Gruha Jyoti Scheme: ಗೃಹ ಜ್ಯೋತಿ ಯೋಜನೆಯಡಿ ದೇವಾಲಯಗಳಿಗೆ ಉಚಿತ ವಿದ್ಯುತ್- ರಾಜ್ಯ ಸರ್ಕಾರದ ಮಹತ್ವದ ಭರವಸೆ
ಬೆಂಗಳೂರು, ಅಕ್ಟೋಬರ್ 26: ಪ್ರತಿ ಮನೆಗೆ 200 ಯೂನಿಟ್‌ಗಳ ವರೆಗೆ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆ ದೇವಾಲಯಗಳಿಗೂ ವಿಸ್ತರಿಸಲಿದೆ. ಗೃಹ ಜ್ಯೋತಿ ಯೋಜನೆ ಅಡಿ ದೇವಾಲಯಗಳಿಗೆ ಉಚಿತ ವಿದ್ಯುತ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆಯು ಈ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

'ನಾವು ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದೆ ಅನುಮೋದನೆಗಾಗಿ ಶೀಘ್ರದಲ್ಲೇ ಸಲ್ಲಿಸುತ್ತೇವೆ' ಎಂದು ಅವರು ಹೇಳಿದ್ದಾರೆ. ಕರ್ನಾಟಕದಲ್ಲಿರುವ 'ಸಿ' ವರ್ಗದ ದೇವಸ್ಥಾನಗಳಿಗೆ ಈ ಯೋಜನೆ ಅನ್ವಯವಾಗಲಿದೆ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ರಾಜ್ಯದಲ್ಲಿನ ದೇವಾಲಯಗಳನ್ನು ಅವು ಉತ್ಪಾದಿಸುವ ವಾರ್ಷಿಕ ಆದಾಯದ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ದತ್ತಿ ಇಲಾಖೆಯ ಅಡಿಯಲ್ಲಿ 34,563 ದೇವಾಲಯಗಳಿವೆ. ಇವುಗಳಲ್ಲಿ, ಸುಮಾರು 99 ಪ್ರತಿಶತ ( 34,223 ದೇವಾಲಯಗಳು ) ವರ್ಗ 'ಸಿ' ಅಡಿಯಲ್ಲಿ ಬರುತ್ತವೆ.
201 ಪ್ರವರ್ಗ 'ಎ' ದೇವಸ್ಥಾನಗಳಿದ್ದು, ಇವುಗಳ ವಾರ್ಷಿಕ ಆದಾಯ 25 ಲಕ್ಷ ರೂ.ಗಿಂತ ಹೆಚ್ಚಿದೆ. 139 ಕೆಟಗರಿಯ 'ಬಿ' ದೇವಸ್ಥಾನಗಳು 5 ಲಕ್ಷದಿಂದ 25 ಲಕ್ಷ ರೂಪಾಯಿಗಳ ವರೆಗೆ ಆದಾಯ ಗಳಿಸುತ್ತವೆ. ಉಳಿದ ದೇವಸ್ಥಾನಗಳಲ್ಲಿ 5 ಲಕ್ಷಕ್ಕಿಂತ ಕಡಿಮೆ ಆದಾಯವಿದೆ.
'ಸಿ' ವರ್ಗದ ದೇವಸ್ಥಾನಗಳಿಗೆ ಉಚಿತ ವಿದ್ಯುತ್ ನೀಡುವ ಪ್ರಸ್ತಾವನೆಯು ಹೆಚ್ಚು ಉಪಯುಕ್ತವಾಗಿದೆ. ಇದು ಸಾಕಷ್ಟು ಆದಾಯವನ್ನು ಗಳಿಸದ ದೇವಸ್ಥಾನಗಳಲ್ಲಿ ಮೂಲ ಸೌಕರ್ಯಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
20 ರಷ್ಟು ಪ್ರವರ್ಗ 'ಎ' ದೇವಸ್ಥಾನದ ಆದಾಯವನ್ನು 'ಸಿ' ವರ್ಗದ ದೇವಸ್ಥಾನಗಳೊಂದಿಗೆ ಹಂಚಿಕೊಳ್ಳುವ ಪ್ರಸ್ತಾಪವಿತ್ತು. ಆದರೆ, ಅದು ಈ ವರೆಗೂ ಕೈಗೂಡಿಲ್ಲ. ಗೃಹ ಜ್ಯೋತಿ ಯೋಜನೆಯು ರಾಜ್ಯದ ವಿವಿಧ ಭಾಗಗಳಲ್ಲಿರುವ ಸಣ್ಣ ದೇವಾಲಯಗಳಿಗೆ ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.
ಗೃಹ ಜ್ಯೋತಿ ಯೋಜನೆಯು ಕಾಂಗ್ರೆಸ್‌ನ ಐದು ಭರವಸೆಗಳಲ್ಲಿ ಒಂದಾಗಿದೆ. ಇದನ್ನು ಕರ್ನಾಟಕದಲ್ಲಿ ಆಗಸ್ಟ್ 5 ರಂದು ಪ್ರಾರಂಭಿಸಲಾಯಿತು. ಇದು ರಾಜ್ಯದ ಸುಮಾರು ಎರಡು ಕೋಟಿ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಸರ್ಕಾರ ತಿಳಿಸಿದೆ.












Click it and Unblock the Notifications