ಕಾನೂನು ಬಾಹಿರ ಸರ್ಕಾರ ಕರ್ನಾಟಕದಲ್ಲಿದೆ : ಬಸವರಾಜ ಬೊಮ್ಮಾಯಿ
ಬೆಂಗಳೂರು, ಜುಲೈ 19 : ವಿಶ್ವಾದಮತದ ನಿರ್ಣಯದ ಮೇಲೆ ಕರ್ನಾಟಕ ವಿಧಾನಸಭೆಯಲ್ಲಿ ಎರಡನೇ ದಿನವೂ ಚರ್ಚೆ ಮುಂದುವರೆದಿದೆ. ಶುಕ್ರವಾರ ಮಧ್ಯಾಹ್ನ 1.30ರೊಳಗೆ ಪ್ರಕ್ರಿಯೆ ಮುಗಿಸುವಂತೆ ರಾಜ್ಯಪಾಲರು ನೀಡಿದ್ದ ಗಡುವು ಮೀರಿ ಹೋಗಿದೆ.
ರಾಜ್ಯಪಾಲರು ನೀಡಿದ ನಿರ್ದೇಶನ ಪಾಲನೆ ಮಾಡದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯಪಾಲರ ಮುಂದಿನ ನಡೆ ಏನು? ಎಂಬುದು ಸದ್ಯಕ್ಕೆ ಕುತೂಹಲಕ್ಕೆ ಕಾರಣವಾಗಿದೆ.
ಮಾಜಿ ಸಚಿವ, ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. "ಇವವರಿಗೆ ಸಂಖ್ಯಾಬಲವಿಲ್ಲ. ಕಾನೂನು ಬಾಹಿರ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ, " ಎಂದು ಅವರು ಆರೋಪ ಮಾಡಿದರು.

ಶುಕ್ರವಾರ ಮಧ್ಯಾಹ್ನ ವಿಧಾನಸೌಧದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್-ಜೆಡಿಎಸ್ ಸದನವನ್ನು ದುರುಪಯೋಗ ಮಾಡಿಕೊಂಡಿವೆ. ರಾಜ್ಯಪಾಲರ ಆದೇಶ ಪಾಲನೆ ಮಾಡದೆ ಸಂವಿಧಾನ ವಿರೋಧಿ ನಿಲುವು ತಳೆದಿದ್ದಾರೆ," ಎಂದು ದೂರಿದರು.
"ಅಧಿವೇಶನ ಇರಲಿ ಬಿಡಲಿ ಬಹುಮತ ಸಾಬೀತು ಮಾಡುವಂತೆ ಕೇಳುವ ಅಧಿಕಾರ ರಾಜ್ಯಪಾಲರಿಗೆ ಇದೆ. ರಾಜ್ಯಪಾಲರ ಆದೇಶದಂತೆ ನಾವು ಹಿಂದೆ ನಡೆದುಕೊಂಡಿದ್ದೇವೆ. ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯವು ಹಕ್ಕಿಲ್ಲ," ಎಂದು ಹೇಳಿದರು.
"ರಾಜ್ಯಪಾಲರ ನಿರ್ದೇಶನವನ್ನು ಪಾಲಿಸದ, ಬಹುಮತವಿಲ್ಲದ ಸರ್ಕಾರ ಮುಂದುವರೆಯಬಾರದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಬೇಕು," ಎಂದು ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.












Click it and Unblock the Notifications