ಕಾಂಗ್ರೆಸ್-ಜೆಡಿಎಸ್ ನಡುವೆ ಮ್ಯಾಚ್ ಫಿಕ್ಸಿಂಗ್ ನಡೆದಿದೆ : ಸಿ.ಟಿ.ರವಿ
ಬೆಂಗಳೂರು, ಜುಲೈ 18 : "ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ವಿಶ್ವಾಸ ಕಳೆದುಕೊಳ್ಳುವ ಆತಂಕವಿದೆ. ಆದ್ದರಿಂದ, ಕಲಾಪವನ್ನು ಎಳೆದಾಡುವ ಪ್ರಯತ್ನ ನಡೆದಿದೆ. ಇದು ಮ್ಯಾಚ್ ಫಿಕ್ಸಿಂಗ್‌ನಂತೆ ಕಾಣುತ್ತಿದೆ," ಎಂದು ಬಿಜೆಪಿ ಶಾಸಕ ಸಿ. ಟಿ. ರವಿ ಆರೋಪ ಮಾಡಿದರು.
ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಹುಮತವನ್ನು ಕಳೆದುಕೊಂಡಿದೆ. ಸದನದಲ್ಲಿ ಅವರ ಸದಸ್ಯರ ಸಂಖ್ಯೆ 98 ಮಾತ್ರ," ಎಂದು ಹೇಳಿದರು.
"ವಿಶ್ವಾಸಮತವನ್ನು ಮುಂದೂಡುವ ಪ್ರಯತ್ನ ನಡೆದಿದೆ. ಕಳೆದ 15 ದಿನದಿಂದ ಅವರು ಸರ್ಕಸ್ ಮಾಡುತ್ತಿದ್ದಾರೆ. ಪಾಯಿಂಟ್ ಆಫ್ ಆರ್ಡರ್ ಅಡಿ ಚರ್ಚೆಗೆ ಹೆಚ್ಚು ಅವಕಾಶ ನೀಡಲಾಗಿದೆ. ಇಂತಹ ಚರ್ಚೆಯನ್ನು ನಾನು ನೋಡಿಯೇ ಇಲ್ಲ," ಎಂದರು.

"ಸರ್ಕಾರಕ್ಕೆ ಬಹುಮತವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ರಾಜ್ಯಪಾಲರು, ಸುಪ್ರೀಂಕೋರ್ಟ್ ಕಲಾಪವನ್ನು ನೋಡುತ್ತಿದ್ದಾರೆ. ನಾವು ಕೂಡ ಎಲ್ಲವನ್ನು ನೋಡಿ ಮುಂದಿನ ತೀರ್ಮಾನವನ್ನು ಕೈಗೊಳ್ಳುತ್ತೇವೆ," ಎಂದು ತಿಳಿಸಿದರು.
ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿಶ್ವಾಸಮತದ ಮೇಲೆ ನಿರ್ಣಯ ಮಂಡನೆ ಮಾಡಿ ಕೆಲವು ಹೊತ್ತು ಮಾತನಾಡಿದರು. ಬಳಿಕ ಸಿದ್ದರಾಮಯ್ಯ, ಕೃಷ್ಣ ಬೈರೇಗೌಡ ಸೇರಿದಂತೆ ಹಲವು ಶಾಸಕರು ಮಾತನಾಡುತ್ತಿದ್ದು, ಚರ್ಚೆ ನಡೆಯುತ್ತದಲೇ ಇದೆ.
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶಾಸಕರ ರಾಜೀನಾಮೆ, ಪಕ್ಷಾಂತರ ನಿಷೇಧ ಕಾಯ್ದೆಯ ಮೂಲ ಆಶಯ, ಶಾಸಕಾಂಗ ಪಕ್ಷದ ನಾಯಕರಿಗೆ ತಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡಲು ಇರುವ ಅವಕಾಶ ಸೇರಿದಂತೆ ಹಲವು ವಿಚಾರ ಪ್ರಸ್ತಾಪಿಸಿದರು.
ಬಿಜೆಪಿ ಸದಸ್ಯರಾದ ಮಾಧುಸ್ವಾಮಿ, ಬಸವರಾಜ್ ಬೊಮ್ಮಾಯಿ, ಕೆ. ಜಿ. ಬೋಪಯ್ಯ ಮುಂತಾದ ಸದಸ್ಯರು ಕಾಂಗ್ರೆಸ್ ಸದಸ್ಯರ ಚರ್ಚೆಗೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದಾರೆ. ವಿಧಾನಸಭೆಯಲ್ಲಿ ವಿಶ್ವಾಸಮತದ ಮೇಲೆ ಚರ್ಚೆ ಸಾಗಿದೆ.












Click it and Unblock the Notifications