ರಾಜ್ಯದಲ್ಲಿ ಮದ್ಯದಂಗಡಿ ಲೈಸೆನ್ಸ್ ಖರೀದಿಗೆ ನಿರಾಸಕ್ತಿ: ಬಾಕಿ ಉಳಿದ 451 ಲೈಸೆನ್ಸ್‌ಗಳ ಇ-ಹರಾಜಿಗೆ ಅಬಕಾರಿ ಇಲಾಖೆ ಮತ್ತೆ ಮುಂದು
ರಾಜ್ಯದಲ್ಲಿ ಹೊಸದಾಗಿ ಬಾರ್ ಅಥವಾ ವೈನ್‌ಶಾಪ್ ತೆರೆಯಲು ಕಾಯುತ್ತಿರುವವರಿಗೆ ರಾಜ್ಯ ಅಬಕಾರಿ ಇಲಾಖೆ ಮತ್ತೊಂದು ಅವಕಾಶ ನೀಡಲು ಮುಂದಾಗಿದೆ. ಕಳೆದ ಜುಲೈ ತಿಂಗಳಲ್ಲಿ ನಡೆದ ಮೊದಲ ಹಂತದ ಆನ್‌ಲೈನ್ ಹರಾಜಿನಲ್ಲಿ ಮಾರಾಟವಾಗದೆ ಬಾಕಿ ಉಳಿದಿರುವ 451 ಮುಟ್ಟುಗೋಲು ಲೈಸೆನ್ಸ್‌ಗಳನ್ನ ಎರಡನೇ ಬಾರಿಗೆ ಆನ್‌ಲೈನ್ ಮೂಲಕ ಹರಾಜು ಹಾಕಲು ಇಲಾಖೆಯು ಸಕಲ ಸಿದ್ಧತೆ ನಡೆಸಿದೆ.
ಈ ಮೂಲಕ ಬೊಕ್ಕಸಕ್ಕೆ ಆದಾಯ ತರುವ ನಿರೀಕ್ಷೆಯಲ್ಲಿದ್ದು, ಆಸಕ್ತರು ಈ ಅಬಕಾರಿ ಇಲಾಖೆ ಇ-ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಶೀಘ್ರದಲ್ಲೇ ಅವಕಾಶ ಕಲ್ಪಿಸಲಾಗುತ್ತಿದೆ.

ಜುಲೈನಲ್ಲಿ ನಡೆದಿದ್ದ ಮದ್ಯದಂಗಡಿ ಪರವಾನಗಿ ಹರಾಜು ಪ್ರಕ್ರಿಯೆ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜುಲೈ 24ರಿಂದ 31ರವರೆಗೆ ಒಟ್ಟು 579 ಬಾರ್ ಹಾಗೂ ವೈನ್‌ಶಾಪ್ ಲೈಸೆನ್ಸ್‌ಗಳನ್ನ ಹಂಚಿಕೆ ಮಾಡಲು ಅಬಕಾರಿ ಇಲಾಖೆ ಆನ್‌ಲೈನ್ ಮೂಲಕ ಇ-ಹರಾಜು ಪ್ರಕ್ರಿಯೆಯನ್ನ ನಡೆಸಿತ್ತು. ಇದರಲ್ಲಿ 483 ವೈನ್‌ಶಾಪ್ (ಸಿಎಲ್-2ಎ) ಹಾಗೂ 96 ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್-9ಎ) ಪರವಾನಗಿಗಳು ಸೇರಿದ್ದವು. ಆದರೆ, ಈ ಪೈಕಿ ಕೇವಲ 128 ಲೈಸೆನ್ಸ್‌ಗಳು ಮಾತ್ರ ಯಶಸ್ವಿಯಾಗಿ ಹರಾಜಾಗಿದ್ದವು. ಉಳಿದ ಬರೋಬ್ಬರಿ 451 ಲೈಸೆನ್ಸ್‌ಗಳನ್ನ ಖರೀದಿಸಲು ಬಿಡ್‌ದಾರರು ನಿರಾಸಕ್ತಿ ತೋರಿದ್ದರು.
ಈ ಮದ್ಯದಂಗಡಿ ಪರವಾನಗಿ ಮಾರಾಟದ ಮೂಲಕ ಬರೋಬ್ಬರಿ 700 ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಗುರಿಯನ್ನ ಇಲಾಖೆ ಹೊಂದಿತ್ತು. ಆದರೆ ಬಹುಪಾಲು ಪರವಾನಗಿಗಳು ಹರಾಜಾಗದ ಕಾರಣ ಇಲಾಖೆಗೆ ಭಾರಿ ನಿರಾಸೆಯಾಗಿತ್ತು.
ಹೀಗಾಗಿ, ಉಳಿದ ಲೈಸೆನ್ಸ್‌ಗಳನ್ನ ಮುಂದಿನ ಐದು ವರ್ಷಗಳ ಅವಧಿಗೆ ಹಂಚಿಕೆ ಮಾಡಲು ಮರು ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಈ ಪರವಾನಗಿಯ ಮೂಲ ಬೆಲೆಯು 1 ಕೋಟಿ ರೂಪಾಯಿಯಿಂದ 1.5 ಕೋಟಿ ರೂಪಾಯಿವರೆಗೆ ನಿಗದಿಯಾಗಿದ್ದು, ಆಯಾ ಪಾಲಿಕೆಗಳ ವ್ಯಾಪ್ತಿಗೆ ಅನುಗುಣವಾಗಿ ದರ ನಿರ್ಧಾರವಾಗಲಿದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಬಾರ್ ಲೈಸೆನ್ಸ್ ಲಭ್ಯ
ಇದೀಗ ಎರಡನೇ ಬಾರಿಗೆ ನಡೆಯಲಿರುವ ಹರಾಜಿನಲ್ಲಿ ಲಭ್ಯವಿರುವ 451 ಬಾರ್ ಲೈಸೆನ್ಸ್ ಗಳ ಪೈಕಿ ಅತಿ ಹೆಚ್ಚು ಎಂದರೆ ಬೆಂಗಳೂರಿನಲ್ಲಿ 182 ಲೈಸೆನ್ಸ್‌ಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30, ತುಮಕೂರು 24, ಧಾರವಾಡ 19, ಮಂಡ್ಯ, ಕೋಲಾರ, ಕಲಬುರಗಿ ಮತ್ತು ಶಿವಮೊಗ್ಗದಲ್ಲಿ ತಲಾ 15 ಲೈಸೆನ್ಸ್‌ಗಳು ಲಭ್ಯವಿವೆ.
ಅಂತೆಯೇ ಮೈಸೂರು ಗ್ರಾಮಾಂತರ, ಹಾವೇರಿ ಹಾಗೂ ಉತ್ತರ ಕನ್ನಡದಲ್ಲಿ ತಲಾ 14, ಹಾಸನ ಮತ್ತು ಮೈಸೂರು ನಗರದಲ್ಲಿ 13, ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗದಲ್ಲಿ ತಲಾ 12 ಪರವಾನಗಿಗಳು ಹರಾಜಿಗೆ ಸಿದ್ಧವಾಗಿವೆ. ಉಳಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಬೆರಳೆಣಿಕೆಯಷ್ಟು ಲೈಸೆನ್ಸ್‌ಗಳು ಹಂಚಿಕೆಗೆ ಬಾಕಿಯಿವೆ.
ಆಯುಕ್ತರ ಗೈರು ಹಾಗೂ ಅಬಕಾರಿ ಅಧಿಕಾರಿಗಳ ವರ್ಗಾವಣೆ ವಿಳಂಬ
ಒಂದೆಡೆ ಲೈಸೆನ್ಸ್ ಹಂಚಿಕೆ ಪ್ರಕ್ರಿಯೆ ಚುರುಕುಗೊಂಡಿದ್ದರೆ, ಮತ್ತೊಂದೆಡೆ ಅಬಕಾರಿ ಇಲಾಖೆಯಲ್ಲಿ ಆಡಳಿತಾತ್ಮಕ ಗೊಂದಲಗಳು ಮುಂದುವರಿದಿವೆ. ಅಬಕಾರಿ ಇಲಾಖೆ ಆಯುಕ್ತರಾಗಿದ್ದ ಆರ್. ವೆಂಕಟೇಶ್ ಕುಮಾರ್ ಅವರನ್ನ ವರ್ಗಾವಣೆ ಮಾಡಿ, ಆ ಜಾಗಕ್ಕೆ ಐಎಎಸ್ ಅಧಿಕಾರಿ ಡಾ. ಜಿ. ರವಿಶಂಕರ್ ಅವರನ್ನು ಆಗಸ್ಟ್ 23ರಂದೇ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ವರ್ಗಾವಣೆಯಾಗಿ ಎರಡು ವಾರ ಕಳೆದರೂ ನೂತನ ಆಯುಕ್ತರು ಇನ್ನೂ ಅಧಿಕಾರ ಸ್ವೀಕರಿಸಿಲ್ಲ.
ಇದರ ಜೊತೆಗೆ ಕೌನ್ಸೆಲಿಂಗ್ ಮೂಲಕ ಪಾರದರ್ಶಕವಾಗಿ ನಡೆಯಬೇಕಿದ್ದ ಅಬಕಾರಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯೂ ನನೆಗುದಿಗೆ ಬಿದ್ದಿದೆ. ಹೊಸದಾಗಿ ಸಿದ್ಧಪಡಿಸಿರುವ ವರ್ಗಾವಣೆ ಮಾರ್ಗಸೂಚಿಗಳಿಗೆ ಕಳೆದ 5 ತಿಂಗಳಿಂದ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಮೇ 14ರಂದೇ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ, ಇದುವರೆಗೆ ಅನುಮೋದನೆ ಸಿಕ್ಕಿಲ್ಲ.
ಕಳೆದ ವರ್ಷ 415 ಸಿಬ್ಬಂದಿಯನ್ನ ಸೇವಾವಧಿ ಹಿರಿತನದ ಆಧಾರದಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿತ್ತು. ಆದರೆ ಈ ಬಾರಿ ವಿಳಂಬವಾಗುತ್ತಿರುವುದರಿಂದ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ತೀವ್ರ ನಿರಾಸೆಗೊಂಡಿದ್ದಾರೆ.
ಇತ್ತೀಚೆಗೆ ಸಚಿವ ಶಿವಲಿಂಗೇಗೌಡ ಅವರನ್ನು ಭೇಟಿಯಾಗಿದ್ದ ಅಧಿಕಾರಿಗಳ ಸಂಘ, ಕೌನ್ಸೆಲಿಂಗ್ ಪ್ರಕ್ರಿಯೆ ನಿಲ್ಲಿಸದಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಾರೆಯಾಗಿ, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಪ್ರಮುಖ ಆದಾಯದ ಮೂಲವಾಗಿರುವ ಅಬಕಾರಿ ಇಲಾಖೆಯು ಈ ಬಾರಿಯ ಮರು ಇ-ಹರಾಜು ಪ್ರಕ್ರಿಯೆಯ ಮೂಲಕವಾದರೂ ತನ್ನ ನಿರೀಕ್ಷಿತ ಗುರಿ ತಲುಪುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.


Click it and Unblock the Notifications
