Flood Relief: ಪ್ರತಿ ಹೆಕ್ಟೇರ್‌ಗೆ ಹೆಚ್ಚುವರಿ ₹8,500 ಪರಿಹಾರ ಘೋಷಣೆ: ಪ್ರಿಯಾಂಕ್ ಖರ್ಗೆ
ಭಾರೀ ಮಳೆ, ಪ್ರವಾಹ ಪರಿಸ್ಥಿತಿಯಿಂದ ಬೆಳೆನಾಶವಾಗಿರುವ ರೈತರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಧಾವಿಸಿದೆ. ಕಲ್ಯಾಣ ಕರ್ನಾಟಕ ಭಾಗದ ನೆರೆ ಹಾನಿ ಪ್ರದೇಶಗಳ ಸ್ಥಿತಿಗತಿಗಳನ್ನು ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ ಅವರು ಪರಿಹಾರ ಘೋಷಿಸುವುದಾಗಿ ಹೇಳಿದ್ದರು. ಇದೀಗ ಪ್ರತಿ ಹೆಕ್ಟೇರ್‌ಗೆ ವಿಭಾಗಾವಾರು ಹೆಚ್ಚುವರಿ ಪರಿಹಾರ ಘೋಷಿಸಿರುವುದಾಗಿ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರವಾಹ ಮತ್ತು ಅತಿವೃಷ್ಟಿ ಪ್ರದೇಶದ ರೈತರ ಸಂಕಷ್ಟವನ್ನು ಮನಗಂಡಿರುವ ನಮ್ಮ ಸರ್ಕಾರವು ಎನ್‌ಡಿಆರ್‌ಎಫ್ ಮಾರ್ಗಸೂಚಿ ದರದೊಂದಿಗೆ ಹೆಚ್ಚುವರಿ ಪರಿಹಾರವನ್ನೂ ಘೋಷಣೆ ಮಾಡಿದೆ ಎಂದು ಪ್ರಿಯಾಂಕ್ ಹೇಳಿದ್ದಾರೆ.
ನಮ್ಮ ರಾಜ್ಯ ಸರ್ಕಾರವು ಪ್ರವಾಹ ಸಂತ್ರಸ್ತರ ಬದುಕು ಕಟ್ಟುವ ಕೆಲಸ ಮಾಡುತ್ತಿದೆ. ಪ್ರವಾಹಕ್ಕೆ ಸಿಲುಕಿದ ಉತ್ತರ ಕರ್ನಾಟಕ ರೈತರ ಹೊಲಗಳು ಹೊಳೆಯಂತಾಗಿವೆ, ಜನರ ಬದುಕು ದುಸ್ಥರವಾಗಿದೆ. ಪ್ರವಾಹವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ನಮ್ಮ ಸರ್ಕಾರವು ಸಮಯೋಚಿತವಾಗಿ ಮತ್ತು ತುರ್ತಾಗಿ ಸಂತ್ರಸ್ತರ ನೆರವಿಗೆ ಧಾವಿಸಿದೆ. ಈಗಾಗಲೇ ಜನ ಜಾನುವಾರುಗಳ ಜೀವ ಹಾನಿಗೆ ಮತ್ತು ಮನೆಗಳು ಹಾಗೂ ಆಸ್ತಿಪಾಸ್ತಿಗಳ ಹಾನಿಗೆ ಪರಿಹಾರ ಒದಗಿಸಲಾಗಿದೆ ಎಂದಿದ್ದಾರೆ.

ಪ್ರತಿ ಹೆಕ್ಟೇರ್‌ಗೆ ಎಷ್ಟು ಪರಿಹಾರ?
ಮಳೆ ಆಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ₹8,500 ನಿಗದಿಪಡಿಸಲಾಗಿದೆ. ಇದರೊಂದಿಗೆ ಇನ್ನೂ 8,500 ರೂಪಾಯಿಗಳೊಂದಿಗೆ ಒಟ್ಟು 17,000 ರೂಪಾಯಿ ಪರಿಹಾರ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದು ವಿವರ ಹಂಚಿಕೊಂಡಿದ್ದಾರೆ. ನೀರಾವರಿ ಬೆಳೆಗಳ ಪ್ರತಿ ಹೆಕ್ಟೇರ್‌ಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ₹17,000 ಜೊತೆಗೆ ಇನ್ನೂ 8,500 ರೂಪಾಯಿಗಳೊಂದಿಗೆ ಒಟ್ಟು 25,500 ರೂಪಾಯಿಗಳ ಪರಿಹಾರ ನೀಡಲಾಗುವುದು ಎಂದಿದ್ದಾರೆ.
ಬಹು ವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ₹22,500 ಪರಿಹಾರ ನಿಗದಿಪಡಿಸಲಾಗಿದೆ, ಇದರೊಂದಿಗೆ ಇನ್ನೂ 8,500 ರೂಪಾಯಿಗಳೊಂದಿಗೆ ಒಟ್ಟು 31,500 ರೂಪಾಯಿಗಳ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಇದುವರೆಗೆ ರಾಜ್ಯದಲ್ಲಿ ಸುಮಾರು 9,60,578 ಹೆಕ್ಟೇರ್‌ಗಳಷ್ಟು ಬೆಳೆ ಹಾನಿಯಾಗಿದೆ. ಇದರಲ್ಲಿ 8,88,953 ಹೆಕ್ಟೇರ್‌ಗಳಷ್ಟು ಕೃಷಿ ಬೆಳೆಗಳು ಮತ್ತು 71,624 ಹೆಕ್ಟೇರ್‌ಗಳಷ್ಟು ತೋಟಗಾರಿಕಾ ಬೆಳೆಗಳು ನಷ್ಟವಾಗಿದೆ ಎಂದು ವಿವರಿಸಿದ್ದಾರೆ.
ಇನ್ನೂ ಸಹ ಮಳೆ ಮತ್ತು ನೆರೆಯ ಪರಿಸ್ಥಿತಿ ಮುಂದುವರೆದಿದ್ದು, ಹಾನಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಜಂಟಿ ಸಮೀಕ್ಷೆಯ ಪೂರ್ಣ ವರದಿ ಬರುತ್ತಿದ್ದಂತೆಯೇ ರೈತ ಸಮುದಾಯದಕ್ಕೆ ಪರಿಹಾರ ಒದಗಿಸಲಾಗುವುದು. ರೈತಾಪಿ ಸಮುದಾಯದೊಂದಿಗೆ ನಮ್ಮ ಸರ್ಕಾರವಿದೆ, ಅವರ ಬದುಕು ಕಟ್ಟಿಕೊಡಲು, ಅವರಲ್ಲಿ ವಿಶ್ವಾಸ ತುಂಬಲು ಸರ್ಕಾರ ಪ್ರಾಮಾಣಿಕ ಹೆಜ್ಜೆಗಳನ್ನು ಇಡುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.












Click it and Unblock the Notifications