ಕುಮಾರಸ್ವಾಮಿ ಸಂಪುಟ ವಿಸ್ತರಣೆ ಬಗ್ಗೆ ಹೊಸ ಸುದ್ದಿಯೊಂದು ಹೊರಬಿತ್ತು!
ಬೆಂಗಳೂರು, ಆಗಸ್ಟ್ 23 : ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ಮೂರು ತಿಂಗಳು ಕಳೆದಿದೆ. ಆದರೆ, ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ಶಾಸಕರು ಸಂಪುಟ ವಿಸ್ತರಣೆಗಾಗಿ ಕಾದು ಕುಳಿತಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಸಂಪುಟ ವಿಸ್ತರಣೆ ಮಾಡಿದ್ದರು. ಕಾಂಗ್ರೆಸ್‌ನ 14, ಜೆಡಿಎಸ್‌ನ 9, ಬಿಎಸ್‌ಪಿ, ಕೆಪಿಜೆಪಿಯ ತಲಾ ಒಬ್ಬರು ಶಾಸಕರು ಕುಮಾರಸ್ವಾಮಿ ಸಂಪುಟ ಸೇರಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ 6, ಜೆಡಿಎಸ್‌ನಿಂದ ಒಬ್ಬರು ಶಾಸಕರು ಇನ್ನು ಸಂಪುಟ ಸೇರಬಹುದಾಗಿದೆ. ಆದರೆ, ಸಂಪುಟ ವಿಸ್ತರಣೆ ಪ್ರಕ್ರಿಯೆ ಪದೇ-ಪದೇ ಮುಂದೆ ಹೋಗುತ್ತಿದ್ದು, ಶಾಸಕರು ಅಸಮಾಧಾನಗೊಂಡಿದ್ದಾರೆ. ಲೋಕಸಭೆ ಚುನಾವಣೆಯೊಳಗೆ ಸಂಪುಟ ವಿಸ್ತರಣೆಯಾಗಲಿದೆಯೇ? ಕಾದು ನೋಡಬೇಕು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆಷಾಢ ಮಾಸ ಕಳೆದ ಬಳಿಕ ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡಿದ್ದರು. ಆದರೆ, ಈಗ ಪ್ರವಾಹ ಪರಿಸ್ಥಿತಿಯತ್ತ ಗಮನಹರಿಸಿ ಎಂದು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಸಂಪುಟ ವಿಸ್ತರಣೆಗೆ ನೊರೆಂಟು ವಿಘ್ನಗಳು ಎದುರಾಗುತ್ತಿವೆ...

ಬಜೆಟ್ ಅಧಿವೇಶನ, ಆಷಾಢ
ಕಾಂಗ್ರೆಸ್ ಶಾಸಕರು ಸಂಪುಟ ವಿಸ್ತರಣೆ ಮಾಡುವಂತೆ ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡಿದ ಬಳಿಕ ವಿಸ್ತರಣೆ ಮಾಡೋಣ ಎಂಬ ಭರವಸೆ ಸಿಕ್ಕಿತ್ತು.
ಆದರೆ, ಬಳಿಕ ಆಷಾಢ ಎದುರಾಯಿತು, ಸಂಪುಟ ವಿಸ್ತರಣೆ ಒಂದು ತಿಂಗಳ ಕಾಲ ಮುಂದಕ್ಕೆ ಹೋಯಿತು. ಇದರಿಂದಾಗಿ ಅತ್ತ ಸಚಿವ ಸ್ಥಾನವೂ ಇಲ್ಲದೇ, ಇತ್ತ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವೂ ಇಲ್ಲದೇ ಶಾಸಕರು ಅಸಮಾಧಾನಗೊಂಡಿದ್ದಾರೆ.

ವಿಸ್ತರಣೆಗೆ ಪ್ರವಾಹದ ಅಡ್ಡಿ
ಈಗ ಕೊಡಗು ಮತ್ತು ಕೇರಳದಲ್ಲಿ ಉಂಟಾಗಿರುವ ಪ್ರವಾಹದ ಕಾರಣದಿಂದಾಗಿ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಕೇರಳದಲ್ಲಿ ಉಂಟಾಗಿರುವ ಪ್ರವಾಹದಿಂದ ಸಂತ್ರಸ್ತರಾಗಿರುವ ಜನರ ರಕ್ಷಣಾ ಕಾರ್ಯದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು , 'ಮೊದಲು ಸಂತ್ರಸ್ತರ ಕಷ್ಟಸುಖವನ್ನು ಆಲಿಸಿ, ಆ ಮೇಲೆ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಮಾಡೋಣ' ಎಂದು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಆದ್ದರಿಂದ, ಸದ್ಯಕ್ಕೆ ವಿಸ್ತರಣೆ ನಡೆಯುವುದಿಲ್ಲ ಎಂಬುದು ಖಚಿತವಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ
ಆ.31ರಂದು 105 ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ಸೆ.3ರಂದು ಫಲಿತಾಂಶ ಪ್ರಕಟವಾಗಲಿದೆ. ಅವುಗಳು ಮುಗಿದ ಬಳಿಕ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಆಲೋಚನೆ ನಡೆಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.
ಕೊಡಗಿನಲ್ಲಿ ಜಲಪ್ರಳಯದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಕ್ಷಿಣ ಕನ್ನಡ, ಹಾಸನ, ಶಿವಮೊಗ್ಗ, ಉಡುಪಿಯಲ್ಲಿಯೂ ಭಾರಿ ಮಳೆಯಿಂದಾಗಿ ಹಾನಿಯಾಗಿದೆ. ಮೊದಲು ಜನರ ಕಷ್ಟ ಆಲಿಸೋಣ ಬಳಿಕ ಇತರ ವಿಚಾರಗಳತ್ತ ಗಮನ ಹರಿಸೋಣ ಎಂಬುದು ನಾಯಕರ ನಿಲುವು.

ನಾಯಕರ ಪ್ರವಾಸ
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ನಾಯಕರು ಪ್ರವಾಹ, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಆದ್ದರಿಂದ, ಸಚಿವ ಸ್ಥಾನದ ಆಕಾಂಕ್ಷಿಗಳ ಮನವಿಯನ್ನು ಯಾರೂ ಸ್ವೀಕಾರ ಮಾಡುತ್ತಿಲ್ಲ.
ಕೊಡಗು ಜಿಲ್ಲೆ ಮೊದಲಿನಿಂತೆ ಆಗಲು ಸುಮಾರು 6 ತಿಂಗಳ ಕಾಲಾವಕಾಶ ಬೇಕಾಗಿದೆ. ಆದ್ದರಿಂದ, ಸದ್ಯಕ್ಕೆ ಸಂಪುಟ ವಿಸ್ತರಣೆ ಆಗುವುದಿಲ್ಲ ಎಂಬುದು ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿ.

ಸಮನ್ವಯ ಸಮಿತಿ ಸಭೆ ಇಲ್ಲ
ಸಂಪುಟ ವಿಸ್ತರಣೆ ವಿಷಯ ಒಂದು ಕಡೆ ಇರಲಿ. ಸಮನ್ವಯ ಸಮತಿ ಸಭೆ ಕೂಡಾ ನಡೆಯುತ್ತಿಲ್ಲ. ಸಿದ್ದರಾಮಯ್ಯ ಅವರು ಸಭೆಗೆ ಎರಡು ದಿನಾಂಕ ನಿಗದಿ ಮಾಡಿದ್ದರು. ಆದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿಗಳು ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ.
ಸಮಿತಿಯ ಸದಸ್ಯರಾದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕೇರಳದಲ್ಲಿ ಸಂತ್ರಸ್ತ ಕಷ್ಟ ಆಲಿಸುತ್ತಿದ್ದಾರೆ. ಆದ್ದರಿಂದ, ಸಮನ್ವಯ ಸಮಿತಿ ಸಭೆಯನ್ನು ನಡೆಸಲು ದಿನಾಂಕ ನಿಗದಿಯಾಗಿಲ್ಲ.












Click it and Unblock the Notifications