ಹಾಸನಕ್ಕೆ 'ಕೈಮಾಬಾದ್' ಎಂದು ಹೆಸರಿಟ್ಟಿದ್ದ Tipu Sultan: ಚುನಾವಣೆ ಹೊತ್ತಲ್ಲಿ ಮತ್ತೊಂದು ವಿವಾದ ಸೃಷ್ಟಿಗೆ ಮುಂದಾದ CT Ravi
ಟಿಪ್ಪು ಸುಲ್ತಾನ್ ಸುತ್ತಲೂ ಎದ್ದಿರುವ ವಿವಾದಗಳಿಗೆ ಪಟ್ಟಿಗೆ ಮತ್ತೊಂದು ವಿವಾದವನ್ನು ಸೇರಿಸಲು ಬಿಜೆಪಿ ( BJP ) ಶಾಸಕ ಸಿಟಿ ರವಿ ( CT Ravi ) ಮುಂದಾಗಿದ್ದಾರೆ.
ಕುಂದಗೋಳ, ಮಾರ್ಚ್ 18: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇದೆ. ಈ ಸಂದರ್ಭದಲ್ಲಿ ರಾಜಕೀಯ ನಾಯಕರು ನೀಡುತ್ತಿರುವ ಹೇಳಿಕೆಗಳು ವಿವಾದವನ್ನು ಸೃಷ್ಟಿಸುತ್ತಿವೆ. ಟಿಪ್ಪು ಸುಲ್ತಾನ್ ಸುತ್ತಲೂ ಎದ್ದಿರುವ ವಿವಾದಗಳಿಗೆ ಪಟ್ಟಿಗೆ ಮತ್ತೊಂದು ವಿವಾದವನ್ನು ಸೇರಿಸಲು ಬಿಜೆಪಿ ( BJP ) ಶಾಸಕ ಸಿಟಿ ರವಿ ( CT Ravi ) ಮುಂದಾಗಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಹೇಳಿಕೆ ನೀಡಿರುವ ಸಿಟಿ ರವಿ, 'ಹಾಸನ ನಗರಕ್ಕೆ ಟಿಪ್ಪು ಸುಲ್ತಾನ ಕೈಮಾಬಾದ್ ಎಂದು ನಾಮಕರಣ ಮಾಡಿದ್ದ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ತಿಳಿಸಿದ್ದಾರೆ.

'ಟಿಪ್ಪು ಮತ್ತು ಆತನ ಸಿದ್ಧಾಂತ ಬದುಕಿದ್ದರೆ ಇಂದು ಹಾಸನ ಕೈಮಾಬಾದ್ ಆಗಿರುತ್ತಿತ್ತು. ಜೆಡಿಎಸ್ ಮುಖಂಡ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಸನ ನಗರವನ್ನು ಹಾಗೆ ಕರೆಯಲು ಬಯಸುತ್ತಾರಾ?' ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.
ಉರಿಗೌಡ ಮತ್ತು ನಂಜೇಗೌಡರು ಐತಿಹಾಸಿಕ ವ್ಯಕ್ತಿಗಳಾಗಿದ್ದು, ಟಿಪ್ಪು ಸುಲ್ತಾನ್ ಅವರನ್ನು ಕೊಂದಿದ್ದು ಸತ್ಯ ಎಂದೂ ಸಿಟಿ ರವಿ ಮತ್ತೊಮ್ಮೆ ಹೇಳಿದ್ದಾರೆ.
ಲಿಂಗಾಯತ ಸಮುದಾಯದ ಬಗ್ಗೆ ನಾನು ಮಾತನಾಡಿದ್ದೇನೆಂದು ವರದಿ ಮಾಡಲಾಗಿದೆ. ಈ ಆರೋಪಗಳ ಕುರಿತು ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳಿಗೆ ಯಾವುದೇ ಆಧಾರವಿಲ್ಲ. ಇದು ಕಾಂಗ್ರೆಸ್ 'ಸುಳ್ಳಿನ ಕಾರ್ಖಾನೆ' ಇಂದ ಹೊರಬಂದಿರುವ ಟೂಲ್‌ಕಿಟ್‌ನ ಭಾಗವಾಗಿದೆ ಎಂದು ರವಿ ತಿಳಿಸಿದ್ದಾರೆ.
ಲಿಂಗಾಯತರು ನನ್ನನ್ನು ತಮ್ಮ ಮಗನಂತೆ ನಡೆಸಿಕೊಂಡಿದ್ದಾರೆ. ಹಿಂದುತ್ವವನ್ನು ಹೊರತುಪಡಿಸಿ ನನಗೆ ಯಾವುದೇ ಜಾತಿ, ಪಂಗಡವಿಲ್ಲ. ಕಾಂಗ್ರೆಸ್ ನಾಯಕರು ಈ ಹಿಂದೆ ವೀರಶೈವ- ಲಿಂಗಾಯತರನ್ನು ವಿಭಜಿಸಲು ಪ್ರಯತ್ನಿಸಿದರು. ಅವರು ಈ ಸುಳ್ಳು ಸೃಷ್ಟಿಸುವ ಮೂಲಕ ಮತ್ತೊಂದು ತಪ್ಪು ಮಾಡುತ್ತಿದ್ದಾರೆ ಎಂದು ಸಿಟಿ ರವಿ ತಿಳಿಸಿದ್ದಾರೆ.

ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗಳನ್ನು 'ಸುಳ್ಳು ಕಾರ್ಡ್' ಎಂದು ಬಣ್ಣಿಸಿರುವ ರವಿ, ಕಾಂಗ್ರೆಸ್‌ನ ವಾರಂಟಿ ಅವಧಿ ಮುಗಿದಿದೆ. ಜನರಿಗೆ ಸುಳ್ಳು ಖಾತರಿ ಕಾರ್ಡ್‌ಗಳನ್ನು ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಅವರು ಹೇಳಿದ್ದಾರೆ.
ದೇಶ ಮೊದಲು ಎಂಬುದು ಬಿಜೆಪಿ ಪಕ್ಷದ ನೀತಿಯಾಗಿದೆ ಎಂದು ಸಿಟಿ ರವಿ ತಿಳಿಸಿದ್ದಾರೆ. 'ಬಿಜೆಪಿ ನಾಯಕತ್ವವು ಗೆಲುವಿನ ಆಧಾರದ ಮೇಲೆ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ' ಎಂದು ರವಿ ಹೇಳಿದ್ದಾರೆ.
ಮಾರ್ಚ್ 14 ರಂದು, ಮಾತನಾಡಿದ್ದ ಸಿಟಿ ರವಿ, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಮಗ ಪಕ್ಷದಲ್ಲಿ ಇನ್ನು ಮುಂದೆ ಪ್ರಬಲ ಶಕ್ತಿಗಳಾಗಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
'ಒಂದು ವಿಷಯ ನೆನಪಿಟ್ಟುಕೊಳ್ಳಿ. ಅಭ್ಯರ್ಥಿಗಳ ನಿರ್ಧಾರ ಯಾರ ಅಡುಗೆಮನೆಯಲ್ಲಿಯೂ ಆಗುವುದಿಲ್ಲ. ಯಾರೋ ಒಬ್ಬರ ಮಗ ಎಂಬ ಕಾರಣಕ್ಕೆ ಯಾರಿಗೂ ಟಿಕೆಟ್ ಸಿಗುವುದಿಲ್ಲ. ಆಕಾಂಕ್ಷಿಗಳ ಮನೆಯಲ್ಲಿ ಟಿಕೆಟ್ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ' ಎಂದು ರವಿ ತಿಳಿಸಿದ್ದರು.
ಯಡಿಯೂರಪ್ಪ ಅವರ ಕಿರಿಯ ಪುತ್ರ ಬಿವೈ ವಿಜಯೇಂದ್ರ ಬಗ್ಗೆ ಈ ಮಾತನ್ನು ಹೇಳಿದ್ದರು. ವಿಜಯೇಂದ್ರ ಅವರ ಬಗ್ಗೆ ಕೇಳಿದ್ದ ಪ್ರಶ್ನೆಗೆ ಬಿಜೆಪಿಯ ರಾಷ್ಟ್ರೀಯ ಸಂಸದೀಯ ಮಂಡಳಿಯು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ವಿಜಯೇಂದ್ರ ಅವರು ತಮ್ಮ ತಂದೆಯ ಮೌನವನ್ನು ದೌರ್ಬಲ್ಯದ ಸಂಕೇತವೆಂದು ಯಾರೂ ಪರಿಗಣಿಸಬಾರದು ಎಂದು ಹೇಳಿದ್ದಾರೆ.
'ಅವರನ್ನು ( ಬಿಎಸ್ ಯಡಿಯೂರಪ್ಪ ) ಟೀಕಿಸುವವರು ಜಾಗರೂಕರಾಗಿರಬೇಕು' ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.












Click it and Unblock the Notifications