಕೆ : ಕೆಲವು ದಿನಗಳ ಹಿಂದೆ ಏಕಸ್ ಏರೋಸ್ಪೇಸ್ ಕಂಪೆನಿ ಬೆಳಗಾವಿಯಲ್ಲಿ 334 ಕೋಟಿ ರೂ.ಗಳ ಹೂಡಿಕೆ ಮಾಡಲು ಒಪ್ಪಿಗೆ ನೀಡಿತ್ತು. ವಿಶೇಷ ಆರ್ಥಿಕ ವಲಯ ಸ್ಥಾಪನೆ ಮಾಡಲಿದ್ದು, ಸುಮಾರು 1000 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಏಷ್ಯನ್ ಪೇಯಿಂಟ್ಸ್ ಹೂಡಿಕೆ : ಮೈಸೂರು ಜಿಲ್ಲೆಯ ನಂಜನಗೂಡು ಸಮೀಪ 2,300 ಕೋಟಿ ರೂ. ವೆಚ್ಚದಲ್ಲಿ ಘಟಕ ಸ್ಥಾಪನೆ ಮಾಡಲು ಏಷ್ಯನ್ ಪೇಯಿಂಟ್ಸ್ ಲಿಮಿಟೆಡ್ ಕೆಲವು ದಿನಗಳ ಹಿಂದೆ ಒಪ್ಪಿಗೆ ನೀಡಿದೆ. ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಘಟಕ ಸ್ಥಾಪನೆಯಾಗಲಿದೆ.
ವೊಲ್ವೋ ಘಟಕ ವಿಸ್ತರಣೆ : ವೊಲ್ವೋ ಕಾರ್ಪೊರೇಷನ್ ಅಧ್ಯಕ್ಷ ಕಾಕನ್ ಅಗ್ನೇವಾಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ತಿಂಗಳ ಹಿಂದೆ ಭೇಟಿ ಮಾಡಿ ಹೊಸಕೋಟೆಯ ವೊಲ್ವೋ ಘಟಕ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಿದ್ದರು. ವೊಲ್ವೋ ಘಟಕವನ್ನು ವಿಸ್ತರಣೆ ಮಾಡಲಿದ್ದು, ಇದರಿಂದ ಸುಮಾರು 2000 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದ್ದರು.












Click it and Unblock the Notifications