ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕ್ರೈಮ್ ಸೀನ್ ಪರಿಶೀಲನಾಧಿಕಾರಿ ಹುದ್ದೆ ಸೃಷ್ಟಿ
ಬೆಂಗಳೂರು, ಜು. 12: ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಸೂಕ್ಷ್ಮಾತಿಸೂಕ್ಷ್ಮ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅಪರಾಧವನ್ನು ಪತ್ತೆ ಮಾಡಲು ದೇಶದಲ್ಲಿಯೇ ಮೊಟ್ಟ ಮೊದಲ ನುರಿತ ಹಾಗೂ ಪರಿಣಿತರ 'ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ' ಹುದ್ದೆಯನ್ನು ಸೃಷ್ಟಿ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜು. 23 ರಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ' scene of crime officer ಆದೇಶ ಪ್ರತಿಯನ್ನು ಕೊಡಲಿದ್ದಾರೆ. ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಅಪರಾಧ ಕೃತ್ಯಗಳ ತನಿಖೆಗೆ ಈ ರೀತಿ ಹೊಸ ಪೊಲೀಸ್ ಹುದ್ದೆಗಳನ್ನು ಸೃಷ್ಟಿ ಮಾಡಲಾಗಿದೆ.
ಯಾವುದಾದರೂ ಒಂದು ಅಪರಾಧ ಕೃತ್ಯ ನಡೆದ ತಕ್ಷಣ ಘಟನಾ ಸ್ಥಳಕ್ಕೆ ಹೋಗಿ ಇಲ್ಲಿರುವಂತಹ ಸಾಕ್ಷಾಧಾರಗಳನ್ನು ವೈಜ್ಞಾನಿಕವಾಗಿ, ಸುರಕ್ಷಿತವಾಗಿ ಸಂರಕ್ಷಣೆ ಮಾಡಲು ಈ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದುವರೆಗೆ ಈ ಕೆಲಸವನ್ನು ಸ್ಥಳೀಯ ಅಧಿಕಾರಿಗಳು ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಮೊದಲ ಹಂತದಲ್ಲಿ ಗಂಭೀರ ಸ್ವರೂಪದ ಅಪರಾಧಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ದಲ್ಲಿ ವಿಶೇಷ ತರಬೇತಿ ಪಡೆದ ಈ ತಂಡ ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಲಿದೆ. ಆ ಸ್ಥಳದಲ್ಲಿನ ಎಲ್ಲ ಸಾಕ್ಷ್ಯಾಧಾರಗಳನ್ನು ಸಂರಕ್ಷಣೆ ಮಾಡುವುದು, ಆನಂತರ ಸಾಕ್ಷಾಧಾರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡುವುದು, ತನಿಖಾಧಿಕಾರಿಗೆ ಆ ಸಾಕ್ಷ್ಯಾಧಾರಗಳನ್ನು ಒದಗಿಸುವುದು scene of crime officer ಕೆಲಸ.

ಇದರಿಂದ ಆಗುವ ಲಾಭ: ಅಪರಾಧಿಗಳನ್ನು ಅತ್ಯಂತ ಶ್ರೀಘ್ರದಲ್ಲಿ ಪತ್ತೆ ಮಾಡಲು ಮೂಲಭೂತವಾಗಿ ಬೇಕಾಗುವ ಎಲ್ಲ ಕೆಲಸ ಕಾರ್ಯಗಳನ್ನು ಈ ಅಧಿಕಾರಿಗಳು ಮಾಡುತ್ತಾರೆ. ಇದರಿಂದ ನೈಜ ಅಪರಾಧಿಗಳ ಪತ್ತೆ ಹಾಗೂ ಅವರಿಗೆ ಶಿಕ್ಷೆ ಕೊಡಿಸಲು ಅಗತ್ಯ ಇರುವ ವೈಜ್ಞಾನಿಕ ಸಾಕ್ಷ್ಯಾಧಾರಗಳು ಲಭ್ಯವಾಗುವಂತೆ ಮಾಡುವುದು ಈ ಹೊಸ ಹುದ್ದೆಗಳ ಸೃಜನೆಯ ಮೂಲ ಉದ್ದೇಶ. ಇದರಿಂಧ ಅಪರಾಧಿಗಳ ಪತ್ತೆ ಮತ್ತು ಅಪರಾಧ ನಿಯಂತ್ರಣ ಸಾಧ್ಯವಾಗಲಿದೆ. ವಿದೇಶಗಳಲ್ಲಿ ಇರುವ ಈ ವ್ಯವಸ್ಥೆಯನ್ನು ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರು ಪೊಲೀಸರು ಅಳವಡಿಸಿಕೊಳ್ಳಲಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪ್ರಥಮ ಹಂತದಲ್ಲಿ 206 ಜನ ನುರಿತ ಅಧಿಕಾರಿಗಳ ಹುದ್ದೆಗಳನ್ನು ಮಂಜೂರು ಮಾಡಿದ್ದು, ನಾಳೆ ಈ ಸಂಬಂಧ ಅಧಿಕೃತವಾಗಿ ಸರ್ಕಾರಿ ಆದೇಶವನ್ನು ಮುಖ್ಯಮಂತ್ರಿಗಳು ಗೃಹ ಇಲಾಖೆಗೆ ಕೊಡ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಪೊಲೀಸರ ಆರೋಗ್ಯ ಕಾಪಾಡುವ ಆರೋಗ್ಯ ಭಾಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ ಇರುವ ಕೈಪಿಡಿಯನ್ನು ಪೊಲೀಸ್ ಸಿಬ್ಬಂದಿಗೆ ನೀಡಲು ಮುಖ್ಯ ಮಂತ್ರಿಗಳು ಬಿಡುಗಡೆ ಮಾಡಲಿದ್ದಾರೆ. ಅದೇ ರೀತಿ ಪೊಲೀಸರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ವಿದ್ಯಾನಿಧಿ - 2 ಯೋಜನೆಗೆ ಸಿಎಂ ಚಾಲನೆ ಕೊಡುತ್ತಾರೆ. ಇದಷ್ಟೇ ಅಲ್ಲದೆ ಅಗ್ನಿಶಾಮಕ ದಳ, ಗೃಹರಕ್ಷಕ ದಳ ಹಾಗೂ ಇತರ ಪೊಲೀಸ್ ಸೇವಾ ಪದಕಗಳನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರದಾನ ಮಾಡಲಿದ್ದಾರೆ.












Click it and Unblock the Notifications