ಬಿಯರ್ ಪ್ರಿಯರಿಗೆ ಭಾರಿ ಗುಡ್‌ನ್ಯೂಸ್ ಕೊಟ್ಟ ಸರ್ಕಾರ
ಮೈಕೊರೆಯುವ ಚಳಿಗಾಲ ಶುರುವಾಗಿರುವ ಹೊತ್ತಲ್ಲೇ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆ ಸಿಹಿಸುದ್ದಿಯೊಂದನ್ನು ನೀಡಿದೆ. ಇನ್ನು ಈ ಬಾರಿ ಚಳಿ ಹೆಚ್ಚಾಗಿರುವ ಕಾರಣ ಚಳಿಗಾಲ ಪೂರ್ಣಗೊಳ್ಳುವರೆಗೆ ನೆಮ್ಮದಿಯಾಗಿ ಎಣ್ಣೆ ಕುಡಿಯಬಹುದು ಎಂಬ ಸಂದೇಶ ರವಾನಿಸಿದೆ. ಈ ಬಾರಿ ವಾಡಿಕೆಗಿಂತ ಚಳಿ ಹೆಚ್ಚಾಗಿದ್ದು, ಚಳಿಗಾಲ ಮುಗಿಯವವರೆಗೆ ಬಿಯರ್ ದರವನ್ನು ಪರಿಷ್ಕರಣೆ ಮಾಡುವುದಿಲ್ಲ ಎಂದು ಹೇಳಿದೆ.
ಮೂಲಗಳ ಪ್ರಕಾರ ಪ್ರತಿವರ್ಷವೂ ಬಿಯರ್ ಮಾರಾಟದಲ್ಲಿ ಕುಸಿತ ಕಾಣುತ್ತಿದ್ದು, ಈ ಪರಿಸ್ಥಿತಿಯಲ್ಲಿ ಬಿಯರ್ ದರ ಏರಿಸಿದ್ರೆ ಹೆಚ್ಚೇನು ಆದಾಯ ಬರುವುದಿಲ್ಲ. ಹಾಗಾಗಿ ನಷ್ಟದ ಕಾರಣದಿಂದ ಬಿಯರ್ ದರ ಏರಿಸದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಚಳಿಗಾಲದಲ್ಲಿ ಮದ್ಯಪ್ರಿಯರು ಹೆಚ್ಚಾಗಿ ಬಿಯರ್ ಸೇವನೆ ಮಾಡೋದಿಲ್ಲ. ಇದರಿಂದ ಬಿಯರ್ ಮಾರಾಟ ಕಡಿಮೆಯಾಗುವ ಆತಂಕ ಇರುವುದರಿಂದ ದರ ಏರಿಕೆ ಮಾಡುವ ವಿಚಾರವನ್ನು ಕೈಬಿಟ್ಟಿದೆ ಎನ್ನಲಾಗಿದೆ.

ಅಬಕಾರಿ ಇಲಾಖೆಗೆ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಟಾರ್ಗೆಟ್ ನೀಡಿದ್ದು, ಇದಕ್ಕಾಗಿ ಬಿಯರ್ ದರ ಹೆಚ್ಚಿಸಲು ಮೊದಲಿಗೆ ನಿರ್ಧರಿಸಲಾಗಿತ್ತು. ಈ ಸಂಬಂಧ ಅಬಕಾರಿ ಇಲಾಖೆ ಪ್ರಸ್ತಾವನೆಯೂ ಸಲ್ಲಿಸಿತ್ತು. ಆದರೆ ಚಳಿಗಾಲ ಆಗಿರುವುದರಿಂದ ಬಿಯರ್ ದರ ಏರಿಕೆಯಾದರೆ ಇಲಾಖೆಯ ಆದಾಯಕ್ಕೂ ಪೆಟ್ಟು ಬೀಳುವ ಸೂಚನೆ ಇರುವುದರಿಂದ ಜನವರಿ ತಿಂಗಳವರೆಗೆ ಬಿಯರ್ ದರ ಏರಿಸದಿರಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ವರ್ಷಾಂತ್ಯ ಮುಗಿಯುತ್ತಿದ್ದು, ಹೊಸ ವರ್ಷಾಚರಣೆಗೆ ದಿನಗಣನೆ ಶುರುವಾಗಿದೆ. ಇನ್ನು ಕ್ರಿಸ್‌ಮಸ್ ವೇಳೆಯೂ ರಾಜ್ಯದಲ್ಲಿ ಮದ್ಯ ಸೇವನೆ ಹೆಚ್ಚಾಗಿ ನಡೆಯುವುದರಿಂದ ಅಲ್ಲಿಯವರೆಗೆ ಬಿಯರ್ ಪ್ರಿಯರಿಗೆ ಯಾವುದೇ ದುಬಾರಿ ಟೆನ್ಷನ್ ಇರೋದಿಲ್ಲ. ಬೆಲೆ ಏರಿಕೆ ಆಗದ ಕಾರಣ ಎಂದಿನಂತೆ ಬಿಯರ್ ಕುಡಿಯಲು ಯಾವುದೇ ಅಡ್ಡಿ ಆತಂಕಗಳೂ ಇರೋದಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಜನವರಿವರೆಗೆ ನಿಶ್ಚಿಂತೆಯಾಗಿ ಬಿಯರ್ ಕುಡಿಯೋಣ ಗುರು ಎಂದು ಎಣ್ಣೆಪ್ರಿಯರು ನಿಟ್ಟುಸಿರು ಬಿಟ್ಟಿದ್ದಾರೆ.

ಹೊಸ ವರ್ಷದ ಪಾರ್ಟಿಗೂ ಇಲ್ಲ ಟೆನ್ಷನ್: ಪ್ರತಿ ಹೊಸ ವರ್ಷಾಚರಣೆ ವೇಳೆ ಪಾರ್ಟಿಗಳು ಎಗ್ಗಿಲ್ಲದೆ ನಡೆಯುತ್ತವೆ. ಎಲ್ಲಿ ನೋಡಿದರೂ ಪಾರ್ಟಿ ವಿಚಾರವೇ ಸದ್ದು ಮಾಡುತ್ತವೆ. ಹಾಗಾಗಿ ಈ ಬಾರಿ ಅಬಕಾರಿ ಇಲಾಖೆಯ ಈ ನಿರ್ಧಾರದಿಂದ ಬಿಯರ್ ಪ್ರಿಯರಿಗಂತೂ ಒಂದು ರೀತಿಯಲ್ಲಿ ಹಬ್ಬ ಎಂತಲೇ ಹೇಳಬಹುದು.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಈ ಜನವರಿವರಿಗೆ ರಾಜ್ಯದಲ್ಲಿ ಚಳಿ ಹೆಚ್ಚಾಗಿ ಇರುತ್ತೆ ಎನ್ನಲಾಗಿದೆ. ಈ ಅವಧಿಯಲ್ಲಿ ಬಿಯರ್ ಮಾರಾಟ ಕೂಡ ಸ್ವಲ್ಪ ಕುಸಿಯುವುದು ಸಾಮಾನ್ಯ. ಹೀಗಿರುವಾಗ ಬಿಯರ್ ದರ ಏರಿಸಿದರೆ ಇಲಾಖೆಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಈ ಕಾರಣಕ್ಕೆ ಜನವರಿವರಿಗೆ ಬಿಯರ್ ದರ ಪರಿಷ್ಕರಣೆ ಮಾಡುವುದು ಬೇಡ ಎಂದು ಅಬಕಾರಿ ಇಲಾಖೆ ನಿರ್ಧರಿಸಿದೆ. ಪ್ರತಿ ವರ್ಷವೂ ಚಳಿಗಾಲದಲ್ಲಿ ಬಿಯರ್‌ನಿಂದ ಬರುವ ಆದಾಯದಲ್ಲಿ ಶೇಕಡಾ 20ರಷ್ಟು ಕುಸಿಯುತ್ತದೆ ಎನ್ನಲಾಗಿದೆ. ಮಾರಾಟ ಪ್ರಮಾಣ ಇಳಿಮುಖ ಆಗುವುದರಿಂದ ಈ ಬಾರಿ ಇಲಾಖೆ ಮೊದಲೇ ಎಚ್ಚೆತ್ತುಕೊಂಡು ದರ ಪರಿಷ್ಕರಣೆಗೆ ಬ್ರೇಕ್ ಹಾಕಿದೆ ಎಂದು ಹೇಳಲಾಗಿದೆ.












Click it and Unblock the Notifications