ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿಯೇ ಮುಳುವಾಗುತ್ತಾ, ಖಜಾನೆಯೇ ಖಾಲಿ ಅಂತಿದೆ ಆರ್ಥಿಕ ಇಲಾಖೆ!

ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಕರ್ನಾಟಕದ ಹಣಕಾಸು ಇಲಾಖೆಯು ಇತ್ತೀಚೆಗೆ ಸರ್ಕಾರದ ಹೊಸ ಬೃಹತ್ ಯೋಜನೆಗಳಿಗೆ ಆರ್ಥಿಕ ನೆರವು ನೀಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದೆ. ಬೆಂಗಳೂರಿನ ಬೃಹತ್‌ ಟನಲ್‌ ಯೋಜನೆಗಳಿಗೂ ಸ್ಥಳೀಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ಬಳಕೆ ಮಾಡದೆ ಸರ್ಕಾರವೇ ಭರಿಸುವ ಚರ್ಚೆಗಳು ನಡೆದಿದ್ದವು. ಇನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಾಲದ ಸುಳಿಯಲ್ಲಿ ಇದೆ. ಈ ನಡುವೆ ಕರ್ನಾಟಕ ಹಣಕಾಸು ಇಲಾಖೆಯು ಗಂಭೀರವಾದ ಎಚ್ಚರಿಕೆ ಕೊಟ್ಟಿದೆ.

ಈಚೆಗೆ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ (₹10,000 ಕೋಟಿ) ಸೇರಿದಂತೆ ಹಲವು ಹೊಸ ಯೋಜನೆಗಳ ಪ್ರಸ್ತಾವನೆಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಹಣಕಾಸು ಇಲಾಖೆಯು ಕರ್ನಾಟಕದ ಸದ್ಯದ ಆರ್ಥಿಕ ಸ್ಥಿತಿಗತಿಯನ್ನು ಉಲ್ಲೇಖಿಸಿ ಸರ್ಕಾರಕ್ಕೆ ಅಧಿಕೃತ ಟಿಪ್ಪಣಿ ರವಾನಿಸಿದೆ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ವಿರೋಧ ಪಕ್ಷಗಳು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

Karnataka Finance Department Warning Cash Crunch and Limited Borrowing Space Put New Projects Under Pressure

ಪಾಪರ್ ಸರ್ಕಾರದ ದಿವಾಳಿತನಕ್ಕೆ ಸ್ವತಃ ಆರ್ಥಿಕ ಇಲಾಖೆಯೇ ಹಿಡಿದ ಕನ್ನಡಿ ಎಂದು ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್ ಅವರು ಹೇಳಿದ್ದಾರೆ. ಹೊಸ ಯೋಜನೆಗಳಿಗೆ ಹಣವೂ ಇಲ್ಲ, ಹೊಸದಾಗಿ ಸಾಲ ಮಾಡಲು ಅರ್ಹತೆಯೂ ಇಲ್ಲ! "ಕರ್ನಾಟಕದ ಬೊಕ್ಕಸ ಸಮೃದ್ಧವಾಗಿದೆ" ಎಂದು ಪ್ರತಿದಿನ ಸುಳ್ಳು ಹೇಳುತ್ತಿದ್ದ ಈ ಗ್ಯಾರಂಟಿ ಸರ್ಕಾರದ ಬಣ್ಣ ಈಗ ಸ್ವತಃ ಆರ್ಥಿಕ ಇಲಾಖೆಯ ಟಿಪ್ಪಣಿಯಿಂದ ಬಯಲಾಗಿದೆ. ನೈಸರ್ಗಿಕ ಬರಗಾಲದ ಜೊತೆಗೆ, ಈ ಅಸಮರ್ಥ ಕಾಂಗ್ರೆಸ್ ಆಡಳಿತದಿಂದಾಗಿ ರಾಜ್ಯದಲ್ಲಿ ಈಗ ಭೀಕರ "ಆರ್ಥಿಕ ಬರ' ಸೃಷ್ಟಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ₹10,000 ಕೋಟಿ ವೆಚ್ಚದಲ್ಲಿ 15,000 ಕಿ.ಮೀ ಗ್ರಾಮೀಣ ರಸ್ತೆ ಅಭಿವೃದ್ಧಿಯ ಹೊಸ ಯೋಜನೆ ಘೋಷಿಸಲು ಹೊರಟರೆ, "ಹೊಸ ಯೋಜನೆಗಳಿಗೆ ಹಣವೂ ಇಲ್ಲ, ಹೊಸದಾಗಿ ಸಾಲ ಮಾಡಲು ಅರ್ಹತೆಯೂ ಇಲ್ಲ!' ಎಂದು ಆರ್ಥಿಕ ಇಲಾಖೆಯೇ ಮುಖಕ್ಕೆ ಹೊಡೆದಂತೆ ಸಲಹೆ ನೀಡಿದೆ. ಕರ್ನಾಟಕ ಸರ್ಕಾರದ ಆರ್ಥಿಕ ಅಧೋಗತಿಯ ಅಸಲಿ ಮುಖ ಇಲ್ಲಿದೆ.

ಬೊಕ್ಕಸ ಖಾಲಿ, ಸಾಲದ ಮಿತಿ ಅಂತ್ಯ: ರಾಜ್ಯ ಸರ್ಕಾರ ಈಗಾಗಲೇ ತನ್ನ ಸಾಲ ಪಡೆಯುವ ಗರಿಷ್ಠ ಮಿತಿಯನ್ನು ಮುಟ್ಟಿದ್ದು, 2026-27ನೇ ಸಾಲಿನಲ್ಲಿ ಹೊಸ ಯೋಜನೆಗಳಿಗೆ ಸಾಲ ಪಡೆಯಲು ಕಾನೂನಿನಲ್ಲಿ ಅವಕಾಶವೇ ಇಲ್ಲ.

ಬಾಕಿ ಬಿಲ್‌ಗಳ ಬೆಟ್ಟ: ಲೋಕೋಪಯೋಗಿ, ಜಲಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲೇ ಗುತ್ತಿಗೆದಾರರ ₹36,136 ಕೋಟಿ ಬಾಕಿ ಬಿಲ್ ಉಳಿಸಿಕೊಳ್ಳಲಾಗಿದೆ. ರೈತರಿಗೆ ವಂಚನೆ: ಕೃಷಿ ಪಂಪ್‌ಸೆಟ್‌ಗಳಿಗೆ ನೀಡಬೇಕಾದ ₹4,500 ಕೋಟಿ ಸಹಾಯಧನವೂ ಬಾಕಿ ಉಳಿದಿದೆ. ನೌಕರರಿಗೆ ಸಂಬಳಕ್ಕೂ ಪರದಾಟ: ಸಾರಿಗೆ, ನೀರಾವರಿ ಹಾಗೂ ವಿದ್ಯುತ್ ಕಂಪನಿಗಳ ನೌಕರರ ವೇತನ ಪಾವತಿಗೂ ಹಣವಿಲ್ಲದೆ ಪರದಾಡುವ ಸ್ಥಿತಿ ಬಂದೊದಗಿದೆ. ಒಂದೆಡೆ ರಾಜ್ಯದಲ್ಲಿ ಭೀಕರ ಬರಗಾಲದಿಂದ ರೈತರು ಗುಳೆ ಹೋಗುತ್ತಿದ್ದರೆ, ಇನ್ನೊಂದೆಡೆ ಸರ್ಕಾರದ ಪೊಳ್ಳು ಘೋಷಣೆಗಳಿಗೆ ಹಣವಿಲ್ಲದೆ ಆರ್ಥಿಕ ಇಲಾಖೆಯೇ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡುವಂತಾಗಿದೆ ಎಂದಿದ್ದಾರೆ.

ಸರ್ಕಾರದ ಈ ದಿವಾಳಿತನವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸರ್ಕಾರದ ದಿವಾಳಿತವನ್ನ ಅಂಕಿ-ಅಂಶ ಸಮೇತ ಬಟಾಬಯಲು ಮಾಡಿ ಸರ್ಕಾರದ ಮಾನ ಮರ್ಯಾದೆಯನ್ನು ಹರಾಜು ಹಾಕಿದ್ದೇವೆ. ಹಣಕಾಸಿನ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆಯ ನಿಯಮಗಳನ್ನೇ ಗಾಳಿಗೆ ತೂರಿ, ರಾಜ್ಯವನ್ನು ದಿವಾಳಿ ಮಾಡಿರುವ ಈ ನಾಲಾಯಕ್ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವ ನೈತಿಕತೆಯಿದೆ? ಮುಖ್ಯಮಂತ್ರಿಗಳೇ, ತಕ್ಷಣವೇ ರಾಜ್ಯದ ನಿಜವಾದ ಆರ್ಥಿಕ ಪರಿಸ್ಥಿತಿಯ ಕುರಿತು ಶ್ವೇತಪತ್ರ ಹೊರಡಿಸಿ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಅವರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+